ಬೆಂಗಳೂರು: ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣಕ್ಕೆ 5 ಕೋಟಿ ರೂ.ಗಳ ಮೂಲಧನ ಒದಗಿಸಲಾಗುವುದು ಎಂದು ಘೋಷಿಸಲಾಗಿದ್ದು, ಪೊಲೀಸರ ಕಲ್ಯಾಣಕ್ಕೆ ಸರ್ಕಾರ ಆದ್ಯತೆ ಮೇರೆಗೆ ಕೆಲಸ ಮಾಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೋರಮಂಗಲದ ಪೊಲೀಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಪೊಲೀಸರು ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎನ್ನುವುದು ಜನತೆಯ ಅಪೇಕ್ಷೆ. ಕರ್ನಾಟಕ ಪೊಲೀಸ್ ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿದೆ. ಇಲಾಖೆಯ ಕಾರ್ಯವೈಖರಿ ಉತ್ತಮವಾಗಿದೆ. ಪೊಲೀಸ್ ಗೃಹ 2020 ಕ್ಕೆ ಪೂರ್ಣಗೊಂಡಿದೆ. ನಮ್ಮ ಸರ್ಕಾರ 10 ಸಾವಿರಕ್ಕಿಂತ ಹೆಚ್ಚು ಮನೆಗಳನ್ನು 5000 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಾರಂಭ ಮಾಡಿದ್ದೇವೆ. ಅತಿ ಹೆಚ್ಚು ಪೊಲೀಸ್ ವಸತಿಗೃಹಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ಸುಮಾರು ಶೇ 45 % ರಷ್ಟಿದೆ. 2025 ಪೊಲೀಸ್ ಗೃಹ ಯೋಜನೆ ಪೂರ್ಣಗೊಂಡರೆ ಶೇ 60ಕ್ಕೆ ಹೆಚ್ಚಲಿದೆ. ಅದನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕಿದೆ ಎಂದರು.
ಇದನ್ನೂ ಓದಿ:ಪೊಲೀಸರು ಅಪರಾಧಿಗಳೊಂದಿಗೆ ರಾಜಿಯಿಲ್ಲದೆ ಕೆಲಸ ಮಾಡಿದರೆ ಅಪರಾಧ ಕಡಿಮೆಯಾಗುತ್ತದೆ: ಬೊಮ್ಮಾಯಿ
ಪ್ರಥಮ ಬಾರಿಗೆ 100 ಪೊಲೀಸ್ ಠಾಣೆಗಳಿಗೆ ಅನುಮತಿ ನೀಡಲಾಗಿದೆ. ಈ ವರ್ಷ ವಾಹನಗಳಿಗೆ 50 ಕೋಟಿ ರೂ.ಗಳ ಅನುದಾನ ನೀಡಿದೆ. ಆರೋಗ್ಯ ಕರ್ನಾಟಕದಡಿ ಆರೋಗ್ಯ ರಕ್ಷಣೆಗೆ ಹೆಚ್ಚಿನ ಅನುದಾನ ಬಜೆಟ್ ನಲ್ಲಿ ಮೀಸಲಿರಿಸಿದೆ. 16 ಸಾವಿರಕ್ಕೂ ಹೆಚ್ಚು ಪೊಲೀಸರ ನೇಮಕಾತಿಗೆ ಕ್ರಮ ಕೈಗೊಂಡಿದೆ ಎಂದು ಸಿಎಂ ವಿವರಿಸಿದರು.