ಮುಂಬಯಿ: ಅಮೆರಿಕದ ಪ್ರಸಿದ್ಧ ಮಾರುಕಟ್ಟೆ ದೈತ್ಯ ಅಮೆಜಾನ್ ಭಾರತದಲ್ಲಿ 4472 ಕೋಟಿ ರೂ.ಗಳನ್ನು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚುವರಿಯಾಗಿ ಹೂಡಿಕೆ ಮಾಡಿದೆ.
ಅಮೆಜಾನ್ ಮಾರಾಟ ವ್ಯವಸ್ಥೆಗೆ 3400 ಕೋಟಿ ರೂ, ಅಮೆಜಾನ್ ಪೇ ಇಂಡಿಯಾದಲ್ಲಿ 900 ಕೋಟಿ ರೂ., 172.50 ಕೋಟಿ ರೂ.ಗಳನ್ನು ಅಮೆಜಾನ್ ರಿಟೇಲ್ ಇಂಡಿಯಾದಲ್ಲಿ ಹೂಡಿಕೆ ಮಾಡಿದೆ.
ಅಮೆಜಾನ್ ಇಂಡಿಯಾದ ನಷ್ಟವು ಕಡಿಮೆಯಾದ ಬೆನ್ನಲ್ಲೇ ಈ ಹೂಡಿಕೆಯನ್ನು ಕಂಪೆನಿ ಮಾಡಿದೆ. ಅಮೆಜಾನ್ ಪ್ರತಿಸ್ಪರ್ಧಿ ಫ್ಲಿಪ್‌ಕಾರ್ಟ್ ಭಾರತದಲ್ಲಿ ನೂತನವಾಗಿ ದಿನಸಿ/ಆಹಾರ ವಸ್ತುಗಳ ಮಾರಾಟಕ್ಕಾಗಿ ಫಾರ್ಮರ್ ಮಾರ್ಟ್ ತೆರೆಯಲು ಮುಂದಾದ ಬೆನ್ನಲ್ಲೇ ಅಮೆಜಾನ್ ಈ ಹೂಡಿಕೆಯನ್ನು ಮಾಡಿದೆ. ಫ್ಲಿಪ್‌ಕಾರ್ಟ್ ಉದ್ದೇಶಿತ ವ್ಯವಹಾರಕ್ಕಾಗಿ 2 ಸಾವಿರ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದೆ ಎನ್ನಲಾಗಿದ್ದು, ಹೊಸದಾಗಿ ವಿತರಣೆ ವ್ಯವಸ್ಥೆ, ಸಂಗ್ರಹಗಾರಗಳನ್ನು ವ್ಯವಸ್ಥೆ ಮಾಡಲಿದೆ.
ಏತನ್ಮಧ್ಯೆ ಕಿಶೋರ್ ಬಿಯಾನಿ ಅವರ ಫ್ಯೂಚರ್ ಗ್ರೂಪ್‌ನಲ್ಲಿ ಅಮೆಜಾನ್ ಶೇ.49ರಷ್ಟು ಷೇರು ಖರೀದಿಸಲಿದೆ ಎಂದು ಹೇಳಲಾಗಿತ್ತು. ಸದ್ಯ ಅದು ಶೇ.7.3ರಷ್ಟು ಷೇರುಗಳನ್ನು ಹೊಂದಿದೆ. ಫ್ಯೂಚರ್ ಗ್ರೂಪ್ ಬಿಗ್‌ಬಜಾರ್ ಮಾರಾಟ ಮಳಿಗೆಗಳನ್ನು ಹೊಂದಿದ್ದು, ದೇಶಾದ್ಯಂತ 293 ಮಳಿಗೆಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಅಮೆಜಾನ್ ಷೇರು ಖರೀದಿಸಿದ ಬಳಿಕ ಅಮೆಜಾನ್ ಉತ್ಪನ್ನಗಳು ಬಿಗ್‌ಬಜಾರ್‌ಗಳಲ್ಲೂ ಮಾರಾಟಗೊಳ್ಳುವ ನಿರೀಕ್ಷೆ ಇದೆ.