Advertisement

ದ.ಕ.: ಮಂಗಳೂರಿನ ಜೈಲಿಗೂ ಬಂತು ಕೋವಿಡ್ ಸೋಂಕು; ವೈದ್ಯರ ಸಹಿತ 44 ಮಂದಿಗೆ ಪಾಸಿಟಿವ್‌

12:51 AM Jul 01, 2020 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಪ್ರಕರಣ ದಿನೇ ದಿನೇ ಏರಿಕೆಯಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.

Advertisement

8 ವೈದ್ಯರ ಸಹಿತ 44 ಮಂದಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ.

ಅವರಲ್ಲಿ ಕೋವಿಡ್‌ ಆಸ್ಪತ್ರೆಯ ಮುಖ್ಯ ವೈದ್ಯರ ಸಹಿತ ವಿವಿಧ ಆಸ್ಪತ್ರೆಗಳ ವೈದ್ಯರಿದ್ದಾರೆ.

ಸೌದಿ ಅರೇಬಿಯಾದಿಂದ ಬಂದ ಇಬ್ಬರು, ಹೊರ ರಾಜ್ಯದಿಂದ ಬಂದ ಓರ್ವ, ಹೊರ ಜಿಲ್ಲೆಯಿಂದ ಬಂದ ಮೂವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.

ಇನ್‌ಫ್ಲೂಯೆನ್ಝಾ ಲೈಕ್‌ ಇಲ್‌ನೆಸ್‌ನಿಂದ ಬಳಲುತ್ತಿರುವ 9 ಮಂದಿ, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ 3 ಮಂದಿಗೆ ಕೋವಿಡ್ 19 ಸೋಂಕು ಪಾಸಿಟಿವ್‌ ಬಂದಿದೆ. 21 ಮಂದಿಗೆ ಈ ಹಿಂದೆ ಸೋಂಕಿತರಾದವರ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದ್ದರೆ, ಐವರ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ.

Advertisement

ಕೈದಿಗೆ ಪಾಸಿಟಿವ್‌
ನಗರದ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಧೀನ ಕೈದಿಯನ್ನೂ ಕೋವಿಡ್ 19 ಸೋಂಕು ಬಾಧಿಸಿದ್ದು, ಆತನನ್ನು ವೆನ್ಲಾಕ್‌ಗೆ ದಾಖಲಿಸಲಾಗಿದೆ. ಸೋಂಕಿನ ಮೂಲ ಪತ್ತೆಯಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಕೈದಿ ಸಂಪರ್ಕ ಇದ್ದ ಪೊಲೀಸ್‌ ಸಿಬಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. ಈ ನಡುವೆ ನಗರದ ಹೊಟೇಲೊಂದರ ಮಾಲಕ ಹಾಗೂ ಉದ್ಯಮಿಗೂ ಕೋವಿಡ್ 19 ಸೋಂಕು ದೃಢಪಟ್ಟಿದೆ.

17 ಮಂದಿ ಗುಣಮುಖ
ವೆನ್ಲಾಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 17 ಮಂದಿ ಗುಣಮುಖರಾಗಿ ಮಂಗಳವಾರ ಬಿಡುಗಡೆಗೊಂಡಿದ್ದಾರೆ.

ಐಸಿಯುವಿನಲ್ಲಿ ನಾಲ್ವರು
ಡಯಾಬಿಟಿಸ್‌, ನ್ಯುಮೋನಿಯಾದಿಂದ ಬಳಲುತ್ತಿರುವ 49 ವರ್ಷದ ವ್ಯಕ್ತಿ, ಡಯಾಬಿಟಿಸ್‌, ಅಧಿಕ ರಕ್ತದೊತ್ತಡ, ಪಾರ್ಕಿನ್ಸ‌ನ್‌, ನ್ಯುಮೋನಿಯಾದಿಂದ ಬಳಲುತ್ತಿರುವ 78 ವರ್ಷದ ವೃದ್ಧ, ನ್ಯುಮೋನಿಯಾದಿಂದ ಬಳಲುತ್ತಿರುವ 39 ವರ್ಷದ ವ್ಯಕ್ತಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಿವರ್‌ ಕಾಯಿಲೆ, ಡಯಾಬಿಟಿಸ್‌, ಹೃದ್ರೋಗ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿರುವ 57 ವರ್ಷದ ಮಹಿಳೆಗೆ ವೆಂಟಿಲೇಟರ್‌ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ.

325 ವರದಿ ಬಾಕಿ
ವೆನ್ಲಾಕ್‌ನಲ್ಲಿ ಮಂಗಳವಾರ ಒಟ್ಟು 148 ಮಂದಿಯ ಗಂಟಲ ದ್ರವ ಮಾದರಿಗಳ ಪರೀಕ್ಷಾ ವರದಿ ಸ್ವೀಕರಿಸಲಾಗಿದ್ದು, 44 ಪಾಸಿಟಿವ್‌, 104 ನೆಗೆಟಿವ್‌ ಆಗಿವೆ. ಒಟ್ಟು 325 ವರದಿ ಬರಲು ಬಾಕಿ ಇದೆ.

ಇದನ್ನೂ ಓದಿ: ಮಂಗಳವಾರ ರಾಜ್ಯದಲ್ಲಿ 947 ಸೋಂಕು ಪ್ರಕರಣ ಪತ್ತೆ ; 20 ಬಲಿ

ಒಂದೇ ಮನೆಯ 7 ಮಂದಿಗೆ ಬಾಧೆ
ಉಳ್ಳಾಲ:
ಕೋವಿಡ್ 19 ಸೋಂಕು ಬಾಧೆಯಿಂದ ವಾರದ ಹಿಂದೆ ಮೃತಪಟ್ಟಿದ್ದ ಆಝಾದ್‌ ನಗರದ ಮಹಿಳೆಯ ಕುಟುಂಬದ ಏಳು ಸದಸ್ಯರು, ಉಳ್ಳಾಲ ಠಾಣೆಯ ಇಬ್ಬರು ಸಿಬಂದಿ ಸೇರಿದಂತೆ ಒಟ್ಟು 12 ಜನರಿಗೆ ಮಂಗಳವಾರ ಕೋವಿಡ್ 19 ಸೋಂಕು ದೃಢವಾಗಿದೆ. ಇದರೊಂದಿಗೆ ಉಳ್ಳಾಲ ಪೊಲೀಸ್‌ ಠಾಣೆಯ 10 ಪೊಲೀಸರು ಮತ್ತು ಇಬ್ಬರು ಹೋಂಗಾರ್ಡ್‌ಗಳಿಗೆ ಸೋಂಕು ತಗಲಿದಂತಾಗಿದೆ.

ಸ್ವೀಟ್ಸ್‌ ಅಂಗಡಿಯೊಂದರ ಮಾಲಕನನ್ನೂ ಸೋಂಕು ಬಾಧಿಸಿದ್ದು, ಅವರಿಗೆ ಅಝಾದ್‌ ನಗರದ ಸೋಂಕಿತ ಯುವಕನ ಸಂಪರ್ಕದಿಂದ ಸೋಂಕು ತಗಲಿದೆ. ಪೆರ್ಮನ್ನೂರು ನಿವಾಸಿ ಖಾಸಗಿ ಆಸ್ಪತ್ರೆಯ ಸಿಬಂದಿ ಮತ್ತು ಮಂಜನಾಡಿ ಗ್ರಾಮದ ಮಂಗಳಾಂತಿ ನಿವಾಸಿ ಲೇಡಿಗೋಶನ್‌ ಆಸ್ಪತ್ರೆಯ ಸಿಬಂದಿಗೆ ಸೋಂಕು ತಗಲಿದೆ. ಉಳ್ಳಾಲದಲ್ಲಿ ಸೋಂಕು ಹೆಚ್ಚುತ್ತಿರುವುದರಿಂದ ನಗರಸಭೆ ಆವರಣದಲ್ಲಿ ರಿಕ್ಷಾ ಚಾಲಕರು, ಬೀದಿ ಬದಿ ವ್ಯಾಪಾರಿಗಳ 120 ಗಂಟಲ ದ್ರವದ ಮಾದರಿ ಸಂಗ್ರಹ ಆರಂಭಿಸಲಾಗಿದೆ.

ಕೈಕಂಬದ ವೈದ್ಯರಿಗೆ ಕೋವಿಡ್ 19 ಸೋಂಕು
ಬಿ.ಸಿ.ರೋಡು ಕೈಕಂಬದ ವೈದ್ಯರೊಬ್ಬರಿಗೆ ಕೋವಿಡ್ 19 ಸೋಂಕು ಸೋಂಕು ದೃಢಪಟ್ಟಿದ್ದು, ಕ್ಲಿನಿಕ್‌ ಹಾಗೂ ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಸೋಂಕಿನ ಮೂಲ ಪತ್ತೆಯಾಗಿಲ್ಲ. ವೈದ್ಯರ ಮನೆ ಹಾಗೂ ಕ್ಲಿನಿಕ್‌ ಪ್ರದೇಶವನ್ನು ಪುರಸಭೆಯ ವತಿಯಿಂದ ಸ್ಯಾನಿಟೈಸೇಶನ್‌ ಮಾಡಲಾಗಿದೆ. ವೈದ್ಯರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಪುತ್ತೂರಿನ ಇಬ್ಬರು ಯುವಕರಿಗೆ ಪಾಸಿಟಿವ್‌
ನಗರಸಭಾ ವ್ಯಾಪ್ತಿಯ ಚಿಕ್ಕ ಪುತ್ತೂರಿನ 30 ವರ್ಷದ ಯುವಕ ಮತ್ತು ಹೊರವಲಯದಲ್ಲಿರುವ ಮುರ ನಿವಾಸಿ 26 ವರ್ಷ ವಯಸ್ಸಿನ ಯುವಕನಲ್ಲಿ ಮಂಗಳವಾರ ಕೋವಿಡ್ 19 ಸೋಂಕು ದೃಢಪಟ್ಟಿದೆ. ಮುರದ ಯುವಕ ಮೈಸೂರಿನಲ್ಲಿ ಉದ್ಯೋಗಿಯಾಗಿದ್ದು 2 ತಿಂಗಳ ಹಿಂದೆ ಮನೆಗೆ ಮರಳಿದ್ದನು. ಚಿಕ್ಕಪುತ್ತೂರಿನ ಯುವಕ ಗೂಡ್ಸ್‌ ಸರ್ವೀಸ್‌ ಕಂಪೆನಿಯ ಲಾರಿಯ ಚಾಲಕ. ತಾಲೂಕಿನಲ್ಲಿ ಈ ತನಕ ಒಟ್ಟು 22 ಕೋವಿಡ್ 19 ಸೋಂಕು ಪ್ರಕರಣ ವರದಿಯಾಗಿವೆ.

ಇದನ್ನೂ ಓದಿ: ಆರೋಗ್ಯ ಯೋಧರನ್ನೇ ಕಾಡುತ್ತಿದೆ ಮಹಾಮಾರಿ: ದ.ಕ.ಜಿಲ್ಲೆಯಲ್ಲಿ 8 ಮಂದಿ ವೈದ್ಯರಿಗೆ ಪಾಸಿಟಿವ್‌!

ದಾದಿಗೆ ಸೋಂಕು
ಸುಳ್ಯ:
ಇಲ್ಲಿನ ಸರಕಾರಿ ಆಸ್ಪತ್ರೆಯ ದಾದಿಯೊಬ್ಬರಿಗೆ ಮಂಗಳವಾರ ಕೋವಿಡ್ 19 ಸೋಂಕು ದೃಢಪಟ್ಟಿದೆ. ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿ ಬಳಿಕ ಮಂಗಳೂರು ಖಾಸಗಿ ಆಸ್ಪತ್ರೆಗೆ ತೆರಳಿದ್ದ ರೋಗಿಯೊಬ್ಬರಿಗೆ ಎರಡು ದಿನದ ಹಿಂದೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸುಳ್ಯ ಆಸ್ಪತ್ರೆಯ 13 ಮಂದಿ ದಾದಿಯರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. 12 ಮಂದಿಯ ವರದಿ ನೆಗೆಟಿವ್‌ ಬಂದಿದೆ.

ಐವರ್ನಾಡು: 7 ಮನೆ ಸೀಲ್‌ ಡೌನ್‌
ಐವರ್ನಾಡು ಗ್ರಾಮದ ಜಬಳೆಯಲ್ಲಿ ಇಬ್ಬರು ಯುವಕರಿಗೆ ಜೂ. 28ರಂದು ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಮನೆ ಸನಿಹದ ಏಳು ಮನೆಗಳನ್ನು ಸೀಲ್‌ ಡೌನ್‌ ಮಾಡಲಾಗಿದೆ.

ಸವಾಲಾಗಿರುವ ನಿಯಂತ್ರಣ
ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ನಿಯಂತ್ರಣದಲ್ಲಿ ತೊಡಗಿರುವ ವೈದ್ಯರು ಮತ್ತು ಪೊಲೀಸರಿಗೂ ಕೋವಿಡ್ 19 ಸೋಂಕು ತಗಲುತ್ತಿರುವುದು ಸೋಂಕು ನಿಯಂತ್ರಣದಲ್ಲಿ ಇನ್ನಷ್ಟು ಸವಾಲಾಗಿದೆ. ಕಳೆದೊಂದು ವಾರದಲ್ಲಿ ಹಲವು ವೈದ್ಯರು ಸೋಂಕಿಗೊಳಗಾಗಿದ್ದಾರೆ. ರೋಗಿಗಳ ಮತ್ತು ಕೊರೊನಾ ದೃಢಪಟ್ಟ ವೈದ್ಯರ ಸಂಪರ್ಕದಲ್ಲಿದ್ದ 58ಕ್ಕೂ ಹೆಚ್ಚು ವೈದ್ಯರನ್ನು ಕ್ವಾರಂಟೈನ್‌ ಮಾಡಲಾಗಿದೆ. ಇದೇ ವೇಳೆ ಮಂಗಳೂರು ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಪೊಲೀಸರು ಹಾಗೂ ಹೋಂಗಾರ್ಡ್‌ಗೂ ಸೋಂಕು ದೃಢಪಟ್ಟಿದೆ.

ಕಾಸರಗೋಡು ಜಿಲ್ಲೆಯಲ್ಲಿ 8 ಮಂದಿಗೆ ಪಾಸಿಟಿವ್‌
ಜಿಲ್ಲೆಯಲ್ಲಿ ಮಂಗಳವಾರ 8 ಮಂದಿಗೆ ಕೋವಿಡ್‌ ಪಾಸಿಟಿವ್‌ ದೃಢವಾಗಿದೆ. ಅವರಲ್ಲಿ ಒಮಾನ್‌, ದುಬಾೖ ಮತ್ತು ಕತಾರ್‌ನಿಂದ ಬಂದ ಮೂವರು, ದಿಲ್ಲಿಯಿಂದ ಬಂದ ಓರ್ವ ಮತ್ತು ಬೆಂಗಳೂರಿನಿಂದ ಆಗಮಿಸಿದ್ದ ಬದಿಯಡ್ಕದ ಇಬ್ಬರು ಇದ್ದಾರೆ. ಇಬ್ಬರಿಗೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ.

ಕೇರಳದಲ್ಲಿ 131 ಮಂದಿಗೆ ಸೋಂಕು
ಕೇರಳದಲ್ಲಿ ಮಂಗಳವಾರ 131 ಮಂದಿಗೆ ಸೋಂಕು ದೃಢಗೊಂಡಿದೆ. ಇದೇ ಸಂದರ್ಭದಲ್ಲಿ ಜಿಲ್ಲೆಯ ನಾಲ್ವರು ಸೇರಿದಂತೆ ರಾಜ್ಯದಲ್ಲಿ 75 ಮಂದಿ ಗುಣಮುಖರಾಗಿದ್ದಾರೆ.

255 ಪ್ರಕರಣ ದಾಖಲು
ಜಿಲ್ಲೆಯಲ್ಲಿ ಮಾಸ್ಕ್ ಧರಿಸದ ಆರೋಪದಲ್ಲಿ 233 ಪ್ರಕರಣ, ಲಾಕ್‌ಡೌನ್‌ ಉಲ್ಲಂಘನೆ ಆರೋಪದಲ್ಲಿ 22 ಪ್ರಕರಣ ದಾಖಲಿಸಿ 44 ಮಂದಿಯನ್ನು ಬಂಧಿಸಲಾಗಿದೆ. 8 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಉಡುಪಿ: 9 ಪಾಸಿಟಿವ್‌ ; ಸಾವಿನ ಸಂಖ್ಯೆ 3ಕ್ಕೆ ಏರಿಕೆ ; ಬೈಂದೂರಿನ ವ್ಯಕ್ತಿ ಸೋಂಕಿಗೆ ಬಲಿ
ಜಿಲ್ಲೆಯಲ್ಲಿ ಮಂಗಳವಾರ 9 ಕೋವಿಡ್ 19 ಸೋಂಕು ಪಾಸಿಟಿವ್‌ ಪ್ರಕರಣ ವರದಿಯಾಗಿದ್ದು 48 ವರ್ಷ ಪ್ರಾಯದ ಒಬ್ಬರು ಸಾವಿಗೀಡಾಗಿದ್ದಾರೆ. ಇದು ಜಿಲ್ಲೆಯಲ್ಲಿ 3ನೇ ಸಾವಿನ ಪ್ರಕರಣ. 9 ಜನರಲ್ಲಿ ಮೂವರು ಮುಂಬಯಿಯಿಂದ ಬಂದವರು. ಅವರಲ್ಲಿ ಒಬ್ಬರು ಮೃತಪಟ್ಟರೆ ಅವರ ಪತ್ನಿ, ಪುತ್ರಿಯನ್ನೂ ಸೋಂಕು ಬಾಧಿಸಿದೆ. ಒಬ್ಬರು ಹೈದರಾಬಾದ್‌ನಿಂದ ಬಂದವರು. ಇಬ್ಬರಿಗೆ ಪಾಸಿಟಿವ್‌ ಇದ್ದವರ ಪ್ರಾಥಮಿಕ ಸಂಪರ್ಕ ದಿಂದ ಬಂದಿದೆ.

ಕುಂದಾಪುರದಿಂದ ಬೆಂಗಳೂರಿಗೆ ಓಡಾಡುವ ಖಾಸಗಿ ಬಸ್‌ನ ಇಬ್ಬರು ಚಾಲಕರಿಗೆ, ಹೆಜಮಾಡಿಯ ಒಬ್ಬರು ವಸ್ತ್ರದಂಗಡಿ ಮಾಲಕರಿಗೆ ಸೋಂಕು ತಗಲಿದೆ. ಇಬ್ಬರು ಉಡುಪಿ ತಾಲೂಕಿನವರು ಮತ್ತು 7 ಮಂದಿ ಕುಂದಾಪುರ ತಾಲೂಕಿಗೆ ಸೇರಿದವರು. ವಸ್ತ್ರದಂಗಡಿ ಮಾಲಕರ ಮಗ ಬೆಂಗಳೂರಿಗೆ ಹೋಗಿ ಬಂದಿದ್ದು ಅವರ ಗಂಟಲ ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ರವಿವಾರ ಕಾಪು ತಾಲೂಕಿನ ವಿದ್ಯಾರ್ಥಿನಿಗೆ ಸೋಂಕು ತಗಲಿದ್ದರೆ, ಮಂಗಳವಾರ ಕುಂದಾಪುರದ ವಿದ್ಯಾರ್ಥಿನಿಯನ್ನು ಬಾಧಿಸಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

ಇಬ್ಬರ ಸ್ಥಿತಿ ಗಂಭೀರ
ಮಂಗಳವಾರ 11 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. 14,556 ಮಂದಿಯ ಗಂಟಲ ದ್ರವ ಸಂಗ್ರಹದಲ್ಲಿ 12,976 ನೆಗೆಟಿವ್‌ ಮತ್ತು 1,206 ಪಾಸಿಟಿವ್‌ ಪ್ರಕರಣ ವರದಿಯಾಗಿವೆ. ಅವರಲ್ಲಿ ಒಟ್ಟು 1,067 ಮಂದಿ ಬಿಡುಗಡೆಯಾಗಿದ್ದು 136 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿರುವ ಇಬ್ಬರು ಸೋಂಕಿತರ ಸ್ಥಿತಿ ಗಂಭೀರವಾಗಿಯೇ ಇದೆ.

ಮಂಗಳವಾರ 288 ಮಾದರಿಗಳನ್ನು ಸಂಗ್ರಹಿಸಿದ್ದು 114 ನೆಗೆಟಿವ್‌ ವರದಿ ಬಂದಿವೆ. 374 ಮಾದರಿಗಳ ವರದಿ ಬರಬೇಕಾಗಿದೆ. 872 ಮಂದಿ ಮನೆಯಲ್ಲಿ, 71 ಮಂದಿ ಆಸ್ಪತ್ರೆಯ ಐಸೊಲೇಶನ್‌ ವಾರ್ಡ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ.

ಕುಂದಾಪುರ: ವಿದ್ಯಾರ್ಥಿನಿ, ಚಾಲಕರಿಗೂ ಪಾಸಿಟಿವ್‌
ಎಸೆಸೆಲ್ಸಿ ಪರೀಕ್ಷೆ ಬರೆದ ತಾಲೂಕಿನ ತ್ರಾಸಿಯ ವಿದ್ಯಾರ್ಥಿನಿಯೊಬ್ಬಳನ್ನು ಕೋವಿಡ್ 19 ಸೋಂಕು ಬಾಧಿಸಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಜತೆಗೆ ಪರೀಕ್ಷೆ ಬರೆದಿದ್ದ 21 ವಿದ್ಯಾರ್ಥಿಗಳಿಗೆ ಮುಂದಿನ ಪರೀಕ್ಷೆಗಳನ್ನು ಪ್ರತ್ಯೇಕವಾಗಿ ಬರೆಯಲು ವ್ಯವಸ್ಥೆ ಮಾಡಲಾಗುವುದು. ಕೊಠಡಿಯನ್ನು ಸ್ಯಾನಿಟೈಸ್‌ ಮಾಡಲಾಗಿದೆ. ಆಕೆಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು ಎಂದು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಜೂ. 26ರಂದು ಮಹಾರಾಷ್ಟ್ರದಿಂದ ಕಾಲ್ತೋಡಿಗೆ ಬಂದಿದ್ದ ಅನಾರೋಗ್ಯ ಪೀಡಿತ ವ್ಯಕ್ತಿ ರವಿವಾರ ಮನೆಯಲ್ಲೇ ಮೃತಪಟ್ಟಿದ್ದು ಅವರಿಗೆ ಪಾಸಿಟಿವ್‌ ಇರುವುದು ಮಂಗಳವಾರ ಗೊತ್ತಾಗಿದೆ. ಅವರು ಹೊರರಾಜ್ಯದಿಂದ ಬಂದಿರುವ ವಿಚಾರ ಜೂ. 27ರಂದು ಆರೋಗ್ಯ ಇಲಾಖೆಗೆ ಗೊತ್ತಾದರೂ ಪ್ರಯೋಗಾಲಯಕ್ಕೆ ರಜೆ ಇದ್ದುದರಿಂದ ಪರೀಕ್ಷೆ ನಡೆದಿರಲಿಲ್ಲ. ರವಿವಾರ ಅವರು ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆಯವರು ಮೃತ ವ್ಯಕ್ತಿ ಹಾಗೂ ಅವರ

ಪ್ರಾಥಮಿಕ ಸಂಪರ್ಕದವರ ಗಂಟಲ ದ್ರವ ತೆಗೆದು ಶಿಷ್ಟಾಚಾರದಂತೆ ಅಂತ್ಯಸಂಸ್ಕಾರ ನಡೆಸಿದ್ದರು. ಇದೀಗ ಅವರ ಪತ್ನಿ, ಪುತ್ರಿಗೂ ಪಾಸಿಟಿವ್‌ ಬಂದಿದೆ. ಅವರು ಮುಂಬಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಗುಣಪಡಿಸುವುದು ಕಷ್ಟ ಎಂದು ವೈದ್ಯರು ಖಚಿತ ಪಡಿಸಿದ ಹಿನ್ನೆಲೆಯಲ್ಲಿ ಊರಿನಲ್ಲಿ ಕೊನೆಯುಸಿರೆಳೆಯಬೇಕೆಂಬ ಆಸೆಯಿಂದ ಅವರು ಊರಿಗೆ ಬಂದರು ಎಂದು ತಿಳಿದುಬಂದಿದೆ.

ಕುಂದಾಪುರದಿಂದ ಬೆಂಗಳೂರಿಗೆ ಹೋಗುವ ಬಸ್‌ಗಳ ಇಬ್ಬರು ಚಾಲಕರಿಗೆ ಕೋವಿಡ್ 19 ಸೋಂಕು ಪಾಸಿಟಿವ್‌ ಬಂದಿದೆ. ಆದರೆ ಡ್ರೈವರ್‌ ಕ್ಯಾಬಿನ್‌ ಪ್ರತ್ಯೇಕವಾಗಿರುವುದರಿಂದ ಪ್ರಯಾಣಿಕರು ಆತಂಕಗೊಳ್ಳಬೇಕಿಲ್ಲ. ಸತತ 6 ತಾಸಿನ ಸಂಪರ್ಕ ಇದ್ದರಷ್ಟೇ ಅಂತಹವರನ್ನು ಪ್ರಾಥಮಿಕ ಸಂಪರ್ಕ ಎಂದು ಪರಿಗಣಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಪಡುಬಿದ್ರಿ: ವಿದ್ಯಾರ್ಥಿನಿಯ ಅಕ್ಕ, ತಾಯಿಗೂ ಸೋಂಕು
ಕೋವಿಡ್ 19 ಸೋಂಕು ಬಾಧಿತ ಎಸೆಸೆಲ್ಸಿ ವಿದ್ಯಾರ್ಥಿನಿಯ ತಾಯಿ ಮತ್ತು ಹಿರಿಯ ಸಹೋದರಿಯನ್ನೂ ಸೋಂಕು ಬಾಧಿಸಿರುವುದು ಮಂಗಳವಾರ ದೃಢಪಟ್ಟಿದೆ. ಅವರನ್ನೂ ಕಾರ್ಕಳ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಜಮಾಡಿ ಕೋಡಿಯ ಪ್ರಥಮ ಸೋಂಕಿತ ವ್ಯಕ್ತಿಯ ಸಂಪರ್ಕ ಇದ್ದ ಕಾರಣಕ್ಕೆ ನಡ್ಪಾಲಿನ ವ್ಯಕ್ತಿ ಸ್ವಯಂಪ್ರೇರಣೆಯಿಂದ ಕೋವಿಡ್‌ ಟೆಸ್ಟ್‌ ಮಾಡಿಸಿಕೊಂಡಾಗ ಪಾಸಿಟಿವ್‌ ಬಂದಿತ್ತು. 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದ ಅವರ ಮಗಳ ಗಂಟಲ ದ್ರವವನ್ನೂ ಪರೀಕ್ಷೆಗೆ ಕಳುಹಿಸಿದ್ದು, ಆಕೆಯಲ್ಲೂ ಸೋಂಕು ಕಂಡುಬಂದಿತ್ತು. ಬಳಿಕ ಮನೆಯಲ್ಲಿದ್ದ ಇತರ ಇಬ್ಬರ ಪರೀಕ್ಷೆಯನ್ನೂ ಮಾಡಿದ್ದು ಮಂಗಳವಾರ ಪಾಸಿಟಿವ್‌ ಬಂದಿದೆ.

ಮೂವರ ವರದಿ ನೆಗೆಟಿವ್‌
ಹೆಜಮಾಡಿ ಕೋಡಿಯ ಸೋಂಕಿತ ವ್ಯಕ್ತಿಯ ಮನೆ ಕೆಲಸದ ಮಹಿಳೆಗೆ ಸೋಂಕು ದೃಢಪಟ್ಟ ಬಳಿಕ ಆಕೆಯ ಪುತ್ರನ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಿ ಕ್ವಾರಂಟೈನ್‌ಗೊಳಪಡಿಸಲಾಗಿತ್ತು. ಮಂಗಳವಾರ ವರದಿ ನೆಗೆಟಿವ್‌ ಬಂದಿದೆ. ಹೆಜಮಾಡಿಯ ಸೋಂಕಿತರ ಸಂಪರ್ಕದಲ್ಲಿದ್ದ ಇಬ್ಬರು ಸ್ವಯಂ ಪ್ರೇರಣೆಯಿಂದ ಪರೀಕ್ಷೆಗೆ ಮಾಡಿಸಿದ್ದು, ಅವರ ವರದಿ ನೆಗೆಟಿವ್‌ ಬಂದಿದೆ.

ಬಾಧಿತ ವ್ಯಕ್ತಿ ಚೇತರಿಕೆ
ಕೋವಿಡ್ 19 ಸೋಂಕು ಪೀಡಿತರಾಗಿದ್ದ ಹೆಜಮಾಡಿ ಕೋಡಿಯ ವ್ಯಕ್ತಿ ಕೆಲವು ದಿನಗಳಿಂದ ವೆಂಟಿಲೇಟರ್‌ನಲ್ಲಿದ್ದು, ಅವರ ಆರೋಗ್ಯ ಸುಧಾರಿಸಿದೆ ಎಂದು ತಿಳಿದುಬಂದಿದೆ.

1 ವರ್ಷದ ಮಗುವಿಗೆ ಸೋಂಕು
ಶಿರ್ವ: ಅಬುಧಾಬಿಯಿಂದ 2 ದಿನಗಳ ಹಿಂದೆ ತಾಯಿಯೊಂದಿಗೆ ಬಂದು ಕ್ವಾರಂಟೈನ್‌ನಲ್ಲಿದ್ದ ಕಳತ್ತೂರು ಕೊರಂತಿಕಟ್ಟದ 1 ವರ್ಷದ ಗಂಡು ಮಗುವಿನಲ್ಲಿ ಸೋಂಕು ಪತ್ತೆಯಾಗಿದೆ. ಮಗುವನ್ನು ಉಡುಪಿಯ ಟಿಎಂಎ ಪೈ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಹಾಗೂ ಜತೆಗೆ ಬಂದಿದ್ದ 4 ವರ್ಷದ ಇನ್ನೊಂದು ಮಗುವಿನ ಪರೀಕ್ಷಾ ವರದಿ ನೆಗೆಟಿವ್‌ ಬಂದಿದೆ.

ಸಿಬಂದಿಗೆ ಕೋವಿಡ್ 19 ಸೋಂಕು ತಪಾಸಣೆ ಕಡ್ಡಾಯ
ಜಿಲ್ಲೆಯ ಎಲ್ಲ ಮಾಲ್‌, ಶಾಪಿಂಗ್‌ ಕಾಂಪ್ಲೆಕ್ಸ್‌, ಅಂಗಡಿ ಮುಂಗಟ್ಟು, ಜೊಮಾಟೊ, ಸ್ವಿಗ್ಗಿಯಂತಹ ಆಹಾರ ವಿತರಕ ಸಂಸ್ಥೆ, ಹೊಟೇಲ್‌, ರೆಸ್ಟೋರೆಂಟ್‌ನವರು ತಮ್ಮ ವ್ಯಾಪ್ತಿಗೆ ಸೇರಿದ ತಾಲೂಕು ಆರೋಗ್ಯಾಧಿಕಾರಿಯವರನ್ನು ಸಂಪರ್ಕಿಸಿ ದಿನಾಂಕವನ್ನು ನಿಗದಿಪಡಿಸಿಕೊಂಡು ತಮಗೆ ಹತ್ತಿರವಿರುವ ಫೀವರ್‌ ಕ್ಲಿನಿಕ್‌ಗಳಲ್ಲಿ ಸಂಸ್ಥೆಯ ಎಲ್ಲ ಸಿಬಂದಿಯ ತಪಾಸಣೆ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಆದೇಶಿಸಿದ್ದಾರೆ.

ತಾಲೂಕು ಆರೋಗ್ಯಾಧಿಕಾರಿಯವರ ಸಂಪರ್ಕ ಸಂಖ್ಯೆ ಇಂತಿದೆ: ಉಡುಪಿ- 0820 2526428, ಕುಂದಾಪುರ- 08254 230730, ಕಾರ್ಕಳ – 08258 231788.

ಆದೇಶ ಉಲ್ಲಂಘಿಸಿದರೆ ಅಂತಹ ಸಂಸ್ಥೆಯವರನ್ನು ಅಪರಾಧಿ ಎಂದು ಪರಿಗಣಿಸಿ ಕಾಯಿದೆಯನ್ವಯ ಕಠಿನ ಶಿಕ್ಷೆಗೆ ಗುರಿಪಡಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next