Advertisement
ಸೋಲು ಒಪ್ಪಿಕೊಳ್ಳಲು ಮೊಂಡಾಟ ಮಾಡಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಅಧ್ಯಕ್ಷರಿಗೆ ಶುಭ ಕೋರಿ, ವೈಟ್ ಹೌಸ್‌ನಿಂದ ನಿರ್ಗಮಿಸಿದ್ದಾರೆ. ಅತ್ತ ಕ್ಯಾಪಿಟಲ್ ಹಾಲ್ ಬಳಿ ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಅಮೆರಿಕದ ಹೊಸ ಜವಾಬ್ದಾರಿ ಹೊತ್ತಿದ್ದಾರೆ.
Related Articles
Advertisement
ಅಫ್ಘಾನಿಸ್ಥಾನ, ಇರಾಕ್‌ಗಿಂತ 5 ಪಟ್ಟು ಹೆಚ್ಚು ಸೈನಿಕರು! :
ಬೈಡೆನ್ ಪದಗ್ರಹಣಕ್ಕೆ ಜ.6ರ ದಾಳಿ ಕರಿನೆರಳು ಬೀಳಬಾರದು ಎಂಬ ಕಾರಣಕ್ಕಾಗಿ ವಾಷಿಂಗ್ಟನ್ ಡಿಸಿಯಲ್ಲಿ 25 ಸಾವಿರ ನ್ಯಾಶನಲ್ ಗಾರ್ಡ್ ಸಿಬಂದಿಯನ್ನು ರಕ್ಷಣೆಗೆ ನಿಯೋಜಿಸಲಾ ಗಿತ್ತು. ಈ ಬೃಹತ್ ಸಂಖ್ಯೆ ಅಫ್ಘಾನಿಸ್ಥಾನ ಮತ್ತು ಇರಾಕ್‌ನಲ್ಲಿರುವ ಅಮೆರಿಕದ ಒಟ್ಟು ಯೋಧರಿಗಿಂತ 5 ಪಟ್ಟು ಹೆಚ್ಚು! ಅಫ್ಘಾನಿಸ್ಥಾನ ದಲ್ಲಿ 2,500, ಇರಾಕ್‌ನಲ್ಲಿ 2,500, ಸಿರಿಯಾದಲ್ಲಿ 900 ಅಮೆರಿಕನ್ ಯೋಧರು ಈಗಲೂ ನಿಯೋಜನೆಗೊಂಡಿದ್ದಾರೆ.
ಭಾರತೀಯರಿಗೆ ಅನುಕೂಲ :
ಅಮೆರಿಕದ ನೂತನ ಅಧ್ಯಕ್ಷರ ವಲಸೆ ನೀತಿ ವಿಶೇಷವಾಗಿ ಭಾರತೀಯ ಸಮುದಾಯದ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳಿಗೆ ನೆರವಾಗಲಿದೆ ಎಂದು ಬಣ್ಣಿಸಲಾಗುತ್ತಿದೆ. ಟ್ರಂಪ್ ಘೋಷಣೆ ಮಾಡಿದ್ದ ನೀತಿಯಂತೆ ಪ್ರತೀ ದೇಶಕ್ಕೆ ಎಚ್-1ಬಿ ವೀಸಾ ನೀಡುವ ಬಗ್ಗೆ ಮಿತಿ ಹೇರಲಾಗಿತ್ತು. ಹೊಸ ನೀತಿಯಲ್ಲಿ ಅದನ್ನು ತೆಗೆದು ಹಾಕುವ ಬಗ್ಗೆ ಪ್ರಸ್ತಾವನೆ ಮಾಡಲಾಗಿದೆ. ಹೊಸ ನೀತಿಯನ್ನು “ಅಮೆರಿಕ ಪೌರತ್ವ ಕಾಯ್ದೆ 2021′ ಎಂದು ಹೆಸರಿಸಲಾಗಿದೆ. ಅದರಲ್ಲಿ ಅಮೆರಿಕದ ಅರ್ಥ ವ್ಯವಸ್ಥೆಯ ಅಭಿವೃದ್ಧಿಗಾಗಿ ಬರುವ ಹಿತ ಕಾಯುವ ಬಗ್ಗೆ ವಿಶೇಷವಾಗಿ ಉಲ್ಲೇಖವಿದೆ. ಕುಟುಂಬ ಸದಸ್ಯರನ್ನೂ ಜತೆಗೂಡಿ ಅಮೆರಿಕಕ್ಕೆ ಬರುವುದರ ಬಗ್ಗೆ ಸ್ವಾಗತಿಸಲಾ ಗಿದೆ. ಅಮೆರಿಕದಲ್ಲಿಯೇ ಶಿಕ್ಷಣ ಪಡೆಯುವ ಕನಸು ಹೊಂದಿರು ವವರಿಗೂ ಹೊಸ ನೀತಿಯಿಂದ ಲಾಭವೇ ಆಗಲಿದೆ. ವಿಶೇಷವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ, ಗಣಿತದಲ್ಲಿ ಹೆಚ್ಚಿನ ಅಧ್ಯಯನ ಮಾಡುವವರಿಗೆ ಒತ್ತು ನೀಡಲಾಗಿದೆ. ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ (ಅಮೆರಿಕ ಪೌರತ್ವ) ಪಡೆಯುವ ಬಗ್ಗೆ ಸದ್ಯ ಇರುವ ಅನಗತ್ಯ ನಿಯಮಗಳನ್ನು ರದ್ದು ಪಡಿಸಲೂ ಬೈಡೆನ್ ಆಡಳಿತ ಮುಂದಾಗಿದೆ.
ತೆಲಂಗಾಣದ “ಬಿಡ್ಡ’, ಬೈಡೆನ್ ಭಾಷಣ ರಚನೆಕಾರ! :
ಚುನಾವಣೆಯ ಸಮಯದಲ್ಲಿ ಜೋ ಬೈಡೆನ್,ಕಮಲಾ ಹ್ಯಾರಿಸ್ ಭಾಷಣರಚನೆಕಾರರಾಗಿದ್ದ ಭಾರತೀಯ ಮೂಲದ ವಿನಯ ರೆಡ್ಡಿ ಈಗ ಶ್ವೇತಭವನದ ಭಾಷಣ ರಚನೆ ತಂಡದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ರೆಡ್ಡಿ ಹುಟ್ಟಿ ಬೆಳೆದದ್ದು ಅಮೆರಿಕದಲ್ಲೇ ಆದರೂ ಅವರ ಕುಟುಂಬದ ಮೂಲವಿರುವುದು ತೆಲಂಗಾಣದ ಪೋತಿರೆಡ್ಡಿ ಪೇಟ ಎಂಬ ಗ್ರಾಮದಲ್ಲಿ. ಹೀಗಾಗಿ ವಿನಯ ರೆಡ್ಡಿಯ ಬೆಳವಣಿಗೆಯನ್ನು ಈ ಗ್ರಾಮವು ಸಂಭ್ರಮಿಸುತ್ತಿದ್ದು, “ಮಾ ಬಿಡ್ಡ ಊರಿಕಿ ಪೇರು ತೆಚ್ಚಾಡು'(ನಮ್ಮ ಹುಡುಗ ಊರಿಗೆ ಹೆಸರು ತಂದ) ಎಂದು ಸಂಭ್ರಮಿಸುತ್ತಿದ್ದಾರೆ.
ವಿನಯ್ ತಂದೆ ನಾರಾಯಣ ರೆಡ್ಡಿ ಪೋತಿರೆಡ್ಡಿ ಪೇಟದಲ್ಲಿ ಹುಟ್ಟಿ ಬೆಳೆದವರು, ನಂತರ ಅವರು ಹೈದರಾಬಾದ್‌ನಲ್ಲಿ ಎಂಬಿಬಿಎಸ್ ಮುಗಿಸಿ ಅಮೆರಿಕಕ್ಕೆ ವಲಸೆ ಹೋಗಿದ್ದರು. ನಾರಾಯಣ ರೆಡ್ಡಿಯವರ ಮೂರು ಮಕ್ಕಳಲ್ಲಿ ಒಬ್ಬರಾದ ವಿನಯ ರೆಡ್ಡಿ ಹುಟ್ಟಿ ಬೆಳೆದದ್ದು ಒಹಾಯೋದಲ್ಲಿ.
ಡೊನಾಲ್ಡ್ ಟ್ರಂಪ್ ನಿರ್ಧಾರಗಳು ವಾಪಸ್? :
ಪ್ರಮಾಣ ವಚನ ಸ್ವೀಕಾರ ಮಾಡಿರುವ ಜೋ ಬೈಡೆನ್ ಅವರು ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೆಗೆದುಕೊಂಡಿದ್ದ ಕೆಲವು ವಿವಾದಾತ್ಮಕ ನಿರ್ಧಾರ ಗಳನ್ನು ವಾಪಸ್ ಪಡೆಯುವ ಸಾಧ್ಯತೆ ಇದೆ. ಜತೆಗೆ ಒಬಾಮಾ ಕಾಲದಲ್ಲಿ ತಂದಿದ್ದ ಕೆಲವು ನಿರ್ಣಯಗಳನ್ನು ವಾಪಸ್ ಜಾರಿಗೆ ತರುವ ಸಂಭವವೂ ಇದೆ. ಮೆಕ್ಸಿಕೋ ಗಡಿಯಲ್ಲಿ ಕಟ್ಟಲಾಗುತ್ತಿರುವ ಗೋಡೆ ಸ್ಥಗಿತ, ಪ್ಯಾರಿಸ್ ಒಪ್ಪಂದ ಮತ್ತು ವಿಶ್ವ ಆರೋಗ್ಯ ಸಂಸ್ಥೆಗೆ ವಾಪಸ್, ವಲಸೆ ನೀತಿ ಬದಲಾವಣೆ ಮತ್ತಿತರ ಪ್ರಮುಖ ನಿರ್ಧಾರಗಳನ್ನು ತತ್‌ಕ್ಷಣವೇ ಕೈಗೊಳ್ಳುವ ಸಾಧ್ಯತೆಗಳು ಬಲವಾಗಿವೆ.
ಕಮಲಾ ಪೂರ್ವಜರ ಹಳ್ಳಿಯಲ್ಲಿ ಕಲರ್‌ಫುಲ್ ಸಂಭ್ರಮ :
ಕಮಲಾ ಹ್ಯಾರೀಸ್ ಅಮೆರಿಕ ಉಪಾಧ್ಯಕ್ಷ ಹುದ್ದೆ ಅಲಂಕರಿಸುತ್ತಿರುವ ಹೊತ್ತಿನಲ್ಲೇ, ಭಾರತದಲ್ಲಿನ ಆಕೆಯ ಪೂರ್ವಜರ ಹಳ್ಳಿಯಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಕಮಲಾರ ಪೂರ್ವ ಜರು ವಾಸವಿದ್ದ ತಿರುವರೂರು ಜಿಲ್ಲೆಯ ಮನ್ನಾರ್‌ಗುಡಿ, ತುಳಸೆಂಥಿಪುರಮ್- ಪೈಂಗನಾಡು ಹಳ್ಳಿಗಳ ಪ್ರತೀ ಮನೆಯಲ್ಲೂ ಮಹಿಳೆಯರು ವಿಶೇಷ ರಂಗೋಲಿ ಬಿಡಿಸಿದ್ದಾರೆ. ಬಣ್ಣದ ಚುಕ್ಕಿಗಳಲ್ಲಿ “ಕಮಲಾಗೆ ಶುಭಾಶಯ’ ಬರೆದಿದ್ದಾರೆ. ಬುಧವಾರ ರಾತ್ರಿಯಿಡೀ ಪಟಾಕಿಗಳ ಅಬ್ಬರ ಕೇಳಿತ್ತು. ಉಪಾಧ್ಯಕ್ಷೆಯ ಫೋಟೋವನ್ನೊಳಗೊಂಡ ಡಿಜಿಟಲ್ ಬ್ಯಾನರ್‌ಗಳು ಹಳ್ಳಿಗಳುದ್ದಕ್ಕೂ ರಾರಾಜಿಸಿದ್ದವು. ಹಲವು ಉದ್ಯಮಿಗಳು ಕಮಲಾರ ಚಿತ್ರವುಳ್ಳ ಕ್ಯಾಲೆಂಡರ್‌ಗಳನ್ನು ಹಂಚಿದ್ದರು. ದಾರಿಯಲ್ಲಿ ಹಾದುಹೋಗುವ ಪ್ರತಿಯೊಬ್ಬರಿಗೂ ಸಿಹಿ ವಿತರಿಸಿದ್ದರು.
ಕೊನೆಗೂ ವೈಟ್‌ಹೌಸ್ ತೊರೆದ ಟ್ರಂಪ್ :
ವಾಷಿಂಗ್ಟನ್: ಅಧ್ಯಕ್ಷ ಚುನಾವಣೆಯಲ್ಲಿ ಪರಾಜಿತಗೊಂಡಿದ್ದ ಡೊನಾಲ್ಡ್ ಟ್ರಂಪ್ ವೈಟ್‌ಹೌಸ್‌ನಿಂದ ಹೊರಗೆ ಕಾಲಿಡುವ ಕಟ್ಟಕಡೆಯ ಕ್ಷಣದ ವರೆಗೂ ಅಮೆರಿಕವನ್ನು ಗೊಂದಲದಲ್ಲೇ ಮುಳುಗಿಸಿದ್ದರು. ಗಲಭೆಯ ಆತಂಕದಲ್ಲೇ ಅಮೆರಿಕ ರಾತ್ರಿ ಕಳೆದು ಬೆಳಗು ಕಂಡಿತ್ತು. ರಾಷ್ಟ್ರ ಅಕ್ಷರಶಃ ಇಬ್ಭಾಗವಾಗಿ, ವೈಟ್‌ಹೌಸ್ ಕಡೆಗೆ ನೋಡುತ್ತಿತ್ತು.
ನಿಯೋಜಿತ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಬಹಿಷ್ಕರಿಸಿದ ಮೊಟ್ಟ ಮೊದಲ ಅಮೆರಿಕ ಅಧ್ಯಕ್ಷ ಎಂಬ ಕಪ್ಪುಚುಕ್ಕೆಯೂ ಟ್ರಂಪ್‌ಗೆ ಅಂಟಿಕೊಂಡಿದೆ. ಕ್ಯಾಪಿಟಲ್ ದಾಂಧಲೆ, ಕೊರೊನಾ ಕಟ್ಟಿಹಾಕುವಲ್ಲಿ ವಿಫಲವಾದ ದ್ವಂದ್ವ ನೀತಿಯಿಂದಾದ 4 ಲಕ್ಷ ಸೋಂಕಿತರ ಸಾವು… ಟ್ರಂಪ್ ಅವರ 4 ವರ್ಷಗಳ ಸಾಧನೆಗಳನ್ನೇ ಮರೆಮಾಚಿದಂತೆ ತೋರುತ್ತಿತ್ತು.
ಕಡೇ ಕ್ಷಣದ ಗೌರವ: ಅಧಿಕಾರ ಹಸ್ತಾಂತರದ ಸಂಪ್ರದಾಯಗಳನ್ನೆಲ್ಲ ಟ್ರಂಪ್ ಮೂಟೆಕಟ್ಟಿ ಪಕ್ಕಕ್ಕಿಟ್ಟಂತೆ ಭಾಸವಾಗಿತ್ತಾದರೂ ನಿರ್ಗಮಿತ ಅಧ್ಯಕ್ಷನಿಗೆ ವೈಟ್‌ಹೌಸ್ ಗೌರವಯುತವಾಗಿ ತನ್ನ ಶಿಷ್ಟಾಚಾರ ಪಾಲಿಸಿತ್ತು. ಎಕ್ಸಿಟ್ ದ್ವಾರಕ್ಕೆ ರೆಡ್‌ಕಾಪೆìಟ್ ಹಾಸಿತ್ತು. ಕೆಲವು ನಿಮಿಷಗಳ ಕಾಲ ಮಿಲಿಟರಿ ಬ್ಯಾಂಡ್ ಸದ್ದೂ ಮೊಳಗಿತ್ತು. 21 ಗನ್ ಸಲ್ಯೂಟ್‌ನ ಮೊರೆತ, ಶ್ವೇತಭವನದಲ್ಲಿ ಪ್ರತಿಧ್ವನಿಯಾಗಿತ್ತು. ಇಷ್ಟು ಕಾಲ ಜತೆಗಿದ್ದ ಸಿಬಂದಿ ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು. ಭಾವುಕರಾಗಿದ್ದ ಮೆಲಿನಾ ಕಣ್ಣಲ್ಲಿ ನೀರು ಜಿನುಗಿತ್ತು. ಕಡೆಗೂ ಟ್ರಂಪ್ ಮಾಧ್ಯಮಗಳ ಕ್ಯಾಮೆರಾಗಳತ್ತ ಕೈಬೀಸದೆ, ಕಿರುನಗೆಯನ್ನೂ ಮೊಗದಲ್ಲಿ ಮೂಡಿಸಿಕೊಳ್ಳಲಾಗದೆ, ಟ್ರಂಪ್ ನಿಧಾನ ಹೆಜ್ಜೆ ಇಡುತ್ತಲೇ ಆಡಳಿತದ ಕೊನೆಯ ಕ್ಷಣ ಮುಗಿಸಿದ ದೃಶ್ಯಗಳು ಕಂಡುಬಂದವು. ನೂರಾರು ಸಿಬಂದಿ ಸಮ್ಮುಖದಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಏರ್‌ಫೋರ್ಸ್ ಒನ್‌ನ ವಿಶೇಷ ಹೆಲಿಕಾಪ್ಟರ್ ಏರಿ ನಿರ್ಗಮಿಸಿದರು.
ಮುಂದೆ ಟ್ರಂಪ್ ವಾಸವೆಲ್ಲಿ?: ಜೋ ಬೈಡೆನ್ ಪ್ರಮಾಣ ವಚನದ ಸಂಭ್ರಮದಲ್ಲಿರುವಾಗಲೇ ಟ್ರಂಪ್ ಫ್ಲೋರಿಡಾದ ಹಾದಿಯಲ್ಲಿದ್ದರು. ಅಟ್ಲಾಂಟಿಕ್ ಸಾಗರದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಐಷಾರಾಮಿ ಮಾರ್-ಎ- ಲ್ಯಾಗೋ ಕ್ಲಬ್, ಅವರ ಮುಂದಿನ ಬದುಕಿಗೆ ಸರ್ವಾಲಂಕೃತಗೊಂಡಿದೆ.
ಮೂರಿಶ್ ಮೆಡಿಟೆರೇನಿಯನ್ ಶೈಲಿಯಲ್ಲಿ, 128 ಕೋಣೆಗಳ ಈ ಖಾಸಗಿ ಕ್ಲಬ್ 20 ಎಕ್ರೆಯಲ್ಲಿ ಅದ್ದೂರಿ ನಿರ್ಮಾಣ ಕಂಡಿದೆ. ಸುಂದರ ಗಾಲ್ಫ್ ಮೈದಾನ ಟ್ರಂಪ್ ಅವರ ದುಃಖ, ಒತ್ತಡವನ್ನು ಕಣ್ಮರೆಯಾಗಿಸಲು ಕಾಯುತ್ತಿದೆ. ಕಳೆದ 4 ವರ್ಷಗಳಲ್ಲಿ ವಿರಾಮದ ದಿನಗಳನ್ನೂ ಟ್ರಂಪ್ ಇಲ್ಲಿಯೇ ಕಳೆದಿದ್ದರು.
ಹಿತಶತ್ರು ಸೇರಿ 143 ಮಂದಿಗೆ ಟ್ರಂಪ್ ಕ್ಷಮಾದಾನ :
ಅಧಿಕಾರ ಹಸ್ತಾಂತರದ ಕಟ್ಟಕಡೆಯ ಕ್ಷಣಗಳಲ್ಲಿ ಡೊನಾಲ್ಡ್ ಟ್ರಂಪ್ 143 ಮಂದಿಗೆ ಕ್ಷಮಾದಾನ ನೀಡಿದ್ದಾರೆ. ಒಂದು ಕಾಲದಲ್ಲಿ ಆಪ್ತಸ್ನೇಹಿತನಾಗಿದ್ದು, ನಂತರ ದೂರವಾಗಿದ್ದ ಮಾಜಿ ಕಾರ್ಯತಂತ್ರ ಅಧಿಕಾರಿ ಸ್ಟೀವ್ ಬ್ಯಾನ್ನಾನ್ ಕೂಡ ಈ ಪಟ್ಟಿಯಲ್ಲಿರುವುದು ವಿಶೇಷ. 2016ರಲ್ಲಿ ಟ್ರಂಪ್‌ರನ್ನು ಗೆಲ್ಲಿಸಲು ಹೆಗಲುಕೊಟ್ಟಿದ್ದ ಸ್ಟೀವ್‌ರನ್ನು, ಟ್ರಂಪ್ ಆಡಳಿತದ ಆರಂಭದಲ್ಲಿ ಮುಖ್ಯ ಕಾರ್ಯತಂತ್ರಾಧಿಕಾರಿ ಮತ್ತು ಹಿರಿಯ ಕೌನ್ಸೆಲರ್ ಆಗಿ ನೇಮಿಸಿದ್ದರು. ಅನಂತರ ಎಂಟೇ ತಿಂಗಳಲ್ಲಿ “ಫೈರ್ ಆ್ಯಂಡ್ ಫುÂರಿ’ ಕೃತಿಯಲ್ಲಿ ಟ್ರಂಪ್‌ರನ್ನು ಸ್ಟೀವ್ ನಿಂದಿಸಿದ್ದರಿಂದ ಕಿಕ್‌ಔಟ್ ಆಗಿದ್ದರು. “ವಿ ಬಿಲ್ಡ್ ದಿ ವಾಲ್’ ಅಭಿಯಾನದಲ್ಲಿನ ವಂಚನೆ ಆರೋಪ ಹಿನ್ನೆಲೆಯಲ್ಲಿ 2020ರಲ್ಲಿ ಇವರನ್ನು ಟ್ರಂಪ್ ಜೈಲಿಗಟ್ಟಿದ್ದರು. ಈಗ ಸ್ಟೀವ್ ಸೇರಿ ಹಲವು ಜೈಲುಹಕ್ಕಿಗಳಿಗೆ ಕ್ಷಮಾದಾನ ಸಿಕ್ಕಿದೆ.
ಟ್ರಂಪ್‌ರಿಂದ ಹೊಸ ಪಾರ್ಟಿ? :
ವೈಟ್‌ಹೌಸ್‌ನಿಂದ ನಿರ್ಗಮಿಸುತ್ತಿದ್ದಂತೆ ಟ್ರಂಪ್ ಹೊಸ ಪಾರ್ಟಿ ಕಟ್ಟುವ ವಿಚಾರದ ಬಗ್ಗೆ ಸುದ್ದಿಗಳೆದ್ದಿವೆ. “ಮೇಕ್ ಅಮೆರಿಕ ಗ್ರೇಟ್ ಅಗೇನ್’ ಪರಿಕಲ್ಪನೆಯಲ್ಲಿ ರಾಷ್ಟ್ರೀಯತಾ ವಾದಿ ಪಕ್ಷ ಕಟ್ಟಲು ಟ್ರಂಪ್ ಮಾಸ್ಟರ್‌ಪ್ಲ್ರಾನ್ ರೂಪಿಸಿದ್ದಾರೆ ಎಂದು ಅಮೆರಿಕದ ಕೆಲವು ಮಾಧ್ಯಮಗಳು ವರದಿಮಾಡಿವೆ. ಕ್ಯಾಪಿಟಲ್ ದಾಂಧಲೆ ಬಳಿಕ ಸ್ವಪಕ್ಷೀಯ ಧುರೀಣರಾದ ಮೈಕ್ ಪೆನ್ಸ್, ಮಿಚ್ ಮ್ಯಾಕ್‌ಕಾನೆಲ್ ಸೇರಿದಂತೆ ಹಲವರಿಂದ ಆಕ್ಷೇಪಕ್ಕೆ ಗುರಿಯಾದ ಟ್ರಂಪ್ ಶೀಘ್ರವೇ ರಿಪಬ್ಲಿಕನ್‌ನಿಂದ ಹೊರ ನಡೆಯುತ್ತಾರೆ ಎಂಬ ಮಾತೂ ಕೇಳಿಬಂದಿದೆ. ಇತ್ತೀಚೆಗಷ್ಟೇ ಮಾರ್ನಿಂಗ್ ಕನ್ಸಲ್ಟ್- ಪೊಲಿಟಿಕೊ ಸರ್ವೆ, “ಟ್ರಂಪ್ 2024ರ ಚುನಾವಣೆಗ ನಿಂತರೂ ಅಮೆರಿಕದ ಶೇ.42 ಮಂದಿ ಬೆಂಬಲಿಸಿದ್ದಾರೆ’ ಎಂದಿತ್ತು. ರಿಪಬ್ಲಿಕನ್ ಹೊರತಾಗಿಯೂ ಟ್ರಂಪ್ ಪ್ರತ್ಯೇಕ ಇಮೇಜ್ ಬೆಳೆಸಿಕೊಂಡಿದ್ದಾರೆ ಎಂದು ವಿಶ್ಲೇಷಿಸಿತ್ತು.
ಟ್ರಂಪ್ ಗುಡುಗು; ಮಗಳ ಕಣ್ಣೀರು :
ನಿರ್ಗಮನದ ವೇಳೆ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಡೊನಾಲ್z ಟ್ರಂಪ್, “ಇದು ಅಂತ್ಯ ಅಲ್ಲ… ಆರಂಭ’ ಎಂದಿದ್ದಾರೆ. “ಈ 4 ವರ್ಷಗಳ ಅಧಿಕಾರಾವಧಿ ನನಗೇ ನಂಬಲಾಗುತ್ತಿಲ್ಲ. ನಾವು ಬಹಳ ಶ್ರಮಪಟ್ಟು ಕೆಲಸ ಮಾಡಿದ್ದೇವೆ. ಆ್ಯತ್ಲೀಟ್‌ಗಳಾಗಿ ಹೇಳುವುದಾದರೆ, ನಾವು ಎಲ್ಲ ನೆನಪುಗಳನ್ನೂ ಮೈದಾನದಲ್ಲಿ ಬಿಟ್ಟು ಹೊರಟಿದ್ದೇವೆ. ನಾನು ಸದಾ ನಿಮ್ಮೊಂದಿಗಿರುತ್ತೇನೆ, ನಿಮಗಾಗಿ ಹೋರಾಡುತ್ತೇನೆ’ ಎಂದು ಭಾವುಕರಾದರು. ಆಡಳಿತದ ಸಾಧನೆಗಳನ್ನು ಚುಟುಕಾಗಿ ಶ್ಲಾ ಸಿದರು. “ಹೊಸ ಆಡಳಿತಕ್ಕೆ ಶುಭಾಶಯಗಳು. ಸುರಕ್ಷಿತ ಮತ್ತು ಸಮೃದ್ಧ ಅಮೆರಿಕಕ್ಕಾಗಿ ಅವರಿಗೆ ಅದ್ಭುತ ಯಶಸ್ಸು ಸಿಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಬೈಡೆನ್ ಹೆಸರು ಪ್ರಸ್ತಾವಿಸದೆ, ವಿದಾಯ ಭಾಷಣ ಮುಗಿಸಿದರು.