Advertisement

ದೌರ್ಜನ್ಯದಿಂದ ನೊಂದ ಎಸ್ಸಿ-ಎಸ್ಟಿ ಸಂತ್ರಸ್ತರಿಗೆ 45 ಲಕ್ಷ ರೂ. ಪರಿಹಾರ

10:56 AM Jun 30, 2020 | Suhan S |

ವಿಜಯಪುರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶೋಷಣೆಗೆ ಒಳಗಾದ ಒಟ್ಟು 23 ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 45.38 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಈ ವಿಷಯ ತಿಳಿಸಲಾಯಿತು.

ಜಿಲ್ಲೆಯಲ್ಲಿ 1-1-2020ರಿಂದ 31-5-2020ರವರೆಗೆ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಮೇಲೆ 33 ದೌರ್ಜನ್ಯ ಪ್ರಕರಣ ದಾಖಲಾಗಿವೆ. ಇದರಲ್ಲಿ 23 ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಈಗಾಗಲೇ 45.38 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. 10 ಪ್ರಕರಣಗಳಲ್ಲಿ 11.75 ಲಕ್ಷ ವಿತರಿಸುವುದು ಬಾಕಿ ಇದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು. ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂಧ) ಅಧಿ  ನಿಯಮ 1989ರಡಿ ದಾಖಲಾದ ದೌರ್ಜನ್ಯ ಪ್ರಕರಣಗಳಲ್ಲಿ ಈ ಪರಿಹಾರ ಧನ ಮಂಜೂರು ಮಾಡಲಾಗಿದೆ. 2020ರಲ್ಲಿ ನ್ಯಾಯಾಲಯಗಳಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ 16 ಜನ ಬಿಡುಗಡೆ ಹೊಂದಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗಗಳಿಗೆ ಅವಶ್ಯಕವಿರುವ ಸ್ಮಶಾನ ಭೂಮಿ ಕಾಯ್ದಿರಿಸಬೇಕು. ಆದ್ಯತೆ ಮೇಲೆ ಅವಶ್ಯಕತೆಯಿರುವ ಕಡೆಯಲ್ಲಿ ಭೂಮಿ ಖರೀದಿಸಬೇಕು. ಈಗಾಗಲೇ ಜಿಲ್ಲೆಯ 144 ಗ್ರಾಮಗಳಿಗೆ ಮತ್ತು ಉಪವಿಭಾಗ ಮಟ್ಟದಲ್ಲಿ ಸ್ಮಶಾನ ಭೂಮಿ ಸೌಲಭ್ಯ ಕಲ್ಪಿಸಲಾಗಿದೆ. ಅದರಂತೆ ತೊರವಿ ಗ್ರಾಮದಲ್ಲಿ 4 ಎಕರೆ ಜಮೀನನ್ನು ಸ್ಮಶಾನಕ್ಕಾಗಿ ಒದಗಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಡಿಸಿ ವೈ.ಎಸ್‌. ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲೆಯಾದ್ಯಂತ ದೌರ್ಜನ್ಯ ಪ್ರಕರಣಗಳು ಹೆಚ್ಚು ಹೆಚ್ಚು ನಿಯಂತ್ರಣಗೊಳ್ಳಬೇಕು. ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ನಿರ್ದೇಶನ ನೀಡಿದರು. ಜಿಲ್ಲೆಯ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಗೆ ಬಂದ ಅನುದಾನವನ್ನು ಸದರಿ ಕಾರ್ಯಕ್ರಮಗಳಿಗೆ ಮಾತ್ರ ಬಳಕೆ ಮಾಡಬೇಕು. ಕೃಷಿ ಇಲಾಖೆ ವ್ಯಾಪ್ತಿಯಲ್ಲಿ 1 ಎಕರೆಗಿಂತ ಕಡಿಮೆ ಜಮೀನು ಇರುವ ರೈತರಿಗೆ ಸ್ಪ್ರಿಂಕ್ಲರ್‌ ಪೈಪ್‌ ನೀಡುವ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

Advertisement

ವಿಜಯಪುರ ನಗರ ವ್ಯಾಪ್ತಿಯಲ್ಲಿ ವಿದ್ಯಾವಂತ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿ ನೀಡಲು ಕ್ರಮ ಕೈಗೊಳ್ಳಬೇಕು ಎಂದರು. ಜಿಪಂ ಸಿಇಒ ಗೋವಿಂದರೆಡ್ಡಿ, ಎಎಸ್ಪಿ ರಾಮ ಅರಿಸಿದ್ದಿ, ಉಪ ವಿಭಾಗಾಧಿಕಾರಿ ಸ್ನೇಹಲ್‌ ಲೋಖಂಡೆ, ಡಿಎಸ್ಪಿ ಲಕ್ಷ್ಮೀನಾರಾಯಣ, ಸಮಿತಿಯ ಸದಸ್ಯರಾದ ಅಡಿವೆಪ್ಪ ಸಾಲಗಲ್ಲ, ಅರವಿಂದ ಸಾಲವಾಡಗಿ, ರಾಜಶೇಖರ ಕೂಚಬಾಳ, ಸುರೇಶ ಮಣ್ಣೂರ, ವಿನಾಯಕ ಗುಣಸಾಗರ, ಬಸವರಾಜ ಪೂಜಾರಿ, ಗಣಪತಿ ಬಾಣಿಕೋಲ, ಶಿವಾನಂದ ಪಟ್ಟೇದ, ಅಶೋಕ ಕರೆಕಲ್ಲ, ಮಹೇಶ ಪೋದ್ದಾರ ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next