ಚಿಕ್ಕೋಡಿ: ಕನ್ನಡವನ್ನು ಉಳಿಸಿ-ಬೆಳೆಸಿ ಹಾಗೂ ಕನ್ನಡ ಸಾಹಿತ್ಯವನ್ನು ಗಡಿ ಭಾಗದ ಜನರಿಗೆ ಪರಿಚಯಿಸಿರುವ ಕೀರ್ತಿ ಕನ್ನಡ ಸ್ವಾಮೀಜಿ ಎಂದೇ ಕರೆಯಲ್ಪಡುವ ಅಲ್ಲಮಪ್ರಭು ಸ್ವಾಮೀಜಿಗೆಸಲ್ಲುತ್ತದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದ ಜನರ ಸಾಹಿತ್ಯ ಪ್ರೀತಿ ಹಾಗೂ ಸೌಹಾರ್ದತೆಗೆ ಚಿಂಚಣಿ ಶ್ರೀ ಅಲ್ಲಮಪ್ರಭುದೇವ ಸಿದ್ಧಸಂಸ್ಥಾನ ಮಠ ಹಾಗೂ ಗಡಿ ಕನ್ನಡಿಗರ ಬಳಗ ಸಾಕ್ಷಿಯಾಗಿ ನಿಂತಿದೆ.
ಗಡಿ ಭಾಗದಲ್ಲಿ ಕನ್ನಡ ಜಾಗೃತಿ ಮೂಡಿಸಲು ಕಂಕಣ ಬದ್ಧರಾಗಿರುವ ಚಿಂಚಣಿಯ ಸಿದ್ಧ ಸಂಸ್ಥಾನ ಮಠದ ಪೀಠಾಧಿ ಪತಿ, ಕನ್ನಡದ ಸ್ವಾಮೀಜಿ ಅಲ್ಲಮಪ್ರಭು ಸ್ವಾಮೀಜಿ ಸ್ಥಾಪಿಸಿರುವ ಗಡಿ ಕನ್ನಡಿಗರ ಬಳಗದ ಜನ ಕಲ್ಯಾಣ ಸಂಸ್ಥೆಯ ವತಿಯಿಂದ ನಡೆಯುವ ರಾಜ್ಯೋತ್ಸವ ಹಾಗೂ ಕನ್ನಡ ಜಾಗೃತಿ ಪುಸ್ತಕ ಮಾಲೆಯ 43ನೆಯಕೃತಿ ಬಿಡುಗಡೆ ನ.2 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
1997ರಲ್ಲಿ ಅಲ್ಲಮಪ್ರಭು ಜನ ಕಲ್ಯಾಣಸಂಸ್ಥೆಯ ಮೂಲಕ ಪುಸ್ತಕ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿದ ಸ್ವಾಮೀಜಿಗಳು ಪ್ರತಿ ವರ್ಷ ಅತ್ಯಮೂಲ್ಯವಾದ ಕನ್ನಡ ಪರ ಪುಸ್ತಕಗಳನ್ನು ಪ್ರಕಟಿಸುತ್ತ ಬಂದಿದ್ದಾರೆ. ಕನ್ನಡದ ಉಳಿವು, ಭಾಷೆ, ಸಂಸ್ಕೃತಿಯ ರಕ್ಷಣೆ ಜತೆಗೆ ಗಡಿ ಭಾಗದ ಮರಾಠಿ ಭಾಷಿಕರಿಗೆ ಕನ್ನಡ ಸಾಹಿತ್ಯದಪುಸ್ತಕಗಳನ್ನು ಮರಾಠಿ ಭಾಷೆಗೆ ಅನುವಾದಿಸಿ ಕನ್ನಡದ ಕುರಿತು ಜಾಗೃತಿ ಮೂಡಿಸುತ್ತ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬಂದಿರುವ ಪರಂಪರೆ ಶ್ರೀಮಠದ ಗಡಿ ಕನ್ನಡಿಗರ ಬಳಗಕ್ಕೆ ಇದೆ. ಕನ್ನಡ ಜಾಗೃತಿ ಪುಸ್ತಕ ಮಾಲೆಯ ಹಲವಾರು ಕೃತಿಗಳನ್ನು ಕರ್ನಾಟಕ ಸರಕಾರದ ಸಚಿವಾಲಯ ಖರೀದಿಸಿ ಶಾಸಕರಿಗೆ ಓದಲು ಒದಗಿಸಿದ್ದು ಈ ಕೃತಿಗಳ ಮೌಲಿಕತೆಗೆ ನಿದರ್ಶನವಾಗಿದೆ. ಗಡಿ ವಿವಾದ ಮತ್ತು ಮಹಾಜನ ಆಯೋಗದ ಕುರಿತು ಪ್ರಬುದ್ಧವಾಗಿ ಮಾತನಾಡಬಲ್ಲ ಶ್ರೀಗಳು ಕನ್ನಡ ಭಾಷೆಯ ಮಹತ್ವ ಮತ್ತು ಪ್ರಾಚೀನತೆ ಕುರಿತು ಅಪೂರ್ವ ಸಂಗ್ರಹ ಹೊಂದಿದ್ದಾರೆ.
ನ. 2ರಂದು ಬೆಳಗಾವಿಯ ಡಾ| ಎ.ಬಿ.ಘಾಟಗೆ ಬರೆದ ಕರ್ನಾಟಕ-ಮಹಾರಾಷ್ಟ್ರ ಸಾಂಸ್ಕೃತಿಕ ಅಧ್ಯಯನಗಳ ತಾತ್ವಿಕತೆ ಪುಸ್ತಕ ಬಿಡುಗಡೆ ಸಮಾರಂಭ ಚಿಂಚಣಿ ಅಲ್ಲಮಪ್ರಭು ಸಿದ್ಧಸಂಸ್ಥಾನಮಠದಲ್ಲಿ ನಡೆಯಲಿದೆ. ಶ್ರೀ ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಸಕ ಗಣೇಶ ಹುಕ್ಕೇರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಡಾ| ಸರಜೂ ಕಾಟ್ಕರ್ ಆಗಮಿಸಲಿದ್ದಾರೆ.
ಗಡಿ ಭಾಗದಲ್ಲಿ ಕನ್ನಡ ಜಾಗೃತಿ ಪುಸ್ತಕಗಳು ಇವು. ಧಾರ್ಮಿಕ ಹಾಗೂ ಶ್ರೀಮಠಕ್ಕೆ ಸಂಬಂಧಿ ಸಿದವಲ್ಲ. ನಾಡು, ನುಡಿ, ಜಲ ಕಳಕಳಿ ಹೊಂದಬೇಕು ಎನ್ನುವ ದೃಷ್ಟಿಯಿಂದ ರಚಿತವಾದ ಕೃತಿಗಳು. ಕರ್ನಾಟಕ-ಮಹಾರಾಷ್ಟ್ರದ ಜನ ಸೌಹಾರ್ದಯುತವಾಗಿ ಇರಲು ಕೃತಿಗಳು ಅನುವಾದಗೊಂಡಿವೆ.
-ಶ್ರೀ ಅಲ್ಲಮಪ್ರಭು ಸ್ವಾಮೀಜಿ, ಸಿದ್ಧಸಂಸ್ಥಾನಮಠ, ಚಿಂಚಣಿ
-ಮಹಾದೇವ ಪೂಜೇರಿ