ಬೆಂಗಳೂರು: ಇಂದಿರಾನಗರದಲ್ಲಿರುವ ಚಿಟ್ ಫಂಡ್ಸ್ ಆಂಡ್ ಟ್ರೇಡಿಂಗ್ ಕಂಪನಿಯಿಂದ ಸಾವಿರಕ್ಕೂ ಹೆಚ್ಚು ಹೂಡಿಕೆದಾರರಿಗೆ ಅಂದಾಜು 47 ಕೋಟಿ ರು. ವಂಚಿಸಿದೆ ಎಂದು ಹೂಡಿಕೆ ಮಾಡಿ ವಂಚನೆಗೆ ಒಳಗಾದವರು ಎನ್ನಲಾದ ಎನ್.ಶಂಕರ್ ಆರೋಪಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಂಚನೆ ಸಂಬಂಧ ಸಂಸ್ಥೆ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ತನ್ನಲ್ಲಿ ಹೂಡಿಕೆ ಮಾಡಿರುವ ಬಹುತೇಕ ಮಂದಿಗೆ ಸಂಸ್ಥೆ ಹಣ ಹಿಂದಿರುಗಿಸದ ಪರಿಣಾಮ, ಹಲವು ಕುಟುಂಬಗಳು ಬೀದಿಗೆ ಬಿದ್ದಿವೆ ಎಂದರು.
ಚಿಟ್ ಫಂಡ್ ಸಂಸ್ಥೆ ಸರ್ಕಾರದ ಸಹಕಾರ ಸಂಸ್ಥೆಯಲ್ಲಿ ನೋಂದಣಿ ಆಗಿದೆ. ನೋಂದಾಯಿತ ಸಂಸ್ಥೆಯೇ ಮೋಸ ಮಾಡಿದರೆ, ನಾವು ಯಾರನ್ನು ಕೇಳುವುದು ಎಂದು ಪ್ರಶ್ನಿಸಿದ ಅವರು, ನೂರಾರು ಜನ ಕಷ್ಟ ಪಟ್ಟು ಚೀಟಿ ಕಟ್ಟುತ್ತಿದ್ದರು.
ಚೀಟಿ ಮುಗಿದ ಬಳಿಕ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಚಂದ್ರಶೇಖರ ಬಾಬು ಹಣ ನೀಡದೆ ಚೆಕ್ ವಿತರಿಸಿದ್ದಾರೆ. ಆದರೆ, ಅವರ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದ ಕಾರಣ ಚೆಕ್‌ಗಳು ಬೌನ್ಸ್ ಆಗಿವೆ. ಈ ಬಗ್ಗೆ ಪ್ರಶ್ನಿಸಿದರೆ ಆಸ್ತಿ ಮಾರಿ ಹಣ ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದರು. ಎರಡು ವರ್ಷ ಕಳೆದರೂ, ಹೂಡಿಕೆದಾರರಿಗೆ ಹಣ ಸಿಕ್ಕಿಲ್ಲ ಎಂದು ಆರೋಪಿಸಿದರು.
ಈ ಬಗ್ಗೆ ಸಹಕಾರ ಸಂಸ್ಥೆಯಲ್ಲಿ ದೂರು ನೀಡಿದಾಗ ಅವರು ಮಾಹಿತಿ ಕಲೆಹಾಕಿ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭಿಸಿದ್ದಾರೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.