ವರದಿ: ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ: ಕೋವಿಡ್ ಎರಡನೇ ಅಲೆಯ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಸ್‌ನಿಲ್ದಾಣದ ವಾಣಿಜ್ಯ ಮಳಿಗೆಗಳ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳ 5.28 ಕೋಟಿ ರೂ. ಪರವಾನಿಗೆ ಶುಲ್ಕ(ಬಾಡಿಗೆ)ಯನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮನ್ನಾ ಮಾಡಿದೆ.
ವಾಯವ್ಯ ಸಾರಿಗೆ ಸಂಸ್ಥೆಗೆ ನಿಲ್ದಾಣಗಳಲ್ಲಿ ವಾಣಿಜ್ಯ ಮಳಿಗೆ, ಜಾಹೀರಾತು ಹಾಗೂ ಬಸ್‌ಗಳ ಮೇಲೆ ಜಾಹೀರಾತು ಸೇರಿದಂತೆ ಇತರೆ ಶುಲ್ಕ ರೂಪದ ಆದಾಯ ಮೂಲಗಳಿವೆ. ಆದರೆ ಕೋವಿಡ್ ಲಾಕ್‌ಡೌನ್ ಸಾರಿಗೆ ಆದಾಯದ ಜತೆಗೆ ಇತರೆ ಎಲ್ಲಾ ಆದಾಯ ಮೂಲಕ್ಕೂ ಬರೆ ಹಾಕಿದೆ. ಆದರೆ ಹರಾಜಿನಲ್ಲಿ ದುಬಾರಿ ಬೆಲೆಗೆ ವಾಣಿಜ್ಯ ಮಳಿಗೆ ಪಡೆದವರ ಪರಿಸ್ಥಿತಿ ಹೇಳತೀರದಾಗಿತ್ತು. ಹೀಗಾಗಿ ಮೊದಲ ಅಲೆ ಸಂದರ್ಭ ವಿನಾಯಿತಿ ನೀಡಿದಂತೆ ಈ ಬಾರಿಯೂ ನಿಲ್ದಾಣಗಳಲ್ಲಿನ ಅಂಗಡಿ, ಕ್ಯಾಂಟೀನ್ ನಡೆಸುತ್ತಿದ್ದವರ ನೆರವಿಗೆ ಬರಲಾಗಿದೆ.
ಲಾಕ್‌ಡೌನ್, ಬಸ್‌ಗಳ ಸಂಚಾರ ಹಾಗೂ ಪ್ರಯಾಣಿಕರ ದಟ್ಟಣೆ ಆಧಾರದ ಮೇಲೆ ಮೂರು ತಿಂಗಳಿಗೆ ಶೇಕಡಾವಾರು ಪರವಾನಗಿ ಶುಲ್ಕ ವಿನಾಯಿತಿ ಘೋಷಿಸಿದ್ದು, ಏಪ್ರಿಲ್ ತಿಂಗಳಲ್ಲಿ ಶೇ.50, ಮೇ-ಶೇ.100, ಜೂನ್ ತಿಂಗಳಲ್ಲಿ ಶೇ.50 ವಿನಾಯಿತಿ ಕಲ್ಪಿಸಿದೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಚಿಕ್ಕೋಡಿ, ಉತ್ತರ ಕನ್ನಡ, ಗದಗ, ಹಾವೇರಿ, ಬಾಗಲಕೋಟೆ ಸೇರಿದಂತೆ ಎಂಟು ವಿಭಾಗಗಳ ವ್ಯಾಪ್ತಿಯ ನಿಲ್ದಾಣಗಳಲ್ಲಿ ಒಟ್ಟು 1189 ವಾಣಿಜ್ಯ ಮಳಿಗೆ ಹಾಗೂ ಕ್ಯಾಂಟೀನ್‌ಗಳಿದ್ದು, ಪ್ರತಿ ತಿಂಗಳು 2.64 ಕೋಟಿ ರೂ. ಪರವಾನಗಿ ಶುಲ್ಕದ ಆದಾಯವಿದೆ. ಇದರೊಂದಿಗೆ ನಿಲ್ದಾಣಗಳಲ್ಲಿ ಜಾಹೀರಾತು, ಬಸ್ ಗಳ ಮೇಲೆ ಜಾಹೀರಾತು ಮೂಲಕ ಸುಮಾರು 35 ಲಕ್ಷ ರೂ. ಆದಾಯವಿದೆ. ಆದರೆ ಒಂದೂವರೆ ತಿಂಗಳು ಲಾಕ್‌ಡೌನ್ ಉಳಿದ ಅವಧಿಗೆ ಪ್ರಯಾಣಿಕರ ಸಂಖ್ಯೆ ಕಡಿಮೆಯಿದ್ದ ಹಿನ್ನೆಲೆಯಲ್ಲಿ ವಾಣಿಜ್ಯ ಮಳಿಗೆ ಶುಲ್ಕದಲ್ಲಿ ಏಪ್ರಿಲ್ ತಿಂಗಳಲ್ಲಿ 1.32 ಕೋಟಿ ರೂ.(ಶೇ.50), ಮೇ 2.64 ಕೋಟಿ ರೂ.(ಶೇ.100)ಹಾಗೂ ಜೂನ್-1.32 ಕೋಟಿ ರೂ.(ಶೇ.100) ವಿನಾಯಿತಿ ಸೇರಿ ಮೂರು ತಿಂಗಳಲ್ಲಿ 5.28 ಕೋಟಿ ರೂ. ಹಾಗೂ ಜಾಹೀರಾತಿಗೆ ಸಂಬಂಧಿಸಿದಂತೆ ಸುಮಾರು 70ಲಕ್ಷ ರೂ. ವಿನಾಯಿತಿ ನೀಡಲಾಗಿದೆ. ಇದರಿಂದ ಸಂಕಷ್ಟದಲ್ಲಿದ್ದ ಅಂಗಡಿಕಾರರು ಕೊಂಚ ಉಸಿರಾಡುವಂತಾಗಿದೆ.
ಇನ್ನೂ ಸಂಕಷ್ಟದ ಸ್ಥಿತಿ: ಎರಡನೇ ಅಲೆ ಮುಗಿದು ಪರಿಸ್ಥಿತಿ ಸಹಜ ಸ್ಥಿತಿಯತ್ತ ವಾಲುತ್ತಿದೆ ಎನ್ನುವಷ್ಟರಲ್ಲಿ ಮೂರನೇ ಅಲೆಯ ಆತಂಕ ಶುರುವಾಗಿದೆ. ಪ್ರಯಾಣಿಕರ ಸಂಖ್ಯೆಯಲ್ಲಿ ಒಂದಿಷ್ಟು ಏರಿಳಿತದಿಂದ ನಿಲ್ದಾಣದಲ್ಲಿ ವ್ಯಾಪಾರ ಇಲ್ಲದಂತಾಗಿದ್ದು, ಜುಲೈ ತಿಂಗಳಲ್ಲಿ ಒಂದಿಷ್ಟು ಬಾಡಿಗೆ ವಿನಾಯಿತಿ ನೀಡಬೇಕು ಎಂಬುದು ಅಂಗಡಿಕಾರರ ಬೇಡಿಕೆಯಾಗಿದೆ. ಮಹಾರಾಷ್ಟ್ರ-ಗೋವಾ ರಾಜ್ಯಗಳಿಗೆ ಬಸ್‌ಗಳು ಹಾಗೂ ಪ್ರಯಾಣಿಕರು ಕಡಿಮೆಯಾಗಿದ್ದಾರೆ. ಸಾಮಾನ್ಯ ಸಂದರ್ಭ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿರುತ್ತದೆ. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್ ಪರಿಣಾಮ ಈ ಸಂಖ್ಯೆ ಮತ್ತಷ್ಟು ಕಡಿಮೆಯಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬಾಡಿಗೆ ತುಂಬುವುದು ಕಷ್ಟವಾಗಲಿದ್ದು, ಜೀವನ ನಡೆಸುವುದು ಕಷ್ಟ ಎನ್ನುವುದು ಅಂಗಡಿಕಾರರ ಅಳಲಾಗಿದೆ.
ಮೊದಲ ಅಲೆಯಲ್ಲಿ 7.15 ಕೋಟಿ ರೂ: ಕಳೆದ ವರ್ಷ ಏಪ್ರಿಲ್, ಮೇ, ಜೂನ್ ಹಾಗೂ ಜುಲೈ ತಿಂಗಳು ಸೇರಿ 7.15 ಕೋಟಿ ರೂ. ವಿನಾಯಿತಿ ನೀಡಲಾಗಿತ್ತು. ಮೊದಲ ಅಲೆ ಸಂದರ್ಭ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿದ್ದ ತೀವ್ರ ಭಯದಿಂದ ಬಸ್‌ಗಳ ಕಾರ್ಯಾಚರಣೆ ಶುರುವಾದರೂ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆಯಿತ್ತು. ಈ ಬಾರಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಇದ್ದರೂ ಬಸ್‌ಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಪ್ರಯಾಣಿಕರ ದಟ್ಟಣೆ ಸಹಜ ಸ್ಥಿತಿಗೆ ಬಂದಿಲ್ಲ.