ಮಂಗಳೂರು: “ನನ್ನ ಕೈಯಲ್ಲಿ 15 ದಿನಗಳ ಮಗುವಿನ ಜೀವ ರಕ್ಷಣೆಯ ಹೊಣೆ ಇದೆ. ಮಗುವಿನ ಸಮೀಪ ಕಣ್ಣೀರುಡುವ ತಾಯಿ… ಈ ಎರಡು ದೃಶ್ಯ ನನ್ನನ್ನು ನಾಲ್ಕು ಗಂಟೆಗಳಲ್ಲಿ 452 ಕಿ.ಮೀ. ದೂರ ಕ್ರಮಿಸುವಂತೆ ಮಾಡಿತ್ತು. ಈಗ ಮನಸ್ಸಲ್ಲಿ ಸಾರ್ಥಕ ಭಾವವಿದೆ’.
ಹೀಗೆ ಹೇಳಿದವರು 15 ದಿನಗಳ ಮಗುವಿನ ಪ್ರಾಣ ಉಳಿಸಲು 452 ಕಿ.ಮೀ. ದೂರವನ್ನು 4 ಗಂಟೆ 45 ನಿಮಿಷಗಳಲ್ಲಿ ಕ್ರಮಿಸಿದ 34 ವರ್ಷದ ಆಂಬ್ಯುಲೆನ್ಸ್ ಡ್ರೈವರ್ ಹಸನ್ ದೇಲಿ.
ಕಾಸರಗೋಡಿನ ನಿವಾಸಿ ಸಾನಿಯಾ ಮತ್ತು ಮಿಥಾ ದಂಪತಿಯ 15 ದಿನಗಳ ಕಂದಮ್ಮ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಪ್ರಾಣ ಉಳಿಸುವ ಶಸ್ತ್ರಚಿಕಿತ್ಸೆಗಾಗಿ ಎರ್ನಾಕುಳಂ ಆಸ್ಪತ್ರೆಗೆ ದಾಖಲಿಸಲು ಹೆತ್ತವರು ನಿರ್ಧರಿಸಿದ್ದರು. ಅದಕ್ಕಾಗಿ ಕಾಸರಗೋಡಿನ ಚಾರಿಟಿಯೊಂದರ ಆ್ಯಂಬುಲೆನ್ಸ್ ಬುಕ್ ಮಾಡಿದ್ದು, ಅದರ ಚಾಲಕ ಕಾಸರಗೋಡಿನ ಹಸನ್ 452 ಕಿ.ಮೀ. ಯಾನವನ್ನು 4.45 ತಾಸುಗಳಲ್ಲಿ ಪೂರೈಸಿದರು!
ಈ ಮಹಾ ಸಾಹಸ ಯಾನವನ್ನು ಆ್ಯಂಬ್ಯುಲೆನ್ಸ್ ಸಿಬಂದಿ ಫೇಸ್‌ಬುಕ್ ಲೈವ್ ಮಾಡಿದ್ದು, ಕೇರಳ, ಕರ್ನಾಟಕದ ಜನರು, ಪೊಲೀಸ್ ಸಿಬಂದಿಯ ಸಹಕಾರ ಗುರಿ ತಲುಪುವಂತೆ ಮಾಡಿತು.
ಫೇಸ್‌ಬುಕ್ ಲೈವ್ ಆದೊಡನೆ ಕೇರಳದ ಆರೋಗ್ಯ ಸಚಿವರು ಮಗುವನ್ನು ಎರ್ನಾಕುಳಂನ ಆಸ್ಪತ್ರೆಗೆ ಕರೆತರಲು ಆದೇಶಿಸಿದ್ದು, ಚಿಕಿತ್ಸೆಗೆ ಸರಕಾರವೇ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು. ಆಗ ಹಸನ್ ಅವರ ವೇಗ ಇನ್ನಷ್ಟು ಹೆಚ್ಚಿತ್ತು. ಮಗುವಿನ ರಕ್ಷಣೆಗೆ ತನ್ನೊಂದಿಗೆ ಸಾವಿರಾರು ಜನ ಇದ್ದಾರೆ ಎನ್ನುವ ಭಾವ ಇದಕ್ಕೆ ಕಾರಣ ಎಂದಿದ್ದಾರೆ ಹಸನ್.
ಸಾರ್ಥಕ ಭಾವ
ಹಸನ್ ಚಿತ್ರಗಳು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ನನಗೆ ಆ ಮಗುವಿನ ಜೀವ ಉಳಿಸಿದ ಸಾರ್ಥಕತೆ ಇದೆ. ಅಷ್ಟು ಸಾಕು’ ಎನ್ನುತ್ತಾರೆ ಹಸನ್.