Advertisement

ಧರ್ಮಸ್ಥಳದಲ್ಲಿ 47ನೇ ವರ್ಷದ ಉಚಿತ ಸಾಮೂಹಿಕ ವಿವಾಹ

07:45 AM May 01, 2018 | Karthik A |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 47ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆದಿದ್ದು 131 ಜೊತೆ ದಾಂಪತ್ಯ ಜೀವನಕ್ಕೆ ಪದಾರ್ಪಣೆಗೈದರು. ಸಂಜೆ 6.40ಕ್ಕೆ ಗೋಧೂಳಿ ಲಗ್ನದಲ್ಲಿ ಮಂಗಳವಾದ್ಯ, ವೇದ ಘೋಷಗಳೊಂದಿಗೆ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು. ವಧು-ವರರು ಸಂಜೆ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನಕ್ಕೆ ತೆರಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಚಲನಚಿತ್ರ ನಟ ಸುದೀಪ್‌ ಹಾಗೂ ಗಣ್ಯರು ಮಂಗಳ ಸೂತ್ರ ನೀಡಿದರು.

Advertisement

ವಿವಿಧೆಡೆಯ ಜೋಡಿಗಳು


ಪ್ರಸಕ್ತ ವರ್ಷದ 131 ಜೋಡಿ ಸೇರಿದಂತೆ ಒಟ್ಟು 12,160 ಜೋಡಿ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದೆ. ಈ ವರ್ಷ ಕೇರಳ ರಾಜ್ಯದಿಂದ 5 ಜೋಡಿ ಸೇರಿದಂತೆ ಉಡುಪಿ ಜಿಲ್ಲೆಯಿಂದ 28, ದಕ್ಷಿಣ ಕನ್ನಡದಿಂದ 10, ಶಿವಮೊಗ್ಗದ 17 ಜೋಡಿಗಳ ವಿವಾಹವಾಗಿದೆ. ಇದರಲ್ಲಿ 23 ಜತೆ ಅಂತರ್ಜಾತಿ ವಿವಾಹವಾಗಿದೆ.

ಪರಿಶಿಷ್ಟ ಜಾತಿಯ 29, ನಾಯಕರು, ಮರಾಠಿ ನಾಯ್ಕ ಜಾತಿಯ ತಲಾ 9, ಒಕ್ಕಲಿಗ ಗೌಡ, ಪೂಜಾರಿ ಜಾತಿಯ ತಲಾ 7,  ವಿಶ್ವಕರ್ಮ 6, ಮೊಗೇರ 5, ಕುರುಬ 4, ಮರಾಠಿ ಶಿವಾಜಿ, ಖಾರ್ವಿ, ಗೌಡರು, ಕುಡುಬಿ ನಾಮಧಾರಿ ನಾಯ್ಕ, ಕೊರಗ, ನಲ್ಕೆ, ಭೋವಿ, ಬಳಾರಿ ಜಾತಿಯ ತಲಾ 2, ವೀರಶೈವ, ಕೋಟೆ ಕ್ಷತ್ರಿಯ, ಭಾವಸಾರ ಕ್ಷತ್ರಿಯ, ಮಡಿವಾಳ, ಮೊಗವೀರ, ಲಂಬಾಣಿ, ರಜಪೂತ, ಚಲವಾದಿ, ಶೆಟ್ಟಿಗಾರ್‌, ಕುಂಬಾರ, ಮಲೆಕುಡಿಯ, ರೆಡ್ಡಿ, ಗೊಲ್ಲರು, ರಾಣೇಬೈರ ಜಾತಿಯ ತಲಾ 1 ಜೋಡಿಯ ವಿವಾಹ ನೆರವೇರಿದೆ.


ಸುದೀಪ್‌ ಪತ್ನಿ ಪ್ರಿಯಾ ಸುದೀಪ್‌, ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ, ಬಿರ್ಲಾ ಸಂಸ್ಥೆಯ ಜಂಟಿ ಅಧ್ಯಕ್ಷ ಮನೋಜ್‌ ಕುಮಾರ್‌ ಮೆಹ್ತಾ, ಡಬ್ಲ್ಯೂ.ಹೆಚ್‌.ಒನ ಭಾರತೀಯ ಪ್ರತಿನಿಧಿ ಅನುಷಾ ಮೋಹನ್‌, ಸಿನಿಮಾ ನಿರ್ಮಾಪಕ ರಾಜೇಶ್‌ ಭಟ್‌, ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ, ಹೆಗ್ಗಡೆ ಕುಟುಂಬಸ್ಥರಾದ ಡಿ. ಸುರೇಂದ್ರ ಕುಮಾರ್‌, ಡಿ.ಹಷೇಂದ್ರ ಕುಮಾರ್‌, ಅನಿತಾ ಸುರೇಂದ್ರ ಕುಮಾರ್‌ , ಸುಪ್ರಿಯಾ ಹಷೇಂದ್ರ ಕುಮಾರ್‌, ಮಾನ್ಯಾ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರೂ ಶೆಟ್ಟಿ ಉಪಸ್ಥಿತರಿದ್ದರು. ಶುಭಚಂದ್ರ ರಾಜ್‌ ಸ್ವಾಗತಿಸಿ, ವಸಂತಭಟ್‌ ವಂದಿಸಿ, ಶುೃತಿ ಜೈನ್‌ ಕಾರ್ಯಕ್ರಮ ನಿರೂಪಿಸಿದರು.

ವಧೂ – ವರರ ಪ್ರಮಾಣವಚನ
‘ಧರ್ಮಸ್ಥಳದಲ್ಲಿ ಮಂಗಲ ಮುಹೂರ್ತದಲ್ಲಿ ಸತಿ-ಪತಿಗಳಾಗಿ ಪವಿತ್ರ ಬಾಂಧವ್ಯ ಹೊಂದಿರುವ ನಾವು ಮುಂದೆ ಜೀವನದುದ್ದಕ್ಕೂ ಧರ್ಮ, ಅರ್ಥ ಮತ್ತು ಕಾಮಗಳಲ್ಲಿ ಸಹಚರರಾಗಿ ಪರಸ್ಪರ ಪ್ರೀತಿ- ವಿಶ್ವಾಸದಿಂದ ಒಬ್ಬರಿಗೊಬ್ಬರು ವಂಚನೆ ಮಾಡದೆ ಹಾಗೂ ಯಾವುದೇ ದುರಭ್ಯಾಸಗಳಿಗೆ ಬಲಿಯಾಗದೆ ಬದುಕುತ್ತೇವೆ ಎಂದು ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿ ಮತ್ತು ಪೂಜ್ಯ ಹೆಗ್ಗಡೆಯವರ ಸಮಕ್ಷಮದಲ್ಲಿ ಪ್ರಮಾಣವಚನ ಬದ್ಧರಾಗುತ್ತಿದ್ದೇವೆ’ ಎಂದು ವಧೂ – ವರರ ಪ್ರಮಾಣ ವಚನ ಸ್ವೀಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next