Advertisement

ಬಂದೂಕುಧಾರಿಗಳ ರಕ್ತದಾಹಕ್ಕೆ 49 ಬಲಿ

12:30 AM Mar 16, 2019 | |

ವೆಲ್ಲಿಂಗ್ಟನ್‌: ನ್ಯೂಜಿಲ್ಯಾಂಡ್‌ನ‌ ಪುಟ್ಟ ನಗರ ಕ್ರೈಸ್ಟ್‌ ಚರ್ಚ್‌ನ ಕೇಂದ್ರ ವಲಯ ಮತ್ತು ಹೊರ ವಲಯದಲ್ಲಿರುವ ಮಸೀದಿಗಳ ಮೇಲೆ ಶುಕ್ರವಾರ ಉಗ್ರವಾದಿಗಳು ನಡೆಸಿರುವ ಗುಂಡಿನ ದಾಳಿಗೆ 49 ಜನರು ಸಾವಿಗೀಡಾಗಿದ್ದು, 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಬಳಿಕ ಒಂಭತ್ತು ಮಂದಿ ಭಾರತೀಯರು ಕಣ್ಮರೆಯಾಗಿದ್ದಾರೆ. 

Advertisement

ಕೇಂದ್ರ ವಲಯದಲ್ಲಿರುವ ಡೀನ್ಸ್‌ ಅವೆನ್ಯೂ ಪ್ರಾಂತ್ಯದ ಅಲ್‌ ನೂರ್‌ ಮಸೀದಿ ಮೇಲೆ ಸೆಮಿ ಆಟೋಮೆಟಿಕ್‌ ಮೆಷಿನ್‌ಗನ್‌ ಮೂಲಕ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 41 ಜನರು ಅಸುನೀಗಿದ್ದರೆ, ಅಲ್ಲಿಂದ 5 ಕಿ.ಮೀ. ದೂರವಿರುವ ಲಿನ್‌ವುಡ್‌ ಏವ್‌ ಪ್ರಾಂತ್ಯದಲ್ಲಿರುವ ಮಸೀದಿಯ ಮೇಲೆ ಇದೇ ಮಾದರಿ ನಡೆದ ದಾಳಿಯಲ್ಲಿ 8 ಜನರು ಸಾವಿಗೀಡಾಗಿದ್ದಾರೆ. ಮಡಿದವರಲ್ಲಿ ಮಹಿಳೆಯರು, ಮಕ್ಕಳೂ ಸೇರಿದ್ದಾರೆ. ಅಲ್‌ ನೂರ್‌ ಮಸೀದಿ ಮೇಲೆ ದಾಳಿ ನಡೆಸಿದಾತನೇ ಲಿನ್‌ವುಡ್‌ ಮಸೀದಿಗೆ ತೆರಳಿ ದಾಳಿ ನಡೆಸಿದನೇ ಅಥವಾ ಇತರರ ಕೈವಾಡವಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಪೊಲೀಸರು ಇದನ್ನು ಭಯೋತ್ಪಾದಕ ಕೃತ್ಯವೆಂದು ಕರೆದಿದ್ದಾರೆ. ಮುಂಜಾಗ್ರತಾ ಕ್ರಮ ವಾಗಿ ಯಾವುದೇ ಮಸೀದಿಗೂ ತೆರಳದಂತೆ ಮುಸ್ಲಿಮರಿಗೆ ಸೂಚನೆ ನೀಡಲಾಗಿದೆ. 

ಹತ್ಯೆಗಳ ನೇರ ಪ್ರಸಾರ!
ದಾಳಿಕೋರರಲ್ಲಿ ಒಬ್ಬ ಇಡೀ ಘಟನೆಯನ್ನು ಫೇಸ್‌ಬುಕ್‌ ಲೈವ್‌ ಮೂಲಕ ನೇರ ಪ್ರಸಾರ ಮಾಡಿ ವಿಕೃತಿ ಮೆರೆದಿದ್ದಾನೆ. ದಾಳಿ ನಡೆಸಿದ ಅನಂತರ ಆತ ಪರಾರಿಯಾಗಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಗೆ ಸಂಬಂಧಿಸಿ ಒಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಇತರ ಮೂವರನ್ನು ಬಂಧಿಸಲಾಗಿದೆ. ಘಟನೆ ಬೆನ್ನಲ್ಲೇ ನಗರವ್ಯಾಪಿ ನಡೆದ ಶೋಧದಲ್ಲಿ ಆಕ್ಲೆಂಡ್‌ನ‌ ರೈಲ್ವೇ ನಿಲ್ದಾಣ ಸಹಿತ ಹಲವೆಡೆ ಸುಧಾರಿತ ಸ್ಫೋಟಕಗಳು (ಐಇಡಿ) ಪತ್ತೆಯಾಗಿದ್ದು ಅವುಗಳನ್ನು ಬಾಂಬ್‌ ನಿಷ್ಕ್ರಿಯ ದಳದ ಸಿಬಂದಿ ನಿಷ್ಕ್ರಿಯಗೊಳಿಸಿದ್ದಾರೆ. ಶುಕ್ರವಾರದ ಪ್ರಾರ್ಥನೆಗಾಗಿ ಮುಸ್ಲಿಂ ಸಮುದಾಯದವರು ಮಸೀದಿಗೆ ಆಗಮಿಸಿದಾಗ ಈ ದಾಳಿ ನಡೆಸಲಾಗಿದ್ದು, ಇದೊಂದು ಪೂರ್ವ ಯೋಜಿತ ಕೃತ್ಯ ಎಂದು ಪೊಲೀಸರು ತಿಳಿಸಿದ್ದಾರೆ. 

ಭಾರತೀಯನ ಕುಟುಂಬದ ಮೊರೆ
ಭಾರತದ ಹೈದರಾಬಾದ್‌ ಮೂಲದ ಅಹ್ಮದ್‌ ಇಕ್ಬಾಲ್‌ ಜಹಾಂಗೀರ್‌ ಅವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಕ್ರೈಸ್ಟ್‌ ಚರ್ಚ್‌ನಲ್ಲಿ ಅವರು ರೆಸ್ಟೋರೆಂಟ್‌ ನಡೆಸುತ್ತಿದ್ದರು. ಸುದ್ದಿಕೇಳಿ ತಲ್ಲಣಗೊಂಡಿರುವ ಹೈದರಾಬಾದ್‌ನಲ್ಲಿರುವ ಅವರ ಸಂಬಂಧಿಕರು ನ್ಯೂಜಿಲ್ಯಾಂಡ್‌ಗೆ ತೆರಳಲು ಸಿದ್ಧತೆ ನಡೆಸಿದ್ದು ತತ್‌ಕ್ಷಣದ ವೀಸಾಕ್ಕಾಗಿ ಕೇಂದ್ರ, ತೆಲಂಗಾಣ ಸರಕಾರಗಳಿಗೆ ಮನವಿ ಸಲ್ಲಿಸಿದ್ದಾರೆ.  ಏತನ್ಮಧ್ಯೆ ದಾಳಿ ಬಳಿಕ ಒಟ್ಟು 9 ಭಾರತೀಯರು ಕಣ್ಮರೆಯಾಗಿದ್ದಾರೆಂದು ನ್ಯೂಜಿಲ್ಯಾಂಡ್‌ನ‌ಲ್ಲಿರುವ ಭಾರತದ ರಾಯಭಾರಿ ಹೇಳಿದ್ದಾರೆ.  

ಮೋದಿ ಸಂತಾಪ
ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಾರ್ಥನಾ ಸ್ಥಳಗಳ ಮೇಲೆ ನಡೆಸಲಾಗಿರುವ ದಾಳಿಯನ್ನು ಖಂಡಿಸಿ ನ್ಯೂಜಿಲ್ಯಾಂಡ್‌ ಪ್ರಧಾನಿ ಜಸಿಂಡಾ ಆರ್ಡೆರ್ನ್ಗೆ ಪತ್ರ ಬರೆದಿದ್ದಾರೆ. 

Advertisement

ಹತ್ಯೆ ಕಾರಣ ತಿಳಿಸಿದ ಹಂತಕ
ಮಸೀದಿಗಳ ಮೇಲೆ ದಾಳಿ ನಡೆಸಿದ ವ್ಯಕ್ತಿ ಬ್ರೆಂಟನ್‌ ಟೆರ್ರಂಟ್‌ (28), ತಾನು ನಡೆಸಿದ ದಾಳಿಗೆ ಕಾರಣವೇನೆಂದು ಬಾಯಿಬಿಟ್ಟಿದ್ದಾನೆ. ಸ್ವೀಡನ್‌ನ ರಾಜಧಾನಿ ಸ್ಟಾಕ್‌ಹೋಂನಲ್ಲಿ 2017ರಲ್ಲಿ ನಡೆದಿದ್ದ ಉಗ್ರರ ದಾಳಿಯಲ್ಲಿ 12 ವರ್ಷದ ಎಬ್ಟಾ ಆಕರ್ಲಂಡ್‌ ಎಂಬ ಕಿವುಡ ಬಾಲಕಿ ಮೃತಳಾಗಿದ್ದಳು. ಆ ದಾಳಿಯನ್ನು ಉಜ್ಬೇಕಿಸ್ಥಾನದಿಂದ ಬಂದು ಸ್ವೀಡನ್‌ನಲ್ಲಿ ಆಶ್ರಯ ಪಡೆದಿದ್ದ ರಖತ್‌ ಅಲಿಲೊವ್‌ ಎಂಬಾತ ನಡೆಸಿದ್ದ. ಹಾಗಾಗಿ ವಲಸಿಗ ಮುಸ್ಲಿಂ ಸಮುದಾಯದ ಮೇಲಿನ ದ್ವೇಷ ಬೆಳೆಸಿಕೊಂಡಿರುವ ನಾನು ಎಬ್ಟಾ  ಸಾವಿಗೆ ಪ್ರತೀಕಾರಕ್ಕಾಗಿ ಈ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದ್ದಾನೆ. ಯೂರೋಪ್‌ ರಾಷ್ಟ್ರಗಳಿಗೆ ವಲಸೆ ಬರುವ ಮುಸ್ಲಿಮರ ಸಂಖ್ಯೆಯನ್ನು ಇಳಿಕೆ ಮಾಡುವುದೇ ದಾಳಿಯ ಉದ್ದೇಶ ಎಂದಿದ್ದಾನೆ. 

Advertisement

Udayavani is now on Telegram. Click here to join our channel and stay updated with the latest news.

Next