ಬಳ್ಳಾರಿ: ನಗರದ ಬಳ್ಳಾರಿ ಸೈಕ್ಲಿಸ್ಟ್ ಮತ್ತು ರನ್ನರ್ಸ್ ಫೌಂಡೇಷನ್ ಸಂಸ್ಥೆಯು ಜಿಂದಾಲ್ ಸಹಯೋಗದಲ್ಲಿ ಇದೇ ಜುಲೈ 24ರಂದು “ಜೆಎಸ್‌ಡಬ್ಲ್ಯೂ ಸ್ಟೀಲ್ ಸಿಟಿ ರನ್-2022′ ಹೆಸರಲ್ಲಿ 5 ಮತ್ತು 10 ಕಿಮೀ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಷನ್‌ನ ಅಧ್ಯಕ್ಷ ಡಾ| ಬಿ.ಕೆ.ಸುಂದರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೀವನಶೈಲಿ ಸಂಬಂಧಿ ತ ಮಧುಮೇಹ, ಅಧಿಕ ರಕ್ತದೊತ್ತಡ, ಸ್ಥೂಲಕಾಯತೆ ಸೇರಿ ಕಾಯಿಲೆಗಳು ಸಾಮಾನ್ಯ ಜನರನ್ನೂ ಕಾಡುತ್ತಿರುವ ಕಾಯಿಲೆಗಳಾಗಿವೆ.
ನಿಯಮಿತ ವ್ಯಾಯಾಮ, ಸೈಕ್ಲಿಂಗ್, ಚುರುಕಾದ ನಡಿಗೆ, ಓಟದಂತಹ ಕೆಲವು ಚಟುವಟಿಕೆಗಳಿಂದ ಈ ಕಾಯಿಲೆಗಳನ್ನು ನಿಯಂತ್ರಿಸಬಹುದು. ಬಳ್ಳಾರಿ ಸೈಕ್ಲಿಂಗ್ ಕ್ಲಬ್ ಆರಂಭಿಸಲಾಗಿದ್ದು, ವಿಶ್ವ ಮಧುಮೇಹ ದಿನ, ವಿಶ್ವ ಹೃದಯ ದಿನ, ವಿಶ್ವ ಏಡ್ಸ್ ದಿನಗಳಂದು ಪ್ರತಿವರ್ಷವೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಆರೋಗ್ಯ ಕುರಿತು ಅರಿವು ಮೂಡಿಸಲಾಗುತ್ತಿದೆ. ಪ್ರಸಕ್ತ ವರ್ಷ ಜುಲೈ 1ರಂದು ವೈದ್ಯರ ದಿನಾಚರಣೆ ಇರುವುದರಿಂದ ಜುಲೈ 24ರಂದು ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗಿದೆ ಎಂದವರು ವಿವರಿಸಿದರು.
ಜುಲೈ 24ರಂದು ಭಾನುವಾರ ನಗರದ ಸಂಗನಕಲ್ಲು ರಸ್ತೆಯಲ್ಲಿನ ವಿಜxಮ್ ಲ್ಯಾಂಡ್ ಶಾಲೆಯಲ್ಲಿ ಮ್ಯಾರಥಾನ್‌ಗೆ ಚಾಲನೆ ನೀಡಲಾಗುತ್ತದೆ. 5 ಕಿಮೀ ಸ್ಪರ್ಧೆಯಲ್ಲಿ ಭಾಗವಹಿಸುವರು 2.5 ಕಿಮೀವರೆಗೆ ಹೋಗಿ ಅಲ್ಲಿಂದ ವಾಪಸ್ ಶಾಲೆ ಮೈದಾನಕ್ಕೆ ತಲುಪುವ ಮೂಲಕ 5 ಕಿಮೀ ನಡಿಗೆಯನ್ನು ಪೂರ್ಣಗೊಳಿಸಬೇಕು. ಅದೇ ರೀತಿ 10 ಕಿಮೀ ಸ್ಪರ್ಧೆಯಲ್ಲಿ ಭಾಗವಹಿಸುವವರು ಮೋಕಾ ರಸ್ತೆಯಲ್ಲಿ 5 ಕಿಮೀ ನಡೆದು ವಾಪಸ್ ಶಾಲೆ ಮೈದಾನಕ್ಕೆ ಬರುವ ಮೂಲಕ ಸ್ಪರ್ಧೆಯನ್ನು ಪೂರ್ಣಗೊಳಿಸಬೇಕು. ರಸ್ತೆಯುದ್ದಕ್ಕೂ ನೀರು ಕುಡಿಯಲು ಜಲಕೇಂದ್ರ, ತುರ್ತು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ವ್ಯವಸ್ಥೆ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದವರು ತಿಳಿಸಿದರು.
ಮ್ಯಾರಥಾನ್‌ನಲ್ಲಿ ಭಾಗವಹಿಸಲು ಈಗಾಗಲೇ 1050 ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಕೊಪ್ಪಳ, ರಾಯಚೂರು, ಬೆಂಗಳೂರು ಸೇರಿ ಮಹಾರಾಷ್ಟ್ರ, ಚಂಡಿಘಡದಿಂದಲೂ ಆಸಕ್ತರು ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. 5 ಕಿಮೀಗೆ 200, 10 ಕಿಮೀ ಸ್ಪರ್ಧಾರ್ಥಿಗಳಿಗೆ 300 ರೂ. ನೋಂದಣಿ ಶುಲ್ಕ ವಿಧಿಸಲಾಗಿದೆ. ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು.
5 ಕಿಮೀ ವಿಜೇತರಿಗೆ ಪ್ರಥಮ 5000, ದ್ವಿತೀಯ 3000, ತೃತೀಯ 2000 ರೂ. ಬಹುಮಾನ, 10 ಕಿಮೀ ವಿಜೇತರಿಗೆ ಪ್ರಥಮ 10 ಸಾವಿರ, ದ್ವಿತೀಯ 6000, ತೃತೀಯ 4000 ರೂ. ಬಹುಮಾನ, ಪದಕಗಳನ್ನು ವಿತರಿಸಲಾಗುವುದು ಎಂದರು. ಇದೇ ವೇಳೆ ಜೆಎಸ್‌ಡಬ್ಲ್ಯೂ ಪ್ರಾಯೋಜಿತ ಟೀಶರ್ಟ್‌ನ್ನು ಬಿಡುಗಡೆಗೊಳಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಕ್ಲಬ್ ಉಪಾಧ್ಯಕ್ಷೆ ಡಾ| ಜ್ಯೋತ್ಸಾ , ಕಾರ್ಯದರ್ಶಿ ಡಾ| ಜಿ. ಪ್ರಶಾಂತ್ ಸಾರಡ, ಹಿರಿಯ ವೈದ್ಯರಾದ ಡಾ| ಸೋಮನಾಥ್, ಡಾ| ತಿಪ್ಪಾರೆಡ್ಡಿ, ಜೆಎಸ್‌ಡಬ್ಲ್ಯೂ ಸಂಸ್ಥೆಯ ವಿಜಯ ಸಿನ್ಹಾ, ಜಿತೇಂದ್ರ ವಶಿಷ್ಟಾ, ಶ್ರೀಹರಿ ಇದ್ದರು.