Advertisement
ಗುರುವಾರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಗೃಹ ಕಚೇರಿಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ 1782.44 ಕೋಟಿ ರೂ. ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಶೀಘ್ರದಲ್ಲಿಯೇ ಈ ಅನುದಾನದ ಹಣವನ್ನು ರಾಜ್ಯಕ್ಕೆ ಬಿಡುಗಡೆಗೊಳಿಸಲಾಗುವುದು ಎಂದು ಸಮಿತಿ ತಿಳಿಸಿದೆ.
ರಾಜ್ಯದ ಮನವಿಗೆ ಹೋಲಿಸಿದರೆ ಘೋಷಣೆಯಾದ ಪರಿಹಾರದ ಮೊತ್ತ ಕಡಿಮೆ. ಆದರೆ ಹಿಂದಿನ ಪರಿಹಾರಗಳನ್ನು ಗಮನಿಸಿದರೆ ಈ ಸಲ ಗರಿಷ್ಠ ಪ್ರಮಾಣದ ಅನುದಾನವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದೆ ಎನ್ನಲಾಗಿದೆ.2015-16ರ ಸಾಲಿನಲ್ಲಿ ಬರ ಪರಿಹಾರವಾಗಿ ರಾಜ್ಯವು ಕೇಂದ್ರದಿಂದ 3,830 ಕೋಟಿ ರೂ. ಕೇಳಿತ್ತು. ಆದರೆ ಕೇಂದ್ರ ಸರ್ಕಾರ 1540 ಕೋಟಿ ರೂ. ನೀಡಿತ್ತು. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮಾನದಂಡಗಳನ್ನು ಅನ್ವಯಿಸಿ ರಾಜ್ಯಕ್ಕೆ 4702.54 ಕೋಟಿ ರೂ. ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಕೇಂದ್ರ ಸರ್ಕಾರ ಕಳೆದ ನವೆಂಬರ್ ಮೊದಲ ವಾರದಲ್ಲಿ ರಾಜ್ಯದ ಬರ ಪೀಡಿತ ಪ್ರದೇಶಗಳಿಗೆ ತನ್ನ ಆಂತರಿಕ ತಂಡವನ್ನು ಕಳುಹಿಸಿದ್ದು, ಆ ಸಮಿತಿಯ ಅಧ್ಯಯನ ವರದಿಯ ಶಿಫಾರಸ್ಸಿನಂತೆ ಅನುದಾನ ನೀಡಿದೆ.
Related Articles
Advertisement
ನಿರಾಸೆಯಾಗಿದೆ: ಕೃಷ್ಣಬೈರೇಗೌಡಈ ಕುರಿತು ಪ್ರತಿಕ್ರಿಯಿಸಿದ ಕೃಷಿ ಸಚಿವ ಕೃಷ್ಣ ಬೈರೇಗೌಡ, ಕೇಂದ್ರದ ನಿರ್ಧಾರದಿಂದ ರಾಜ್ಯಕ್ಕೆ ತೀವ್ರ ನಿರಾಸೆಯಾಗಿದೆ ಎಂದರು. ಈ ಸಲ ಬರ ಪರಿಹಾರಕ್ಕೆ ಬೇರೆ ಯಾವುದೇ ರಾಜ್ಯಗಳು ಮನವಿ ಮಾಡಿರಲಿಲ್ಲ. ಹೀಗಾಗಿ ರಾಜ್ಯಕ್ಕೆ ಹೆಚ್ಚಿನ ಅನುದಾನ ಸಿಗುವ ವಿಶ್ವಾಸವಿತ್ತು. ಕೇಂದ್ರದಿಂದ ಕಡಿಮೆ ಅನುದಾನ ಸಿಗಬಹುದೆಂದು ನಿರೀಕ್ಷಿಸಿ, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಹೆಚ್ಚಿನ ಪರಿಹಾರ ನೀಡುವಂತೆ ಪ್ರಧಾನಿ ಅವರಿಗೂ ಮನವಿ ಮಾಡಿಕೊಂಡಿದ್ದೆವು. ಆದರೆ ನಮ್ಮ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಹೆಚ್ಚಿನ ಪರಿಹಾರಕ್ಕಾಗಿ ಇನ್ನೊಮ್ಮೆ ಪ್ರಧಾನಿ ಅವರನ್ನು ಭೇಟಿ ಮಾಡುವ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ ಎಂದು ಅವರು ತಿಳಿಸಿದರು. ಕೇಂದ್ರ ಸರ್ಕಾರ ಈಗ ಬಿಡುಗಡೆ ಮಾಡಿರುವ ಮೊತ್ತ ಬಹಳ ಕಡಿಮೆಯಾಗಿದ್ದು, ಈ ಹಿಂದೆ ಕೇಳಿದ್ದ ಮೊತ್ತವನ್ನೇ ನೀಡಬೇಕೆಂದು ಮತ್ತೂಮ್ಮೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು.
– ಸಿದ್ದರಾಮಯ್ಯ ಕಳೆದ ವರ್ಷ ಕೇಂದ್ರ ಸರ್ಕಾರ 1,500 ಕೋಟಿ ರೂ. ಬರ ಪರಿಹಾರ ನೀಡಿದ್ದರೂ, ರಾಜ್ಯ ಸರ್ಕಾರ ಅದನ್ನು ಸಮರ್ಪಕವಾಗಿ ಬಳಿಸಿಕೊಂಡಿಲ್ಲ. ಆದರೂ ಹೆಚ್ಚಿನ ಪರಿಹಾರ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರುತ್ತೇನೆ.
– ಯಡಿಯೂರಪ್ಪ