ಗದಗ: ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಕೇಂದ್ರ ಸರಕಾರ ಹೊರಡಿಸಿದ್ದ ಲಾಕ್‌ಡೌನ್ ನಿಂದಾಗಿ ಜಿಲ್ಲೆಯಲ್ಲಿ ಸಿಲುಕಿದ್ದ ವಿವಿಧ ರಾಜ್ಯಗಳ ಒಟ್ಟು 466 ವಲಸೆ ಕಾರ್ಮಿಕರನ್ನು ವಿಶೇಷ ಶ್ರಮಿಕ ರೈಲಿನ ಮೂಲಕ ತಮ್ಮ ಊರುಗಳಿಗೆ ರವಾನಿಸಲಾಗಿದೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿ ಸುಧಾ ಗರಗ ತಿಳಿಸಿದ್ದಾರೆ.
ಈ ಪೈಕಿ ಬಿಹಾರದ 116, ಉತ್ತರ ಪ್ರದೇಶದ 193, ರಾಜಸ್ಥಾನ 24, ಜಾರ್ಖಂಡ್ 56, ಒರಿಸ್ಸಾ 49, ಪಶ್ಚಿಮ ಬಂಗಾಳ 16, ಆಂಧ್ರಪ್ರದೇಶದ 12 ಜನ ವಲಸೆ ಕಾರ್ಮಿಕರ ವಿವರಗಳನ್ನು ಸೇವಾಸಿಂಧು ತಂತ್ರಾಂಶದಲ್ಲಿ ದಾಖಲಿಸಿ, ಜಿಲ್ಲಾಡಳಿತ ಭವನದಿಂದ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದ ಬಸ್‌ಗಳಲ್ಲಿ ಹುಬ್ಬಳ್ಳಿ ರೈಲ್ವೇ ನಿಲ್ದಾಣಕ್ಕೆ ತಲುಪಿಸಿ, ಅಲ್ಲಿಂದ ಶ್ರಮಿಕ ರೈಲಿನಲ್ಲಿ ತಮ್ಮ ತಮ್ಮ ರಾಜ್ಯಗಳಿಗೆ ತೆರಳುವಂತೆ ವ್ಯವಸ್ಥೆ ಮಾಡಲಾಗಿದೆ. ಲಾಕ್‌ಡೌನ್ ಜಾರಿಯಿಂದಾಗಿ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರು.
ಅದರಂತೆ ಅಂತರರಾಜ್ಯ ವಲಸೆ ಕಾರ್ಮಿಕರಿಗೆ ತೊಂದರೆಯಾಗಬಾರದು ಎಂಬ ಸದುದ್ದೇಶದಿಂದ ರಾಜ್ಯ ಸರ್ಕಾರದ ಆದೇಶದನ್ವಯ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ ಗುರುತಿಸಿದ್ದ 629 ವಲಸೆ ಕಾರ್ಮಿಕರಿಗೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಯಿತು. ಜಿಲ್ಲೆಯ ಕಟ್ಟಡ, ಇತರ ನಿರ್ಮಾಣ ಕಾರ್ಮಿಕರು ಮತ್ತು ಅಂಸಂಘಟಿತ ವಲಯದ ಕಾರ್ಮಿಕರಿಗೆ ಅವರ ಸುರಕ್ಷತೆಗಾಗಿ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಮಾಸ್ಕ್, ಸೋಪ್ ಮತ್ತು ಸ್ಯಾನಿಟೈಸರ್ ಹಂಚಿಕೆ ಮಾಡಲಾಗಿದೆ. ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ನಿಯಮಿತವಾಗಿ ಕಾರ್ಮಿಕರ ವೈದ್ಯಕೀಯ ತಪಾಸಣೆ ಮಾಡಿಸಲಾಯಿತು. ಅಲ್ಲದೇ, ಇಲಾಖೆಯ ಸಹಾಯವಾಣಿಯಲ್ಲಿ ಆಹಾರ ಧಾನ್ಯ ಪೂರೈಕೆಯ ಕೋರಿಕೆ ಬಂದ ಸಂದರ್ಭದಲ್ಲಿ ಅಗತ್ಯ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 25,080 ನೋಂದಾಯಿತ ಕಟ್ಟಡ ಕಾರ್ಮಿಕರಿದ್ದಾರೆ. ರಾಜ್ಯ ಕಲ್ಯಾಣ ಕಾರ್ಮಿಕ ಮಂಡಳಿಯಿಂದ ತಲಾ 5 ಸಾವಿರ ಪರಿಹಾರಧನವನ್ನು ಒಟ್ಟು 16,639 ಕಾರ್ಮಿಕರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ. ಅದರಂತೆ ಇನ್ನುಳಿದ ಫಲಾನುಭವಿಗಳ ಖಾತೆಗೆ ಪರಿಹಾರ ಜಮಾ ಮಾಡುವ ಪ್ರಕ್ರಿಯೆ ನಡೆದಿದೆ ಎಂದು ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.