ನವದೆಹಲಿ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 44,658 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 496 ಮಂದಿ ಕೋವಿಡ್ ನಿಂದ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ (ಆಗಸ್ಟ್ 27) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ತಾಲಿಬಾನ್ ವಿರುದ್ಧ ಫೇಸ್ ಬುಕ್ ಪೋಸ್ಟ್ ಹಾಕಿದ ಶಾಸಕ ಮುನೀರ್ ಗೆ ಕೊಲೆ ಬೆದರಿಕೆ
ದೇಶದ ಜನಸಂಖ್ಯೆಯ ಶೇ.50ರಷ್ಟು ಮಂದಿ ಮೊದಲ ಹಂತದ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳುವ ಮೂಲಕ ಭಾರತ ಮತ್ತೊಂದು ಹೊಸ ಮೈಲಿಗಲ್ಲನ್ನು ಸ್ಥಾಪಿಸಿರುವುದಾಗಿ ವರದಿ ವಿವರಿಸಿದೆ.
ಕಳೆದ 24ಗಂಟೆಗಳಲ್ಲಿ ಕೇರಳದಲ್ಲಿ 30,077 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ರಾಜ್ಯದಲ್ಲಿನ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 39,13,506ಕ್ಕೆ ಏರಿಕೆಯಾಗಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೇರಳದಲ್ಲಿಯೇ ಅತೀ ಹೆಚ್ಚು ಪ್ರಕರಣಗಳಿರುವುದಾಗಿ ವರದಿ ತಿಳಿಸಿದೆ.
ಕೇರಳದಲ್ಲಿ ಕೋವಿಡ್ ಹೊರತಾಗಿಯೂ ಪಾಸಿಟಿವಿಟಿ ದರ ಶೇ.19.3ರಷ್ಟಿದೆ. ಹೆಚ್ಚಿನ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರನ್ನು ಹೋಮ್ ಕ್ವಾರಂಟೈನ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ಹೇಳಿದೆ. ಮಹಾರಾಷ್ಟ್ರದಲ್ಲಿ ಕಳೆದ 24ಗಂಟೆಯಲ್ಲಿ 5,108 ಕೋವಿಡ್ ಪ್ರಕರಣ ವರದಿಯಾಗಿದ್ದು, 145 ಮಂದಿ ಸಾವನ್ನಪ್ಪಿದ್ದರು.
ಗುರುವಾರ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೋವಿಡ್ ಸೋಂಕಿನಿಂದ ಯಾರೂ ಸಾವನ್ನಪ್ಪಿಲ್ಲ. ಆದರೆ 45 ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿತ್ತು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಸತತ 16 ದಿನಗಳಿಂದ ದೆಹಲಿಯಲ್ಲಿ ಕೋವಿಡ್ ಸೋಂಕಿನಿಂದ ಯಾರೂ ಮೃತಪಟ್ಟಿಲ್ಲ ಎಂದು ಹೇಳಿದೆ.