ಮಾಲೂರು: ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಚಿಕ್ಕತಿರುಪತಿ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಕಳೆದ 2 ತಿಂಗಳಿಂದ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ, ದೇವರ ಹುಂಡಿಗೆ ಅರ್ಪಿಸಿದ ಕಾಣಿಕೆ ಎಣಿಕೆ ಕಾರ್ಯ ಬುಧವಾರ ನಡೆದಿದ್ದು, ಒಟ್ಟು 44.34 ಲಕ್ಷ ರೂ.ಗಳು ಸಂಗ್ರಹವಾಗಿದೆ.
ತಾಲೂಕಿನ ಚಿಕ್ಕತಿರುಪತಿ ಶ್ರೀ ಪ್ರಸನ್ನ ವೆಂಕರಮಣ ಸ್ವಾಮಿ ದೇವಾಲಯದ ಆವರಣದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಪ್ರಭಾರ ತಹಶೀಲ್ದಾರ್ ನಾಗವೇಣಿ ನೇತೃತ್ವದಲ್ಲಿ ಹುಂಡಿಗಳನ್ನು ತೆರೆದು ಎಣಿಕೆ ಪ್ರಾರಂಬಿಸಲಾಯಿತು. ಅಕ್ಟೋಬರ್ ತಿಂಗಳಿನಿಂದ ನವೆಂಬರ್ ತಿಂಗಳವರೆಗೂ ದೇವಾಲಯಕ್ಕೆ ಬೇಟಿ ನೀಡಿದ್ದ ಭಕ್ತರು ಸಾಮಾನ್ಯ ಹುಂಡಿಯಲ್ಲಿ 29,64,944 ರೂ. ಗಳು, ಅನ್ನದಾಸೋಹದ ಹುಂಡಿಗೆ 14,70,000 ರೂ.ಗಳು, ಚಿನ್ನ 107 ಗ್ರಾಂ,
ಬೆಳ್ಳಿ 188 ಗ್ರಾಂ ಹಾಗೂ ಇಂಡೋನೇಷ್ಯಾದ 50 ಸಾವಿರ ಬೆಲೆ ಬಾಳುವ 1 ನೋಟು, ಅಮೆರಿಕದ 6 ಡಾಲರ್, ವಿದೇಶಿ ನೋಟುಗಳು, ಹಳೆಯ 1 ಸಾವಿರ ಮುಖ ಬೆಲೆಯ 10 ನೋಟು ಹಾಗೂ 500 ಮುಖ ಬೆಲೆಯ 10 ನೋಟುಗಳು, 30ಕ್ಕೂ ಹೆಚ್ಚು ತಾಳಿಗಳು, 1 ಚಿನ್ನದ ಸರಗಳು ಸೇರಿದಂತೆ ಕಾಣಿಕೆ ರೂಪದಲ್ಲಿ ಭಕ್ತರು ಅರ್ಪಿಸಿದ್ದಾರೆ. ಒಟ್ಟು 44 ಲಕ್ಷದ 34 ಸಾವಿರ 944 ರೂ. ಮೌಲ್ಯದಷ್ಟು ಸಲ್ಲಿಸಿದ್ದಾರೆ.
ಎಣಿಕೆ ಮಾಡಿದ ಹಣವನ್ನು ಕೆನರಾ ಬ್ಯಾಂಕಿನ ಖಾತೆಗೆ ಜಮಾ ಮಾಡಲಾಗಿದೆ. ತಾಲೂಕು ಕಂದಾಯ ಇಲಾಖೆ ಸಿಬ್ಬಂದಿ, ಚಿಕ್ಕತಿರುಪತಿ ಕೆನರಾ ಬ್ಯಾಂಕ್ ಸಿಬ್ಬಂದಿ ಹಾಗೂ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ನರಸಿಂಹಯ್ಯ, ದೇವಾಲಯದ ಪೇಶಾರ್ ಪದ್ಮಾವತಿ, ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಂದನ್.ವಿ.ಗೌಡ, ಸದಸ್ಯ ಟಿ.ಆರ್. ವೆಂಕಟೇಶಗೌಡ, ಎಟ್ಟಕೋಡಿ ವೀರಭದ್ರಪ್ಪ, ಎ.ಎಂ. ನಾರಾಯಣಪ್ಪ,
ಮುನಿರೆಡ್ಡಿ, ಮಾಜಿ ಸದಸ್ಯ ಎನ್.ಸುರೇಶ್‌ಬಾಬು, ಉಪತಹಸೀಲ್ದಾರ್ ಅನಿಲ್‌ಗಾಂಧಿ ಕಂದಾಯ ಅಧಿಕಾರಿ ನಾರಾಯಣಸ್ವಾಮಿ, ಗ್ರಾಮಲೇಕ್ಕಿಗರಾದ ಎಂ.ಆರ್.ಅಮರ್‌ಶಂಕರ್, ಉಪೇಂದ್ರ, ನಾಗರಾಜ್, ಲೋಕೇಶ್, ಗಿರೀಶ್, ಮಂಜುನಾಥ್, ರಾಜೇಂದ್ರ ಸೇರಿದಂತೆ ಕಂದಾಯ ಇಲಾಖೆ, ದೇವಾಲಯ ಸಿಬ್ಬಂದಿ ಹಾಗೂ ಗ್ರಾಮ ಸಹಾಯಕರು, ಲಕ್ಕೂರು ಠಾಣೆಯ ಪೇದೆಗಳು, ಅಭಿವೃದ್ಧಿ ಸಮಿತಿ ಸದಸ್ಯರು ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.