Advertisement

ಡಿಜಿಟಲ್‌ ಇ-ಗ್ರಂಥಾಲಯಕ್ಕೆ ಜಿಲ್ಲೆಯಲ್ಲಿ 5.22 ಲಕ್ಷ ಮಂದಿ ನೋಂದಣಿ

09:27 PM Sep 03, 2021 | Team Udayavani |

ಉಡುಪಿ: ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ಪ್ರಾರಂಭಿಸಿದ “ಡಿಜಿಟಲ್‌ ಪಬ್ಲಿಕ್‌ ಲೈಬ್ರೆರಿ’ ( ಸಾರ್ವಜನಿಕ ಇ-ಗ್ರಂಥಾಲಯಕ್ಕೆ)ಗೆ ಉಡುಪಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದುವರೆಗೆ ಜಿಲ್ಲೆಯಲ್ಲಿ 5 ಲಕ್ಷಕ್ಕೂ ಅಧಿಕ ಜನರು ನೋಂದಾಯಿಸಿಕೊಂಡಿದ್ದಾರೆ.

Advertisement

2020ರ ಫೆಬ್ರವರಿಯಲ್ಲಿ ಇಲಾಖೆ ಆರಂಭಿಸಿದ ಈ ಡಿಜಿಟಲ್‌ ಗ್ರಂಥಾಲಯ ಸೌಲಭ್ಯಕ್ಕೆ ಸಾಹಿತ್ಯ ಪ್ರೇಮಿಗಳು, ವಿದ್ಯಾರ್ಥಿಗಳಿಂದ ವ್ಯಾಪಕ ಸ್ಪಂದನೆ ದೊರೆತಿದೆ. ಈ ಡಿಜಿಟಲ್‌ ಗ್ರಂಥಾಲಯ ಜಾರಿಗೆ ಬಂದ ಈವರೆಗಿನ ಒಟ್ಟು 17 ತಿಂಗಳಲ್ಲಿ ಒಟ್ಟು 5,22,281ಮಂದಿ ನೋಂದಣಿಯಾಗಿ ಇ-ಬುಕ್ಸ್‌, ವೀಡಿಯೋ ಮತ್ತು ಲಿಂಕ್ಸ್‌ ಸೇರಿದಂತೆ ಹೊಸದಾಗಿ ಅಳವಡಿಸಿದ ಇ-ಕಂಟೆಂಟ್‌ ಓದುಗರು ಉಪಯೋಗಿಸಿದ್ದಾರೆ.

ಉಡುಪಿ ಜಿಲ್ಲಾ ಗ್ರಂಥಾಲಯದಲ್ಲಿ 2,63,229 ಮಂದಿ, ಕುಂದಾಪುರ ಗ್ರಂಥಾಲಯ 55,713, ಕಾರ್ಕಳ ಗ್ರಂಥಾಲಯ 52,377, ಸಾಲಿಗ್ರಾಮ ಗ್ರಂಥಾಲಯ 39,165, ಕಾಪು ಪುರಸಭೆ ಗ್ರಂಥಾಲಯ 1,04,521, ಬೈಂದೂರು ಪುರಸಭೆ ಗ್ರಂಥಾಲಯ 557, ಹೆಬ್ರಿ ಗ್ರಂಥಾಲಯ 1,209, ನಗರ ಕೇಂದ್ರ ಗ್ರಂಥಾಲಯ 5,431 (+ದೊಡ್ಡಣಗುಡ್ಡೆ ಗ್ರಂಥಾಲಯ 79) ಮಂದಿ ಸೇರಿದಂತೆ ಒಟ್ಟು 5,22,281 ಮಂದಿ ನೋಂದಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ:ಮನೆ ಬಾಗಿಲಿಗೆ ಮಾದಕ ವಸ್ತುಗಳು : ಸಿಸಿಬಿ ಪೊಲೀಸರಿಂದ ಜಾರ್ಖಂಡ್‌ ಮೂಲದ ಇಬ್ಬರ ಬಂಧನ

ಉಡುಪಿಗೆ ಆರನೇ ಸ್ಥಾನ
ರಾಜ್ಯದ ನಗರ (26), ತಾಲೂಕು (216) ಹಾಗೂ ಜಿಲ್ಲೆಗಳು (30) ಸೇರಿದಂತೆ ಒಟ್ಟು ರಾಜ್ಯದಲ್ಲಿರುವ 272 ಗ್ರಂಥಾಲಯಗಳಲ್ಲಿ ಓದುಗರಿಗೆ ಈ ಡಿಜಿಟಲ್‌ ಆವೃತ್ತಿ ಲಭ್ಯವಿದೆ. ಇದರ ಲಾಭ ಪಡೆದುಕೊಳ್ಳಲು ನೋಂದಣಿ ಯಾದವರ ಪೈಕಿ ಬೆಂಗಳೂರು ನಗರ (17.94 ಲಕ್ಷ), ದ.ಕ. (17.13 ಲಕ್ಷ), ಕಲಬುರಗಿ (16.68 ಲಕ್ಷ), ಹಾಸನ (10.39ಲಕ್ಷ), ಗದಗ (8.97 ಲಕ್ಷ) ಉಡುಪಿ ಜಿಲ್ಲೆಯು (5.22 ಲಕ್ಷ) ಕ್ರಮವಾಗಿ ಕ್ರಮವಾಗಿ ಒಂದರಿಂದ ಆರನೇ ಸ್ಥಾನವನ್ನು ಪಡೆದುಕೊಂಡಿದೆ.

Advertisement

ವಿದ್ಯಾರ್ಥಿಗಳು ನೋಂದಣಿ
ಇ -ಸಾರ್ವಜನಿಕ ಗ್ರಂಥಾ ಲಯದಲ್ಲಿ 1,18,000 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಅವರಿಂದ ನಮ್ಮ ಕರ್ನಾಟಕ, ಉತ್ತರ ಭಾರತದ ಪ್ರಮುಖ ರಾಜಮನೆತನಗಳು, ಸಂವಿಧಾನದ ತಿದ್ದುಪಡಿ, ಸ್ವಾತಂತ್ರ್ಯ ಹೋರಾಟ, ಪ್ರಾಚೀನ ನಾಗರಿಕತೆಗಳು, ಪ್ರಭುತ್ವ ಕುರಿತ ವೀಡಿಯೋಗಳನ್ನು ವಿದ್ಯಾರ್ಥಿಗಳು ವೀಕ್ಷಣೆ ಮಾಡಿದ್ದಾರೆ. ಇತರರಿಂದ ಸಾಹಿತ್ಯ, ವಿಜ್ಞಾನ, ಕಲೆ, ತಾಂತ್ರಿಕತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಹೆಚ್ಚಿನ ವೀಡಿಯೋಗಳ ವೀಕ್ಷಣೆಯಾಗಿದೆ. ಕೆಎಎಸ್‌ ಸೇರಿದಂತೆ ಇತರ ಸ್ಪರ್ಧಾತ್ಮಕ ವಿಷಯಗಳಿಗೆ ಸಂಬಂಧಿಸಿದ ಇ-ಪುಸ್ತಕ ಬಳಕೆ ಮಾಡಿದ್ದಾರೆ.

ನೋಂದಣಿ ಹೇಗೆ?
ಗೂಗಲ್‌ ಕ್ರೋಮ್‌ನಲ್ಲಿ www.karnatakadigitalpubliclibrary.org ಟೈಪ್‌ ಮಾಡಬೇಕು. ಅನಂತರ ಲಾಗಿನ್‌/ ರಿಜಿಸ್ಟರ್‌ ಬಟನ್‌ ಆಯ್ಕೆ ಮಾಡಿ “ಈಗ ರಚಿಸಿ’ ಎನ್ನುವುದರ ಮೇಲೆ ಕ್ಲಿಕ್‌ ಮಾಡಬೇಕು. ಹೆಸರು, ಮೊಬೈಲ್‌ ಸಂಖ್ಯೆ, ಇಮೇಲ್‌ ಐಡಿ ನೀಡಿ ಡ್ರಾಪ್‌ಡೌನ್‌ ಪರಿವಿಡಿಯಿಂದ ಗ್ರಂಥಾಲಯವನ್ನು ಆಯ್ಕೆ ಮಾಡಿ (ನೋಂದಣಿ ಪ್ರಕ್ರಿಯೆಗೆ ಗ್ರಂಥಾಲಯವನ್ನು ಆಯ್ಕೆ ಮಾಡಬೇಕು) ಸೈನ್‌ಆಪ್‌ ಕ್ಲಿಕ್‌ ಮಾಡಬೇಕು. ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿ, ಪಾಸ್‌ವರ್ಡ್‌ ನಮೂದಿಸಿ ಸೈನ್‌ ಆಪ್‌ ಮಾಡಬೇಕು. ಅನಂತರ ಜನರು ಮೊಬೈಲ್‌ ಅಥವಾ ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಬಹುದು. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಇ-ಸಾರ್ವಜನಿಕ ಗ್ರಂಥಾಲಯ ಆ್ಯಪ್‌ನಲ್ಲಿ ಸಹ ಪುಸ್ತಕಗಳನ್ನು ಓದಬಹುದಾಗಿದೆ.

ಡಿಜಿಟಲ್‌ ಗ್ರಂಥಾಲಯ ಯಶಸ್ವಿ
ಕೋವಿಡ್‌ ಅನಂತರ ಜಿಲ್ಲೆಯಲ್ಲಿ ಇ- ಸಾರ್ವಜನಿಕ ಗ್ರಂಥಾಲಯದ ಬಳಕೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಮುಂದಿನ ದಿನದಲ್ಲಿ ನೋಂದಣಿಯಾಗುವವರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ| ಸತೀಶ್‌ ಕುಮಾರ್‌ ಹೊಸಮನಿ ಅವರ ಸತತ ಪ್ರಯತ್ನದ ಫ‌ಲದಿಂದ ಡಿಜಿಟಲ್‌ ಗ್ರಂಥಾಲಯ ಯಶಸ್ವಿಯಾಗಿದೆ.
-ನಳಿನಿ ಜಿ.ಐ., ಮುಖ್ಯ ಗ್ರಂಥಾಲಯಧಿಕಾರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next