ಬೆಂಗಳೂರು: ದೇಶಾದ್ಯಂತ ಇತ್ತೀಚೆಗೆ ನಡೆದ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನದಡಿ ರಾಷ್ಟ್ರವ್ಯಾಪಿ 5.81 ಕೋಟಿ ಮಂದಿ ಪಕ್ಷದ ಸದಸ್ಯತ್ವ ಪಡೆದಿದ್ದಾರೆ. ಕರ್ನಾಟಕದಲ್ಲಿ 27.77 ಲಕ್ಷ ಮಂದಿ ಸದಸ್ಯತ್ವ ಪಡೆಯುವ ಮೂಲಕ ಐದನೇ ಸ್ಥಾನದಲ್ಲಿದೆ.
ದೆಹಲಿಯಲ್ಲಿ ಗುರುವಾರ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸದಸ್ಯತ್ವ ಅಭಿಯಾನ ಬೈಠಕ್‌ನಲ್ಲಿ ಪಾಲ್ಗೊಂಡಿದ್ದ ರಾಜ್ಯ ಬಿಜೆಪಿ ಸದಸ್ಯತ್ವ ಅಭಿಯಾನದ ಸಂಚಾಲಕರಾದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು ರಾಜ್ಯದಲ್ಲಿ 27.77 ಲಕ್ಷ ಮಂದಿ ಸದಸ್ಯರಾಗಿದ್ದು, ಸದಸ್ಯತ್ವ ನೋಂದಣಿಯಲ್ಲಿ ದೇಶದಲ್ಲೇ ಕರ್ನಾಟಕ ಐದನೇ ಸ್ಥಾನದಲ್ಲಿದೆ ಎಂದು ಹೇಳಿದರು.
ಸಭೆಯ ಬಳಿಕ ಪ್ರತಿಕ್ರಿಯಿಸಿದ ರವಿಕುಮಾರ್, ದೇಶಾದ್ಯಂತ ಈ ಹಿಂದೆ 11 ಕೋಟಿ ಸದಸ್ಯರನ್ನು ಬಿಜೆಪಿ ಹೊಂದಿತ್ತು. ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ 5.81 ಕೋಟಿ ಮಂದಿ ಹೊಸದಾಗಿ ಸದಸ್ಯತ್ವ ಪಡೆದಿದ್ದಾರೆ. 35 ಲಕ್ಷ ಸದಸ್ಯತ್ವ ನೋಂದಣಿ ಮೂಲಕ ಗುಜರಾತ್ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ರಾಜ್ಯದಲ್ಲಿ 27.77 ಲಕ್ಷ ಸದಸ್ಯತ್ವ ನೋಂದಣಿಯಾಗಿರುವ ಬಗ್ಗೆ ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಯಿತು ಎಂದು ಹೇಳಿದರು.
ಸದಸ್ಯತ್ವ ನೋಂದಣಿ ಅಭಿಯಾನದ ಬಳಿಕ ಸದ್ಯದಲ್ಲೇ ಸಕ್ರಿಯ ಕಾರ್ಯಕರ್ತರನ್ನು ಗುರುತಿಸುವ ಕಾರ್ಯ ನಡೆಯಲಿದೆ. ಪ್ರತಿ ಮತಗಟ್ಟೆಯಲ್ಲಿ ಇಬ್ಬರು ಸಕ್ರಿಯ ಕಾರ್ಯಕರ್ತರನ್ನು ಗುರುತಿಸಲಾಗುವುದು. ರಾಜ್ಯದಲ್ಲಿ ಸುಮಾರು 58,000 ಮತಗಟ್ಟೆಗಳಿದ್ದು, ಒಂದು ಲಕ್ಷ ಸಕ್ರಿಯ ಕಾರ್ಯಕರ್ತರನ್ನು ಗುರುತಿಸಲಾಗುವುದು ಎಂದರು.
ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಸದಸ್ಯತ್ವ ಅಭಿಯಾನದ ರಾಷ್ಟ್ರೀಯ ಸಂಚಾಲಕ ಶಿವರಾಜ್ ಸಿಂಗ್ ಚವ್ಹಾಣ್, ರಾಷ್ಟ್ರೀಯ ಸಂಘಟನಾ ಚುನಾವಣಾ ಉಸ್ತುವಾರಿ ರಾಧಾಮೋಹನ್ ಸಿಂಗ್, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ರಾಜ್ಯ ಬಿಜೆಪಿ ಸದಸ್ಯತ್ವ ಅಭಿಯಾನದ ಸಹಸಂಚಾಲಕ ಜಗದೀಶ ಹಿರೇಮನಿ ಉಪಸ್ಥಿತರಿದ್ದರು.