Advertisement

ವೃಕ್ಷ ಮಾತೆಗೆ 5 ಎಕರೆ ಭೂಮಿ

03:52 PM Dec 17, 2017 | Team Udayavani |

ಬೆಂಗಳೂರು: ವೃಕ್ಷಗಳನ್ನೇ ತನ್ನ ಮಕ್ಕಳಂತೆ ಸಾಕಿದ ಸಾಲುಮರದ ತಿಮ್ಮಕ್ಕ ಅವರಿಗೆ 5 ಎಕರೆ ಜಮೀನು ನೀಡುವ ಪ್ರಸ್ತಾವ ಸರ್ಕಾರದ ಮುಂದಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಹೇಳಿದ್ದಾರೆ.

Advertisement

ವಸಂತ ನಗರದ ಅಂಬೇಡ್ಕರ್‌ ಭವನದಲ್ಲಿ ಶನಿವಾರ ಸಾಲುಮರದ ತಿಮ್ಮಕ್ಕ ಇಂಟರ್‌ ನ್ಯಾಷನಲ್‌ ಫೌಂಡೇಷನ್‌ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸಾಲುಮರದ ತಿಮ್ಮಕ್ಕ ಅವರನ್ನು ಅಭಿನಂದಿಸಿ ವಿಷಯ ಪ್ರಸ್ತಾಪಿಸಿದರು.

ತಿಮ್ಮಕ್ಕನ ಸಾಧನೆಯನ್ನು ಶಾಶ್ವತಗೊಳಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಜಮೀನಿಗಾಗಿ ಕಂದಾಯ ಇಲಾಖೆ ಪರಿಶೀಲನೆ ಮಾಡುತ್ತಿದೆ. ಸದ್ಯದಲ್ಲಿಯೇ ಸರ್ಕಾರ ಈ ಜಮೀನನ್ನು ತಿಮ್ಮಕ್ಕನ ಹೆಸರಿಗೆ ಮಂಜೂರು ಮಾಡಲಿದೆ ಎಂದರು. 

ನರ್ಸರಿ, ವೃದ್ಧಶ್ರಾಮ: ಸರ್ಕಾರ ನೀಡುವ ಜಮೀನಲ್ಲಿ ನರ್ಸರಿ ಮತ್ತು ವೃದ್ಧಶ್ರಾಮ ಹಾಗೂ ತಿಮ್ಮಕ್ಕ ನೆಲೆಸಲು ಮನೆಯನ್ನು
ನಿರ್ಮಿಸುವ ಗುರಿ ಸರ್ಕಾರದ ಮುಂದೆ ಇದೆ. ಈ ನರ್ಸರಿಯಲ್ಲಿ ಉಚಿತವಾಗಿ ಗಿಡಗಳನ್ನು ಜನತೆಗೆ ನೀಡುವ ಕಾರ್ಯಕ್ಕೆ ಚಿಂತಿಸ ಲಾಗಿದ್ದು, ಇದರ ಮೂಲಸೌಕರ್ಯದ ಜವಾಬ್ದಾರಿ ಸರ್ಕಾರ ಹೊರಲಿದೆ. ಈ ವಿಚಾರ ಕುರಿತು ತಿಮ್ಮಕ್ಕ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆ ನಡೆಸಲಿದ್ದಾರೆ ಎಂದರು.

ಹಣಕಾಸಿನ ನೆರವು: ಸಮಾಜಕಲ್ಯಾಣ ಇಲಾಖೆ ಈ ಹಿಂದೆ ಸಾಲುಮರದ ತಿಮ್ಮಕ್ಕನ ಹೆಸರಿನಲ್ಲಿ 1 ಕೋಟಿ ರೂ.ಬ್ಯಾಂಕ್‌ ನಲ್ಲಿ ಜಮೆ ಮಾಡಲು ಮುಂದಾಗಿತ್ತು.ಆದರೆ ತಿಮ್ಮಕ್ಕ ಅವರನ್ನು ನೋಡಿಕೊಳ್ಳುತ್ತಿರುವ ಬಳ್ಳೂರ್‌ ಉಮೇಶ್‌ ಸಂಪೂರ್ಣ ಅನುದಾನದ ಬೇಡಿಕೆ ಇಟ್ಟಿದ್ದರು, ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ಹಣಕಾಸಿನ ನೆರವಿನ ಬಗ್ಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು. 

Advertisement

ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ಹಿರಿಯ ಸಾಹಿತಿ ಕೆ.ಎಸ್‌.ನಿಸಾರ್‌ ಅಹಮದ್‌ ಸೇರಿದಂತೆ ಹಲವು ಸಾಧಕರಿಗೆ “ಸಾಲುಮರದ ತಿಮ್ಮಕ್ಕ ರಾಷ್ಟ್ರೀಯ ಹಸಿರು ಪ್ರಶಸ್ತಿ’ ನೀಡಿ ಸತ್ಕರಿಸಲಾಯಿತು.

ಪ್ರಶಸ್ತಿ ಅಡವಿಟ್ಟು ಆಸ್ಪತ್ರೆಯ ಬಿಲ್‌ ಪಾವತಿಸಿದ್ದ ತಿಮ್ಮಕ್ಕ!: ಸಾಲು ಮರದ ತಿಮ್ಮಕ್ಕ ಆರ್ಥಿಕವಾಗಿ ಶಕ್ತರಾಗಿಲ್ಲ. ಆಸ್ಪತ್ರೆಯ ಬಿಲ್‌ ಪಾವತಿಸಲಾಗದೆ ಈ ಹಿಂದೆ ತಮಗೆ ಪ್ರಶಸ್ತಿ ರೂಪದಲ್ಲಿ ಬಂದ ಬಂಗಾರದ ಪದಕಗಳನ್ನೇ ಅಡವಿಟ್ಟು ಬಿಲ್‌ ಪಾವತಿಸಿದ್ದರು. ಸಂಸದ ರಾಜೀವ್‌ ಚಂದ್ರಶೇಖರ್‌ ಸೇರಿದಂತೆ ಹಲವರು ಅಜ್ಜಿಗೆ ನೆರವಾಗಿದ್ದಾರೆ. ಸೂರಿಲ್ಲದೆ ಬಾಡಿಗೆ ಮನೆಯಲ್ಲಿ ಬದುಕುತ್ತಿರುವ ಜೀವಿಗೆ
ಆಶ್ರಯವಾಗಬೇಕು ಎಂದು ಸಾಲು ಮರದ ತಿಮ್ಮಕ್ಕ ಅವರನ್ನು ಸಲಹುತ್ತಿರುವ ಬಳ್ಳೂರು ಉಮೆಶ್‌ ಮನವಿ ಮಾಡಿದರು.

ಭೂಮಿ ನೀಡಲು ಬೆಲೆ ಅಡ್ಡಿ “ಚಿತ್ರದುರ್ಗ ಭಾಗದಲ್ಲಿ ಭೂಮಿ ಕೇಳಿದರೆ ನಾನೇ 10 ಎಕರೆ ಭೂಮಿಯನ್ನು ನೀಡುತ್ತಿದ್ದೆ. ಆದರೆ ತಿಮ್ಮಕ್ಕ ಅವರು ಕುಣಿಗಲ್‌, ಮಾಗಡಿ ಹಾಗೂ ಬೆಂಗಳೂರು ವ್ಯಾಪ್ತಿಯಲ್ಲಿ ಕೇಳುತ್ತಿದ್ದಾರೆ. ಈ ಭಾಗದಲ್ಲಿ ಭೂಮಿಯ ಬೆಲೆ ಗನನ ಮುಖೀಯಾಗಿದೆ. ಹಾಗಾಗಿ ಸರ್ಕಾರದಿಂದ ಭೂಮಿ ನೀಡಲು ವಿಳಂಬವಾಗಿದೆ,’ ಎಂದ ಸಚಿವ ಆಂಜನೇಯ ಹೇಳಿದರು.

ಅರಣ್ಯ ಇಲಾಖೆ ಒಂದೇ ಜಾತಿಯ ಗಿಡಗಳನ್ನು ನೆಡುವುದನ್ನು ಮೊದಲು ಕೈಬಿಡಬೇಕು. ನೀಲಗಿರಿ ಜಾತಿಯ ಗಿಡಗಳನ್ನು ಬೆಳೆಯಲು ಸರ್ಕಾರ ಅವಕಾಶ ನೀಡಬಾರದು. ಹಾಲಿ ಇರುವ ನೀಲ ಗಿರಿ ಗಿಡಗಳನ್ನು ಕಿತ್ತೂಗೆಯಬೇಕು.
 ●ಎಚ್‌.ಎಸ್‌.ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ

Advertisement

Udayavani is now on Telegram. Click here to join our channel and stay updated with the latest news.

Next