Advertisement

49 ಪ್ರಕರಣ, 30 ಆರೋಪಿಗಳ ಸೆರೆ, 1.24 ಕೋಟಿ ಮೌಲ್ಯದ ವಸ್ತು ವಶ

12:12 PM Oct 12, 2017 | Team Udayavani |

ಬೆಂಗಳೂರು: ದಕ್ಷಿಣ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ದರೋಡೆ, ವಂಚನೆ, ಮನೆಗಳ್ಳತನ ಸೇರಿದಂತೆ 49 ಪ್ರಕರಣಗಳನ್ನು ಪತ್ತೆ ಮಾಡಿದ್ದು, 30 ಆರೋಪಿಗಳನ್ನು ಬಂಧಿಸಿ 1.24 ಕೋಟಿ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.

Advertisement

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಹೆಚ್ಚುವರಿ ಪೊಲೀಸ್‌ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ, ಜೆಪಿ ನಗರ, ಕುಮಾರಸ್ವಾಮಿ ಲೇಔಟ್‌, ಚೆನ್ನಮ್ಮನಕೆರೆ ಅಚ್ಚುಕಟ್ಟು, ಪುಟ್ಟೇನಹಳ್ಳಿ, ಹನುಮಂತನಗರ, ಗಿರಿನಗರ, ವಿವಿಪುರಂ ಸೇರಿದಂತೆ
ಹಲವು ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪರಾಧ ಕರಣಗಳನ್ನು ಪತ್ತೆ ಮಾಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಸಿ.ಕೆ.ಅಚ್ಚುಕಟ್ಟು ಪೊಲೀಸ್‌ ಠಾಣೆ: ಮೋಜಿನ ಜೀವನ ನಡೆಸುವ ಉದ್ದೇಶದಿಂದ ದರೋಡೆ, ಮನೆಗಳ್ಳತನ ಹಾಗೂ ಯುಪಿಎಸ್‌ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಪ್ರತ್ಯೇಕ ಪ್ರಕರಣದಲ್ಲಿ 7 ಮಂದಿ ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. ವೇಲು, ಆಕಾಶ್‌, ಸತೀಶ್‌ ಬಂಧಿತ ಆರೋಪಿಗಳು. 6 ಮನೆಗಳ್ಳತನ ಪ್ರಕರಣಗಳಿಂದ 5.43 ಲಕ್ಷ ರೂ. ಬೆಲೆಬಾಳುವ ಸುಮಾರು 177 ಗ್ರಾಂ ತೂಕದ ಚಿನ್ನಾಭರಣ ಹಾಗೂ 250 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಏಳು ಆರೋಪಿಗಳ ಬಂಧನ: ಮನೆಗಳ್ಳತನ, ಯುಪಿಎಸ್‌ ಬ್ಯಾಟರಿ ಕಳ್ಳತನ ಮಾಡುತ್ತಿದ್ದ 7 ಮಂದಿಯನ್ನು ಬಂಧಿಸಿರುವ ಪೊಲೀಸರು ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ 5.40ಲಕ್ಷ ರು. ಬೆಲೆಬಾಳುವ 180 ಗ್ರಾಂ ಚಿನ್ನಾಭರಣ, 250 ಬೆಳ್ಳಿ ವಸ್ತುಗಳು ಹಾಗೂ 3 ಎಕ್ಸೆಲ್‌ ಕಂಪನಿಯ ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಅದೇ ರೀತಿ ಸುಲಭವಾಗಿ ಹಣಗಳಿಸುವ ಉದ್ದೇಶದಿಂದ ಕಳ್ಳತನ ಮಾಡುತ್ತಿದ್ದ ಶೇಷಾದ್ರಿ, ಸಂಜಯ್‌ ಹಾಗೂ ರೋಹಿತ್‌ನನ್ನು ಬಂಧಿಸಿ, ಅವರಿಂದ 1 ಲಕ್ಷ ರು. ಮೌಲ್ಯದ 2 ದ್ವಿಚಕ್ರ ವಾಹನಗಳನ್ನು ಜಪ್ತಿಮಾಡಿಕೊಳ್ಳಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಮೋಜಿನ ಜೀವನ ನಡೆಸಲು ಯುಪಿಎಸ್‌ ಬ್ಯಾಟರಿ ಕಳವು ಮಾಡುತ್ತಿದ್ದ ಸಂತೋಷ್‌ನನ್ನು ಬಂಧಿಸಲಾಗಿದೆ. 

Advertisement

ಜೆ.ಪಿ.ನಗರ ಪೊಲೀಸ್‌ ಠಾಣೆ: ಮದ್ಯ, ಗಾಂಜಾ ನಶೆಯಲ್ಲಿ ಕಳವು ಮಾಡಿದ ಬೈಕ್‌ ಮೂಲಕ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ 7 ದರೋಡೆಕೋರರನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ. ಶೇಷಾದ್ರಿ, ಕಾಂತರಾಜು, ರೋಹಿತ್‌, ಸಂಜಯ್‌ ಕೃಷ್ಣಾ, ಪ್ರತಾಪ್‌ ಹಾಗೂ ವಿನಯ್‌ ಕುಮಾರ್‌ ಬಂಧಿತರು. 

ಇರಾನಿ ಗ್ಯಾಂಗ್‌ ಸದಸ್ಯನ ಬಂಧನ: ಒಂಟಿಯಾಗಿ ಓಡಾಡುತ್ತಿದ್ದ ಮಹಿಳೆಯನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್‌ ಸೈಯದ್‌ ಅಲಿ ಬಂಧಿತ ಇರಾನಿ ಗ್ಯಾಂಗ್‌ ಸದಸ್ಯನಾಗಿದ್ದು ಸರಗಳ್ಳತನ ಮಾಡಲು ಬೇರೆ ರಾಜ್ಯದಿಂದ ನಗರಕ್ಕೆ ಬಂದಿದ್ದ. ಈತನ ಬಂಧನದಿಂದ 4 ಸರಗಳ್ಳತನ ಪ್ರಕರಣ ಭೇದಿಸಲಾಗಿದ್ದು, 3 ಲಕ್ಷ ಮೌಲ್ಯದ 100 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. 

ವಿ.ವಿ.ಪುರ ಪೊಲೀಸರ ಕಾರ್ಯಾಚರಣೆ: ಬೈಕ್‌ ಮತ್ತು ಐಚರ್‌ ವಾಹನಗಳನ್ನು ಕದ್ದು ಪರಾರಿಯಾಗುತ್ತಿದ್ದ ಆರೋಪಿಯನ್ನು ವಿವಿಪುರ ಪೊಲೀಸರು ಬಂಧಿಸಿದ್ದಾರೆ. ರಾಮಣ್ಣ ಬಂಧಿತ ಆರೋಪಿ ಮೂಲತ ರಾಮನಗರ ಜಿಲ್ಲೆಯವನಾಗಿದ್ದು, ಬಂಧಿತನಿಂದ 12.50 ಲಕ್ಷ ರೂ. ಮೌಲ್ಯದ 1 ಬೈಕ್‌, 3 ಐಚಾರ್‌ ವಾಹನ ವಶಕ್ಕೆ ಪಡೆಯಲಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಕದ್ದು ಪರಾರಿಯಾಗುತ್ತಿದ್ದ ಆರೋಪಿ ಯನ್ನು ವಿವಿ ಪುರ ಪೊಲೀಸರು ಬಂಧಿಸಿದ್ದಾರೆ. 

ರಕ್ತ ಚಂದನ ವಶಕ್ಕೆ
ಅಕ್ರಮವಾಗಿ ರಕ್ತ ಚಂದನ ಸಾಗಣೆ ಮಾಡುತ್ತಿದ್ದ ತಮಿಳುನಾಡು ಮೂಲದ ವ್ಯಕ್ತಿಯನ್ನು ವಿವಿ ಪುರ ಪೊಲೀಸರು ಬಂಧಿಸಿದ್ದಾರೆ. ಸತ್ಯವೇಲು ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 8.58 ಲಕ್ಷ ರು. ಮೌಲ್ಯದ 429 ಕೆ.ಜಿ ತೂಕದ 17 ತುಂಡು ರಕ್ತ ಚಂದನವನ್ನು ವಶಕ್ಕೆ ಪಡೆಯಲಾಗಿದೆ. ಅರಣ್ಯ ದಿಂದ ರಕ್ತಚಂದನ ಲೂಟಿ ಮಾಡಿ ಟಾಟಾ ಏಸ್‌ ವಾಹನದಲ್ಲಿ ತುಂಬಿಸಿಕೊಂಡು ಕಲಾಸಿಪಾಳ್ಯ ಕಡೆಯಿಂದ ಕೆ.ಆರ್‌.ರಸ್ತೆ ಕಡೆಗೆ ಬರುತ್ತಿದ್ದ ವಾಹನ ವನ್ನು ಪತ್ತೆ ಹಚ್ಚಿ ಆರೋಪಿಯನ್ನು ವಿವಿಪುರ ಪೊಲೀಸರು ಸೆರೆಹಿಡಿದಿದ್ದಾರೆ. ಈತನ ಜತೆ ಕೃತ್ಯದಲ್ಲಿ ತೊಡಗಿದ್ದ ಮೂವರು ತಲೆ ಮರೆಸಿಕೊಂಡಿದ್ದು ಅವರಿಗಾಗಿ ಶೋಧ ಮುಂದುವರೆದಿದೆ. 

ಕುಮಾರಸ್ವಾಮಿ ಲೇಔಟ್‌
ಮನೆಗಳ್ಳತನ, ದರೋಡೆ, ಸುಲಿಗೆ, ಬೈಕ್‌ ಕಳ್ಳತನ ಮಾಡುತ್ತಿದ್ದ 10 ಮಂದಿ ಆರೋಪಿಗಳನ್ನು ಬಂಧಿಸಿರುವ ಕುಮಾರಸ್ವಾಮಿ ಲೇಔಟ್‌ ಪೊಲೀಸರು 3 ಲಕ್ಷ ರೂ. ಮೌಲ್ಯದ 7.5 ಕೆ.ಜಿ ತೂಕದ ಬೆಳ್ಳಿ ವಸ್ತುಗಳು ಹಾಗೂ ಮೂರು ಬೈಕ್‌ ಗಳನ್ನು ವಶಪಡಿಸಿಕೊಂಡಿದ್ದಾರೆ. ಬೀಗ ಮುರಿದು ಫ್ಯಾಕ್ಟರಿ ಹಾಗೂ ಅಂಗಡಿಗಳಿಗೆ ಕನ್ನ ಹಾಕಿ ಚಿನ್ನಾಭರಣ ದೋಚಿದ್ದ ನಾಲ್ವರನ್ನು ಸೆರೆಹಿಡಿಯಲಾಗಿದೆ. ವೆಂಕಟೇಶ್‌, ರವಿಕುಮಾರ್‌, ಮುತ್ತುರಾಜು ಹಾಗೂ ಸಿದ್ದಪ್ಪಾಜಿ ಬಂಧಿತ ಆರೋಪಿಗಳು. ಕಾರ್ಖಾನೆಗಳಲ್ಲಿ ಕಳ್ಳತನ ಮಾಡಿದ್ದ ಲ್ಯಾಪ್‌ಟಾಪ್‌, ಒಂದು ಪ್ರಿಂಟರ್‌, ಬೈಕ್‌ ಎಲ್‌ಸಿಡಿ ಟವಿ ಸೇರಿದಂತೆ ಒಟ್ಟು 3.40 ಲಕ್ಷ ರು. ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೂಂದು ಪ್ರಕರಣದಲ್ಲಿ ಕುಮಾರಸ್ವಾಮಿ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿದ್ದ ಇಮ್ರಾನ್‌ ಎಂಬಾತನನ್ನು ಬಂಧಿಸಿದ್ದು, 22 ಲಕ್ಷ ರೂ. ಬೆಲೆಯ 736 ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next