ಜಪ್ಪು: ಜಪ್ಪು ಮಹಾಕಾಳಿ ಪಡ್ಪು ವ್ಯಾಪ್ತಿಯಲ್ಲಿ ಸ್ಮಾರ್ಟ್‌ಸಿಟಿ ಕಾಮ ಗಾರಿಗಳಿಗೆ ವೇಗ ನೀಡುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಿಂದ ಜಪ್ಪು ಮಹಾಕಾಳಿ ಪಡ್ಪು ರೈಲ್ವೇ ಕೆಳಸೇತುವೆ ಮೂಲಕ ಮೋರ್ಗನ್ಸ್ ಗೇಟ್ ಜಂಕ್ಷನ್ ವರೆಗೆ ಮಾ.28ರಿಂದ ಮೇ 11ರವರೆಗೆ 45 ದಿನಗಳ ಕಾಲ ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ. ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಈ ಹಿನ್ನೆಲೆಯಲ್ಲಿ ಆದೇಶ ಹೊರಡಿಸಿದ್ದು, ರಾಷ್ಟ್ರೀಯ ಹೆದ್ದಾರಿಯಿಂದ ಮಂಗ ಳೂರು ನಗರ ಪ್ರವೇಶಕ್ಕೆ ಪರ್ಯಾಯ ರಸ್ತೆ ಬಳಸುವಂತೆ ಸೂಚಿಸಿದ್ದಾರೆ.
ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುವ ವೇಳೆ ರಾಷ್ಟ್ರೀಯ ಹೆದ್ದಾರಿ 66ರಿಂದ ಮಹಾಕಾಳಿ ಪಡ್ಪು ರೈಲ್ವೇ ಕೆಳಸೇತುವೆ ಮುಖಾಂತರ ಮೋರ್ಗನ್ ಗೇಟ್ ಜಂಕ್ಷನ್‌ವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಪ್ರಯಾಣಿಕರ ಗಮನಕ್ಕೆ ನಗರದ ಒಳಗಡೆಯಿಂದ ರಾಷ್ಟ್ರೀಯ ಹೆದ್ದಾರಿ 66ರ ಕಡೆಗೆ ಸಂಚರಿಸುವ ಎಲ್ಲ ವಾಹನಗಳು ವೆಲೆನ್ಸಿಯಾ ರಸ್ತೆ ಮೂಲಕ ಕಂಕನಾಡಿ ವೃತ್ತಕ್ಕೆ ಬಂದು ಅಲ್ಲಿಂದ ಬಲಕ್ಕೆ ತಿರುಗಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಪ್ರವೇಶಿಸಿ ಮುಂದಕ್ಕೆ ಸಂಚರಿಸಬೇಕಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರಿಂದ ಮಹಾಕಾಳಿಪಡ್ಪು ಮೂಲಕ ಮಂಗಳೂರು ನಗರಕ್ಕೆ ಬರುವ ಎಲ್ಲ ವಾಹನಗಳು ಪಂಪ್‌ವೆಲ್ ಮಹಾವೀರ ವೃತ್ತದಲ್ಲಿ ಎಡಕ್ಕೆ ತಿರುಗಿ ಹಳೆ ಕಂಕನಾಡಿ ರಸ್ತೆ ಮೂಲಕ ನಗರಕ್ಕೆ ಪ್ರವೇಶಿಸಿ ಮುಂದಕ್ಕೆ ಸಂಚರಿಸಬೇಕಾಗಿದೆ. ನಾಲ್ಕು ಪಥದ ಸಂಪರ್ಕ ರಸ್ತೆ ಜಪ್ಪು ರಾಷ್ಟ್ರೀಯ ಹೆದ್ದಾರಿ-66 ರಿಂದ ಮೋರ್ಗನ್ಸ್ ಗೇಟ್ ಜಂಕ್ಷನ್ ವರೆಗೆ ನಾಲ್ಕು ಪಥದ ಸಂಪರ್ಕ ರಸ್ತೆ, ಮಹಾಕಾಳಿ ಪಡ್ಪುವಿನಲ್ಲಿ ಆರ್‌ಯುಬಿ ನಿರ್ಮಾಣ ಕಾರ್ಯ ನಡೆಯಲಿದೆ. ಈ ಪೈಕಿ ರಾಷ್ಟ್ರೀಯ ಹೆದ್ದಾರಿಯಿಂದ ಕೊಂಚ ಮುಂಭಾಗದಿಂದ ತಿರುವು ಭಾಗದವರೆಗೆ ಒಂದು ಪಾರ್ಶ್ವದಲ್ಲಿ ಕಾಂಕ್ರೀಟ್ ಕೆಲಸ ಆಗಿದೆ. ಉಳಿದ ಕಾಮಗಾರಿ ನಡೆಯಲಿದೆ.
ಸದ್ಯ ಸಂಪರ್ಕ ರಸ್ತೆಯು 4.50 ಮೀ.ನಿಂದ 6 ಮೀ.ವರೆಗೆ ಇದ್ದು, ಈ ರಸ್ತೆ ಮೇಲ್ದರ್ಜೆಗೇರಲಿದೆ. ನೂತನ ಯೋಜನೆಯ ಪ್ರಕಾರ 1,078 ಮೀ. ಉದ್ದದ ರಸ್ತೆಯನ್ನು 18 ಮೀ.ಗೆ ವಿಸ್ತರಿಸಿ 4 ಪಥದ ಕಾಂಕ್ರೀಟ್ ರಸ್ತೆ, ಮೀಡಿಯನ್, ದಾರಿದೀಪಗಳು, ಎರಡೂ ಭಾಗಗಳಲ್ಲಿ ಆರ್‌ಸಿಸಿ ಮಳೆ ನೀರು ಚರಂಡಿ, ತಗ್ಗು ಪ್ರದೇಶದ ಭಾಗದಲ್ಲಿ ಆರ್‌ಸಿಸಿ ತಡೆಗೋಡೆ, ಗ್ರಾನೈಟ್ ಕಲ್ಲು ಪಿಚ್ಚಿಂಗ್ ಒಳಗೊಂಡಿದೆ.
ಪಂಪ್‌ವೆಲ್‌ನಲಿ ಟ್ರಾಫಿಕ್ ಕಿರಿಕಿರಿ ಸಾಧ್ಯತೆ!
ತೊಕ್ಕೊಟ್ಟು ಭಾಗದಿಂದ ಮಂಗಳೂರು ನಗರಕ್ಕೆ ಪ್ರವೇಶಿಸುವ ಬಹುತೇಕ ವಾಹನಗಳು ಜಪ್ಪಿನಮೊಗರು ಮುಖೇನ ತೆರಳುತ್ತಿತ್ತು. ಆದರೆ ಮುಂದಿನ 45 ದಿನ ಮೋರ್ಗನ್ ಗೇಟ್ ರಸ್ತೆ ಬಂದ್ ಆಗುವ ಕಾರಣದಿಂದ ವಾಹನಗಳು ರಾಷ್ಟ್ರೀಯ ಹೆದ್ದಾರಿ ಮೂಲಕ ಪಂಪ್‌ವೆಲ್ ಗೆ ಬಂದು ನಗರ ಪ್ರವೇಶಿಸಬೇಕಾಗುತ್ತದೆ. ಇದರಿಂದಾಗಿ ಮೊದಲೇ ವಾಹನ ದಟ್ಟಣೆ ಎದುರಿಸುತ್ತಿರುವ ಪಂಪ್ ವೆಲ್‌ನಲ್ಲಿ ಮತ್ತಷ್ಟು ವಾಹನ ಒತ್ತಡ ಎದುರಿಸಬೇಕಾದ ಅನಿವಾರ್ಯವಿದೆ. ಜತೆಗೆ ನಗರದಿಂದ ತೆರಳುವ ವಾಹನಗಳು ಕೂಡ ಕಂಕನಾಡಿ ಭಾಗದಿಂದ ಪಂಪ್‌ವೆಲ್ ಮೂಲಕ ತೆರಳಬೇಕಾದ ಹಿನ್ನೆಲೆಯಲ್ಲಿ ಕಂಕನಾಡಿ-ಪಂಪ್‌ವೆಲ್‌ನಲ್ಲಿ ಸಂಚಾರ ದಟ್ಟಣೆ ಎದುರಾಗುವ ಸಾಧ್ಯತೆಯಿದೆ.
ಸ್ಮಾರ್ಟ್‌ಸಿಟಿಯಿಂದ ರೈಲ್ವೇ ಆರ್‌ಯುಬಿ ಯೋಜನೆ
ಕೇರಳ-ಮಂಗಳೂರು ಮಧ್ಯೆ ಪ್ರತಿನಿತ್ಯ ಹತ್ತಾರು ರೈಲುಗಳು ಸಂಚರಿಸುತ್ತವೆ. ಈ ರೈಲು ಜಪ್ಪು ಮಹಾಕಾಳಿಪಡ್ಪು ಮೂಲಕ ಸಾಗುವ ಕಾರಣದಿಂದ ವಾಹನ ಸಂಚಾರ ಸ್ಥಗಿತಗೊಳ್ಳುತ್ತದೆ. ಈ ಕಾರಣಕ್ಕಾಗಿ ರಸ್ತೆ ಬ್ಲಾಕ್ ಆಗಿ ತೊಕ್ಕೊಟ್ಟು-ಮಂಗಳೂರು ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವ ಪ್ರಮೇಯ ಇಲ್ಲಿ ನಿತ್ಯದ ಸಂಗತಿ. ಇಕ್ಕಟ್ಟಿನ ರಸ್ತೆಯಲ್ಲಿ ವಾಹನ ಸಂಚರಿಸಲೂ ಆಗದೆ ಸಂಕಷ್ಟವೇ ಎದುರಾಗುತ್ತಿದೆ. ಇದೇ ಕಾರಣಕ್ಕೆ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಇಲ್ಲಿ ಹೊಸ ಸಂಪರ್ಕ ರಸ್ತೆ ಮತ್ತು ಆರ್‌ಯುಬಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.