Advertisement

45 ಮಂದಿ ತಹಶೀಲ್ದಾರರಿಗೆ ಕೆಲಸವೇ ನೀಡದೆ ಅಸಡ್ಡೆ; ಸ್ಥಳ ನಿಯುಕ್ತಿಗೊಳಿಸದ ಸರಕಾರ

01:17 AM Oct 21, 2020 | mahesh |

ಕಲಬುರಗಿ: ಕೊರೊನಾದಂಥ ಕಷ್ಟಕಾಲದಲ್ಲೂ ರಾಜ್ಯ ಸರಕಾರವು ರಾಜ್ಯದ ವಿವಿಧೆಡೆಯ 45ಕ್ಕೂ ಅಧಿಕ ತಹಶೀಲ್ದಾರರಿಗೆ ಸ್ಥಳ ನಿಯುಕ್ತಿಗೊಳಿಸಿಲ್ಲ.

Advertisement

ವಿಶೇಷವೆಂದರೆ ಇವರೆಲ್ಲರೂ ಉತ್ತಮ ಸೇವಾನುಭವ ಹೊಂದಿರುವ ಗ್ರೇಡ್‌-1 ತಹಶೀಲ್ದಾರರಾಗಿದ್ದಾರೆ. ಇವರ ಸ್ಥಳ ನಿಯುಕ್ತಿ ಮಾಡದೆ ಆಯಾ ಇಲಾಖೆಗೆ ನಷ್ಟ ಉಂಟುಮಾಡುವುದರ ಜತೆಗೆ ಸಮಾಜ ಸೇವಾ ಕಾರ್ಯಗಳು ಸುಗಮವಾಗಿ ನಡೆಯುವುದಕ್ಕೂ ಅಡ್ಡಗಾಲು ಹಾಕಿದಂತಾಗಿದೆ.

ಇವರ ಪೈಕಿ 10 ಮಂದಿ ಒಂದೂವರೆ ವರ್ಷದಿಂದ ಕೆಲಸ ಮಾಡದೆ ಮನೆಯಲ್ಲಿದ್ದಾರೆ. ಅವರಿಗೆ ವೇತನ ಕೂಡ ಆಗಿಲ್ಲ. ಹೀಗಾಗಿ ಇವರೆಲ್ಲ ತೀವ್ರ ಸಂಕಷ್ಟದಲ್ಲಿದ್ದಾರೆ. 15 ತಹಶೀಲ್ದಾರರು ಏಳೆಂಟು ತಿಂಗಳು ಮತ್ತು ಉಳಿದವರು ನಾಲ್ಕೈದು ತಿಂಗಳಿನಿಂದ ಮನೆಯಲ್ಲೇ ಇದ್ದಾರೆ.

ಇವರಲ್ಲಿ ಬಹುತೇಕ ಎಲ್ಲ ತಹಶೀಲ್ದಾರರೂ ಉತ್ತಮ ಸೇವೆ ಯಿಂದ ಹೆಸರು ಮಾಡಿದ್ದಾರೆ. ಇವರಲ್ಲಿ 10ರಿಂದ 12 ಮಂದಿ ತಹಶೀಲ್ದಾರರು ಇನ್ನಾರು ತಿಂಗಳಲ್ಲಿ ಸಹಾಯಕ ಆಯುಕ್ತರ ಹುದ್ದೆಗೆ ಭಡ್ತಿ ಹೊಂದಲಿದ್ದಾರೆ. ಕೆಲವರು ನಿವೃತ್ತಿಯ ಅಂಚಿಗೆ ಬಂದಿದ್ದಾರೆ.

ಬೇರೆ ಇಲಾಖೆಗಳಲ್ಲೂ ಇದೇ ಸಮಸ್ಯೆ
ಪೊಲೀಸ್‌ ಇಲಾಖೆ, ಭೂ ದಾಖಲೆ, ಸಮಾಜ ಕಲ್ಯಾಣ ಇಲಾಖೆಗಳಲ್ಲೂ ಅನೇಕ ಅಧಿಕಾರಿಗಳು ಹುದ್ದೆ ನಿರೀಕ್ಷೆಯಲ್ಲಿದ್ದಾರೆ. ಹುದ್ದೆ ನಿರೀಕ್ಷೆಯಲ್ಲಿರುವವರು ಶಾಸಕರ ಶಿಫಾರಸು ಪತ್ರ ಕಡ್ಡಾಯ ತರಬೇಕು ಎನ್ನುವ ನಿಯಮ ಮತ್ತು ಪತ್ರ ಪಡೆಯುವಲ್ಲಿ ಕೆಲವು ಒಪ್ಪಂದಗಳಿಗೆ ಅಸ್ತು ಎನ್ನದಿರುವ ಹಿನ್ನೆಲೆಯಲ್ಲಿ ಹೀಗಾಗುತ್ತಿದೆ ಎನ್ನಲಾಗುತ್ತಿದೆ.

Advertisement

40 ತಹಶೀಲ್ದಾರ್‌ಗಳು ಹುದ್ದೆ ನಿರೀಕ್ಷೆಯಲ್ಲಿರುವುದು ಗಮನದಲ್ಲಿದೆ. ಚುನಾವಣೆ ಮುಗಿದ ಅನಂತರ ಸಚಿವರೊಂದಿಗೆ ಚರ್ಚಿಸಿ ಸ್ಥಳ ನಿಯುಕ್ತಿಗೆ ಕ್ರಮ ಕೈಗೊಳ್ಳಲಾಗುವುದು.
– ಎಂ. ಮಹೇಶ್ವರರಾವ್‌, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next