ಹುಬ್ಬಳ್ಳಿ: ಭಾರತ ‘ಎ’ ಹಾಗೂ ಶ್ರೀಲಂಕಾ ‘ಎ’ ತಂಡಗಳ ಮಧ್ಯದ 5 ಪಂದ್ಯಗಳ ಏಕದಿನ ಸರಣಿಯ 4ನೇ ಕ್ರಿಕೆಟ್ ಪಂದ್ಯ ಗುರುವಾರ ಮಳೆಯಿಂದ ರದ್ದಾಗಿದ್ದು, ಶುಕ್ರವಾರ ಮತ್ತೂಮ್ಮೆ ಪಂದ್ಯ ಜರುಗಲಿದೆ. ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಗುರುವಾರದ ಪಂದ್ಯವನ್ನು ಮತ್ತೂಮ್ಮೆ ಆಡಿಸಲು ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳು ಸಮ್ಮತಿಸಿವೆ.
ಮೂರು ಬಾರಿ ಮಳೆಯಿಂದ ಪಂದ್ಯ ಸ್ಥಗಿತಗೊಳಿಸಬೇಕಾಯಿತು. ಮಳೆಯಿಂದಾಗಿ ಪಂದ್ಯ ಮಧ್ಯಾಹ್ನ 1:15ಕ್ಕೆ ಆರಂಭಗೊಂಡಿತು. 24 ಓವರ್‌ಗಳ ಪಂದ್ಯವಾಡಿಸಲು ನಿರ್ಧರಿಸಲಾಗಿತ್ತು. ಮೊದಲು ಬ್ಯಾಟ್ ಮಾಡಿದ ಭಾರತದ 20 ಓವರ್‌ಗಳ ಆಟದ ನಂತರ ಮತ್ತೆ ಮಳೆ ಸುರಿದಿದ್ದರಿಂದ 22 ಓವರ್‌ಗೆ ಸೀಮಿತಗೊಳಿಸಲಾಯಿತು. ಭಾರತ 4 ವಿಕೆಟ್ ಕಳೆದುಕೊಂಡು 208 ರನ್ ದಾಖಲಿಸಿತು. ಡಕ್‌ವರ್ತ್ ಲೂಯಿಸ್ ನಿಯಮದಂತೆ ಶ್ರೀಲಂಕಾಕ್ಕೆ 22 ಓವರ್‌ಗಳಲ್ಲಿ 219 ರನ್ ಗುರಿ ನೀಡಲಾಯಿತು. 2ನೇ ಓವರ್‌ನಲ್ಲಿ ಶ್ರೀಲಂಕಾ ತಂಡ 1 ವಿಕೆಟ್ ನಷ್ಟಕ್ಕೆ 10 ರನ್ ಗಳಿಸಿದ್ದ ಸಂದರ್ಭದಲ್ಲಿ ಮತ್ತೆ ರಭಸದ ಮಳೆ ಸುರಿಯಲಾರಂಭಿಸಿತು. ಸ್ಥಿತಿಯನ್ನು ಪರಿಗಣಿಸಿ ಪಂದ್ಯವನ್ನು ರದ್ದುಪಡಿಸಲಾಯಿತು.
ಭಾರತ ಉತ್ತಮ ಮೊತ್ತ: ಋತುರಾಜ ಗಾಯಕ್ವಾಡ್ (84) ಹಾಗೂ ಅನ್ಮೋಲ್ಪ್ರೀತ್ ಸಿಂಗ್ (85*) ಅರ್ಧ ಶತಕಗಳ ನೆರವಿನಿಂದ ಭಾರತ ತಂಡ ಉತ್ತಮ ಸ್ಕೋರ್ ದಾಖಲಿಸಿತು. ಋತುರಾಜ ಗಾಯಕ್ವಾಡ್ ಹಾಗೂ ಶುಭಂ ಗಿಲ್ ಇನಿಂಗ್ಸ್ ಆರಂಭಿಸಿದರಾದರೂ ಶುಭಂ ಗಿಲ್ (19) ನಿರ್ಗಮನದ ನಂತರ ಅನ್ಮೋಲ್ಪ್ರೀತ್ ಸಿಂಗ್ ಹಾಗೂ ಗಾಯಕ್ವಾಡ್ ನಿಧಾನ ಗತಿಯಲ್ಲಿ ಇನ್ನಿಂಗ್ಸ್ ಕಟ್ಟಿದರು. 14ನೇ ಓವರ್‌ನಲ್ಲಿ ತಂಡ 100 ರನ್ ದಾಖಲಿಸಿತು.
18ನೇ ಓವರ್‌ನಲ್ಲಿ ತಂಡದ ಮೊತ್ತ 150 ದಾಟಿದರೆ, 19ನೇ ಓವರ್‌ನಲ್ಲಿ ಗಾಯಕ್ವಾಡ್-ಸಿಂಗ್ ಜೊತೆಯಾಟದಲ್ಲಿ 100 ರನ್ ಪೇರಿಸಿದರು. 20ನೇ ಓವರ್‌ನಲ್ಲಿ ತಂಡ 177 ರನ್ ದಾಖಲಿಸಿದ ಸಂದರ್ಭದಲ್ಲಿ ಮಳೆ ಬೀಳಲಾರಂಭವಾಯಿತು. 16 ನಿಮಿಷಗಳ ನಂತರ ಮಧ್ಯಾಹ್ನ 3 ಗಂಟೆಗೆ ಮತ್ತೆ ಆರಂಭಗೊಂಡಿದ್ದರಿಂದ ಪಂದ್ಯವನ್ನು 22 ಓವರ್‌ಗಳಿಗೆ ನಿಗದಿ ಮಾಡಲಾಯಿತು. ನಾಯಕ ಇಶಾನ್ ಕಿಶನ್ (0) ಬಂದಷ್ಟೇ ವೇಗದಲ್ಲಿ ನಿರ್ಗಮಿಸಿದರು. ಅಂತಿಮವಾಗಿ ಭಾರತ 22 ಓವರ್‌ಗಳಲ್ಲಿ 4 ವಿಕೆಟ್‌ಗೆ 208 ರನ್ ಗಳಿಸಿತು.
ಡಕ್‌ವರ್ತ್ ಲೂಯಿಸ್ ನಿಯಮದಂತೆ 22 ಓವರ್‌ಗಳಲ್ಲಿ 219 ರನ್ ಗುರಿ ಬೆನ್ನತ್ತಿದ ಶ್ರೀಲಂಕಾ ಮೊದಲ ಓವರ್‌ನಲ್ಲಿಯೇ ನಿರೋಶನ್ ಡಿಕ್ವೆಲ್ಲಾ ವಿಕೆಟ್ ಕಳೆದುಕೊಂಡಿತು. 2ನೇ ಓವರ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 10 ರನ್ ಗಳಿಸಿದ್ದ ಸಂದರ್ಭದಲ್ಲಿ ಮತ್ತೆ ರಭಸದ ಮಳೆ ಸುರಿಯಲಾರಂಭಿಸಿದ ಕಾರಣ ಪಂದ್ಯ ರದ್ದುಪಡಿಸಲಾಯಿತು. ಟೆಸ್ಟ್ ಸರಣಿಯನ್ನು ಭಾರತ ಜಯಿಸಿದ್ದು, 5 ಪಂದ್ಯಗಳ ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿ ಈಗಾಗಲೇ ಭಾರತ 2-1ರಿಂದ ಮುನ್ನಡೆ ಪಡೆದುಕೊಂಡಿದೆ. ಶುಕ್ರವಾರ ಹಾಗೂ ಶನಿವಾರ ಸತತ 2 ಏಕದಿನ ಪಂದ್ಯಗಳು ನಡೆಯಲಿವೆ.
•ವಿಶ್ವನಾಥ ಕೋಟಿ