ಬೆಂಗಳೂರು: ಆದಾಯ ತೆರಿಗೆ, ದಂಡ ಹಾಗೂ ಬಡ್ಡಿ ಪಾವತಿಸದೆ ವಂಚಿಸಿದ ರಿಯಲ್ ಎಸ್ಟೇಟ್ ಉದ್ಯಮಿ, ರಾಜಕೀಯ ಮುಖಂಡ ಪ್ರಭಾಕರ್ ರೆಡ್ಡಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದೂರಿನ ಮೇರೆಗೆ ಹೈಗ್ರೌಂಡ್ಸ್ ಠಾಣೆ ಪೊಲೀಸರು ಬುಧವಾರ ಸಂಜೆ ವಶಕ್ಕೆ ಪಡೆದು, ಆದಾಯ ತೆರಿಗೆ ವಸೂಲಾತಿ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಪ್ರಭಾಕರ್ ರೆಡ್ಡಿಯು ಆದಾಯ ತೆರಿಗೆ, ದಂಡ ಸೇರಿ 5.30 ಕೋಟಿ ರೂ. ಹಾಗೂ ಬಡ್ಡಿ ಪಾವತಿಸಬೇಕಿತ್ತು. ಆದರೆ, ನಿಗದಿತ ಸಮಯಕ್ಕೆ ಕಟ್ಟದೆ ನಿರ್ಲಕ್ಷ್ಯ ಮಾಡಿದ್ದರು. ಈ ಸಂಬಂಧ ಹಲವು ಬಾರಿ ನೋಟಿಸ್ ಜಾರಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಭಾಕರ್ ರೆಡ್ಡಿ ಬಂಧಿಸುವಂತೆ ಹೈಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಸಂಬಂಧ ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಆರೋಪಿಯನ್ನು ಪೊಲೀಸರ ಸಹಾಯದಿಂದ ವಶಕ್ಕೆ ಪಡೆದು, ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿ ಕೇಂದ್ರ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದರು.
ಕೆಲ ದಿನಗಳ ಹಿಂದೆ ಆದಾಯ ತೆರಿಗೆ ವಂಚನೆ ಆರೋಪದ ಮೇಲೆ ಪ್ರಭಾಕರ್ ರೆಡ್ಡಿ ಮನೆ ಹಾಗೂ ಇತರೆಡೆ ಶೋಧ ನಡೆಸಲಾಗಿತ್ತು. ಈ ವೇಳೆ ಕೋಟ್ಯಂತರ ರೂ.ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು, ಇದನ್ನು ಪ್ರಭಾಕರ್ ರೆಡ್ಡಿ
ಕೂಡ ಒಪ್ಪಿಕೊಂಡಿದ್ದರು. ಹೀಗಾಗಿ ತೆರಿಗೆ ಪಾವತಿ ಮಾಡುವಂತೆ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು.
ಈ ಮಧ್ಯೆ ಆರೋಪಿ ಪ್ರಭಾಕರ್ ರೆಡ್ಡಿ 2013 ಮತ್ತು 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಒಮ್ಮೆ ಲೋಕಸಭೆ
ಚುನಾವಣೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಪರಿಶೀಲಿಸಿದಾಗ, ಅಫಿಡವಿಟ್‌ನಲ್ಲಿ ಉಲ್ಲೇಖೀಸಿದ್ದ ಆದಾಯಕ್ಕೂ ತೆರಿಗೆ ಪಾವತಿ ಮಾಡಿರಲಿಲ್ಲ. ಅಷ್ಟೇ ಅಲ್ಲದೆ, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕೋಟ್ಯಂತರ ರೂ. ಹೂಡಿಕೆ ಮಾಡಿರುವುದು ಕಂಡು ಬಂದಿದ್ದು, ಇದ್ಯಾವುದಕ್ಕೂ ತೆರಿಗೆ ಪಾವತಿ ಮಾಡಿರಲಿಲ್ಲ. ಈ ಸಂಬಂಧ ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ಪ್ರತ್ಯೇಕ ವಿಚಾರಣೆ ಕೂಡ ನಡೆಯುತ್ತಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.