ಮೈಸೂರು: ಮೈಸೂರಿನ ಶಕ್ತಿಧಾಮದ ಅಭಿವೃದ್ಧಿ ಕಾರ್ಯಗಳಿಗೆ ಐದು ಕೋಟಿ ರೂ.ಅನುದಾನ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
ಇಲ್ಲಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಶಕ್ತಿಧಾಮದಲ್ಲಿ ಗುರುವಾರ ಸಂಜೆ ಇನ್‌ಫೋಸಿಸ್ ಫೌಂಡೇಶನ್ ಬ್ಲಾಕ್ ಕಟ್ಟಡ ಲೋಕಾರ್ಪಣೆ ಹಾಗೂ ಶಕ್ತಿಧಾಮ ವಿದ್ಯಾ ಶಾಲೆಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತ ನಾಡಿದರು.
ಶಕ್ತಿಧಾಮದ ಯಶಸ್ಸಿನಿಂದ ಇನ್ನಷ್ಟು ಸಂಸ್ಥೆಗಳು ಹುಟ್ಟಿ ಬರಲಿ ಎಂದು ಬೊಮ್ಮಾಯಿ ಆಶಿಸಿದರು. ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ ಹಾಗೂ ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಗಳು ಶಕ್ತಿಧಾಮಕ್ಕೆ ದೊಡ್ಡ ಮಟ್ಟದಲ್ಲಿ ಸಹಕರಿಸಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಧನ್ಯವಾದಗಳನ್ನು ಅರ್ಪಿಸಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಸಚಿವ ಎಸ್.ಟಿ. ಸೋಮಶೇಖರ್, ನಟ ಶಿವರಾಜ ಕುಮಾರ್, ಶಕ್ತಿ ಧಾಮ ಅಧ್ಯಕ್ಷೆ ಗೀತಾ ಶಿವರಾಜಕುಮಾರ್, ಸಂಸದ ಪ್ರತಾಪ ಸಿಂಹ ಸೇರಿ ಹಲವರು ಉಪಸ್ಥಿತರಿದ್ದರು.
ಬಸವರಾಜ ಬೊಮ್ಮಾಯಿ ಅವರಂತಹ ಮುಖ್ಯಮಂತ್ರಿಯನ್ನು ನಾನು ಈವರೆಗೂ ನೋಡಿಯೇ ಇಲ್ಲ. ಅವರು ನಮ್ಮ ಕುಟುಂಬದ ಮೇಲೆ ಅಪಾರ ಪ್ರೀತಿ ಇಟ್ಟಿದ್ದಾರೆ. ಭಾವನೆಗಳನ್ನು ಡ್ರಾಮಾ ಮಾಡಲು ಆಗುವುದಿಲ್ಲ. ಅವರು ಅತ್ಯಂತ ಅಂತಃಕರಣ ಹಾಗೂ ಪ್ರೀತಿಯಿಂದ ನಮ್ಮ ಕುಟುಂಬವನ್ನು ಕಾಣುತ್ತಾರೆ. ●
ಶಿವರಾಜ್‌ಕುಮಾರ್, ನಟ