ಲಂಡನ್: 2019ರಲ್ಲಿ ವಿಶ್ವಾದ್ಯಂತ ಒಟ್ಟು 49 ಪತ್ರಕರ್ತರು ಹತ್ಯೆಗೀಡಾಗಿದ್ದಾರೆ. ಆದರೆ ಸಮಾಧಾನದ ಸಂಗತಿಯೆಂದರೆ ಕಳೆದ 16 ವರ್ಷಗಳಲ್ಲೇ ಈ ವರ್ಷ ಹತ್ಯೆಗೀಡಾಗಿರುವ ಪತ್ರಕರ್ತರ ಸಂಖ್ಯೆ ಕಡಿಮೆ. ಈ ವರ್ಷ ಒಟ್ಟು 57 ಪತ್ರಕರ್ತರನ್ನು ಒತ್ತೆಯಾಳುಗಳನ್ನಾಗಿ ಇರಿಸಲಾಗಿದೆ ಮತ್ತು 389 ಪತ್ರಕರ್ತರು ವಿವಿಧ ದೇಶಗಳ ಸೆರೆಮನೆಯಲ್ಲಿ ಬಂಧಿಸಲ್ಟಟ್ಟಿದ್ದಾರೆ. ಸೀಮಾತೀತ ವರದಿಗಾರರ ಕೂಟವೊಂದು ಸಿದ್ಧಪಡಿಸಿರುವ ವರದಿಯಲ್ಲಿ ಈ ಮಾಹಿತಿಗಳನ್ನು ನೀಡಲಾಗಿದೆ.
ಪ್ಯಾರಿಸ್ ಮೂಲದ ಪತ್ರಕರ್ತರ ಕೂಟವಾಗಿರುವ ಇದು ಹೊರತಂದಿರುವ ತನ್ನ ವರದಿಯಲ್ಲಿ ಉಲ್ಲೇಖಿಸಿರುವಂತೆ ಈ ವರ್ಷ ಹತ್ಯೆಗೀಡಾಗಿರುವ ಪತ್ರಕರ್ತರ ಸಂಖ್ಯೆ 2003ರ ಬಳಿಕ ಕನಿಷ್ಟವಾದುದಾಗಿದೆ.
ಪತ್ರಕರ್ತರಿಗೆ ಕಾರ್ಯನಿರ್ವಹಿಸಲು ಭೀತಿಯ ವಾತಾವರಣ ಇರುವ ವಿಶ್ವದ ರಾಷ್ಟ್ರಗಳ ಪಟ್ಟಿಯಲ್ಲಿ ಮೆಕ್ಸಿಕೋ, ಸಿರಿಯಾ, ಅಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ಸೋಮಾಲಿಯಾ ಅಗ್ರ ಐದು ಸ್ಥಾನಗಳನ್ನು ಪಡೆದುಕೊಂಡಿವೆ. ಮೆಕ್ಸಿಕೋ ಮತ್ತು ಸಿರಿಯಾ ದೇಶಗಳಲ್ಲಿ ಈ ವರ್ಷ ತಲಾ 10 ಪತ್ರಕರ್ತರು ಹತ್ಯೆಗೀಡಾಗಿದ್ದಾರೆ.
ಇನ್ನು ಅಫ್ಘಾನಿಸ್ಥಾನದಲ್ಲಿ ಐವರು, ಪಾಕಿಸ್ಥಾನದಲ್ಲಿ ನಾಲ್ವರು ಮತ್ತು ಸೊಮಾಲಿಯಾದಲ್ಲಿ ಮೂವರು ಪತ್ರಕರ್ತರು ಈ ವರ್ಷ ಹತ್ಯೆಗೀಡಾಗಿದ್ದಾರೆ. ವಿಶ್ವಾದ್ಯಂತ ಈ ವರ್ಷ ಹತ್ಯೆಯಾಗಿರುವ 49 ಪತ್ರಕರ್ತರಲ್ಲಿ 32 ಪತ್ರಕರ್ತರ ಹತ್ಯೆ ಈ ಐದು ದೇಶಗಳಲ್ಲೇ ನಡೆದಿದೆ ಎನ್ನುವುದು ಕಳವಳಕಾರಿ ಸಂಗತಿಯಾಗಿದೆ.
ಈ ವರ್ಷ ಹತ್ಯೆಗೀಡಾಗಿರುವ ಒಟ್ಟು 49 ಪತ್ರಕರ್ತರಲ್ಲಿ 46 ಪುರುಷರು ಹಾಗೂ ಮೂವರು ಮಹಿಳೆಯರು ಸೇರಿದ್ದಾರೆ. ಇನ್ನು ವರದಿಗಾರಿಕೆಯ ಸಂದರ್ಭದಲ್ಲಿ ಹತ್ಯೆಗೀಡಾದ ಪತ್ರಕರ್ತರ ಸಂಖ್ಯೆ 08 ಆಗಿದ್ದರೆ ನಿರ್ಧಿಷ್ಟವಾಗಿ ಗುರಿಯಾಗಿಸಿಕೊಂಡು 31 ಪತ್ರಕರ್ತರನ್ನು ಈ ವರ್ಷ ಹತ್ಯೆ ಮಾಡಲಾಗಿದೆ.
ಬ್ರಝಿಲ್, ಚಿಲಿ, ಮೆಕ್ಸಿಕೋ, ಹೊಂಡುರಾಸ್, ಕೊಲಂಬಿಯಾ ಮತ್ತು ಹೈಟಿಯಲ್ಲಿ ಇನ್ನೂ ಎಂಟು ಪತ್ರಕರ್ತರು ಹತ್ಯೆಗೀಡಾಗಿರುವ ವರದಿ ಲಭ್ಯವಾಗಿದ್ದು ಆದರೆ ಈ ಪ್ರಕರಣಗಳ ಪರಿಶೀಲನೆ ಬಾಕಿ ಇರುವುದರಿಂದ ಇವುಗಳನ್ನು ಈ ಪಟ್ಟಿಯಲ್ಲಿ ಪರಿಗಣಿಸಲಾಗಿಲ್ಲ ಎಂದು ಈ ಒಕ್ಕೂಟ ಮಾಹಿತಿ ನೀಡಿದೆ.