Advertisement

ಅಧ್ಯಾತ್ಮದ ಜೀರ್ಣೋದ್ಧಾರದಿಂದ ಸಂಸ್ಕಾರಯುತ ಬಾಳು: ರಘುನಾಥ ಕೆ. ಕೊಟ್ಟಾರಿ

06:56 PM Feb 28, 2021 | Team Udayavani |

ಮುಂಬಯಿ: ಧರ್ಮ ಮತ್ತು ರಾಷ್ಟ್ರದ ಭವಿಷ್ಯದ ರಕ್ಷಣೆಗೆ ಯುವ ಪೀಳಿಗೆಯಲ್ಲಿ  ಪೂರ್ವಜರ ಆದರ್ಶ ಜೀವನದ ಅರಿವು ಮೂಡಿಸಬೇಕು. ಮಕ್ಕಳಲ್ಲಿ ಆಧ್ಯಾತ್ಮದ ಜ್ಞಾನವನ್ನು ರೂಢಿಸುವುದರೊಂದಿಗೆ ಧರ್ಮ ರಕ್ಷಣೆಯ ನಿಟ್ಟಿನಲ್ಲಿ ಈ ದೇವಸ್ಥಾನದ ಸಮಿತಿ ಶ್ರಮಿಸುತ್ತಿದೆ. ಸಚ್ಚಾರಿತ್ರÂದ ಕಲಶಾಭಿಷೇಕ ಮತ್ತು ಅಧ್ಯಾತ್ಮದ ಜೀರ್ಣೋದ್ಧಾರ ಆದಾಗಲೇ ಸಂಸ್ಕಾರಯುತ ಬಾಳು ಸಾಧ್ಯ. ಆದ್ದರಿಂದ ಯುವ ಪೀಳಿಗೆಗೆ ಎಲ್ಲ ಆಚರಣೆಗಳನ್ನು ತಿಳಿಯುವ ಧರ್ಮಾಚರಣೆ ಪದ್ಧತಿ ತಿಳಿ ಹೇಳಿದಾಗಲೇ ಸಮಗ್ರ ಜೀವರಾಶಿಯ ಉದ್ಧಾರ ಸಾಧ್ಯ ಎಂದು ಮಲಾಡ್‌ ಪೂರ್ವದ ಕುರಾರ್‌ ವಿಲೇಜ್‌ನ ಶ್ರೀ ದುರ್ಗಾಪರಮೇಶ್ವರೀ ಸಮಿತಿಯ ಅಧ್ಯಕ್ಷ ರಘುನಾಥ ಕೆ. ಕೊಟ್ಟಾರಿ ತಿಳಿಸಿದರು.

Advertisement

ಮಲಾಡ್‌ ಪೂರ್ವದ ಕುರಾರ್‌ ವಿಲೇಜ್‌ ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ಸಮಿತಿ ಸಂಚಾಲಕತ್ವದ ಶ್ರೀ ದುರ್ಗಾಪರಮೇಶ್ವರೀ ಮಂದಿರದಲ್ಲಿ ನಡೆದ ಮಂದಿರದ 43ನೇ ವಾರ್ಷಿಕೋತ್ಸವದಲ್ಲಿ  ಮಾತನಾಡಿದ ಅವರು, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮಹಾನಗರದಲ್ಲಿನ ಭಕ್ತರ ಪುಣ್ಯಕ್ಷೇತ್ರವಾಗಿದೆ. ಕಳೆದ ಸುಮಾರು ನಾಲ್ಕೂವರೆ ದಶಕಗಳಿಂದ ಇಲ್ಲಿ ತುಳುನಾಡ ವೈಭವದ ಸಂಸ್ಕೃತಿ, ಸಂಪ್ರದಾಯಗಳೊಂದಿಗೆ ಭ್ರಮಾರಂಭಿಕೆಯ ಆರಾಧನೆಯನ್ನು ಶಾಸ್ತ್ರೋಕ್ತವಾಗಿ ನಡೆಸಲಾಗುತ್ತಿದೆ. ಆ ಮೂಲಕ ಅದೆಷ್ಟೋ ಭಕ್ತರು ಶ್ರೀ ದುರ್ಗೆಯ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ ಎಂದು ತಿಳಿಸಿ, ಶುಭ ಹಾರೈಸಿದರು.

14 ವಾರ್ಷಿಕ ಪುನಃಪ್ರತಿಷ್ಠಾಪನ ವರ್ಧಂತ್ಯುತ್ಸವದ ಅಂಗವಾಗಿ ಶನಿವಾರ ಬೆಳಗ್ಗೆಯಿಂದ ಸಂಪ್ರೋಕ್ಷಣೆ, ಪ್ರಧಾನ ಹೋಮ, ನವಕಲಶಾರಾಧನೆ, ಕಲಶಾಭಿಷೇಕ, ಮಹಾ ಮಂತ್ರಾಕ್ಷತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಬ್ರಹ್ಮಶ್ರೀ ಶಂಕರನಾರಾಯಣ ತಂತ್ರಿ ಡೊಂಬಿವಲಿ ಅವರ ಪ್ರಧಾನ ಪೌರೋಹಿತ್ಯದಲ್ಲಿ ನಡೆಸಲಾಯಿತು. ಮಂದಿರದ ಪ್ರಧಾನ ಅರ್ಚಕ ಸೂಡ ರಾಘವೇಂದ್ರ ಭಟ್‌ ಅವರು ಮಂದಿರದ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿದ್ದ ಪ್ರೇಮನಾಥ ಎಸ್‌. ಸಾಲ್ಯಾನ್‌ ಮತ್ತು ಕವಿತಾ ಪ್ರೇಮನಾಥ್‌ ದಂಪತಿಯನ್ನು ವಿಶೇಷವಾಗಿ ಹಾಗೂ ಮತ್ತಿತರ ಗಣ್ಯರನ್ನು ಮಹಾ ಪ್ರಸಾದವನ್ನಿತ್ತು ಗೌರವಿಸಿದರು. ಪುರೋಹಿತ ವರ್ಗದವರು ವಿವಿಧ ಪೂಜೆಗಳನ್ನು ನಡೆಸಿ ಭಕ್ತರನ್ನು ಹರಸಿದರು.

ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಎಸ್‌. ಬಿ. ಕೋಟ್ಯಾನ್‌ ಪ್ರಾರ್ಥನೆಗೈದರು. ಗಿರೀಶ್‌ ಬಿ. ಸುವರ್ಣ ಮತ್ತು ನೀಶಾ ಗಿರೀಶ್‌ ದಂಪತಿ ಪೂಜಾವಿಧಿಗಳ ಯಜಮಾನತ್ವ ವಹಿಸಿದ್ದರು. ಮಹಿಳಾ ಮಂಡಳಿಯ ಸದಸ್ಯೆಯರಿಂದ ಮತ್ತು ಭಕ್ತರಿಂದ ಭಜನ ಕಾರ್ಯಕ್ರಮ ನಡೆಯಿತು.

ಸಮಿತಿಯ ಅಧ್ಯಕ್ಷ ರಘುನಾಥ ಕೆ. ಕೊಟ್ಟಾರಿ ಮತ್ತು ಆಶಾ ರಘುನಾಥ್‌ ದಂಪತಿ, ಸಮಿತಿಯ ಗೌರವ ಕೋಶಾಧಿಕಾರಿ ಬಾಬು ಎಂ. ಸುವರ್ಣ ಮತ್ತಿತರ ಪದಾಧಿಕಾರಿಗಳ, ಕಾರ್ಯಕಾರಿ ಸಮಿತಿಯ ಸದಸ್ಯರು, ವಿಶೇಷ ಆಮಂತ್ರಿತ ಸದಸ್ಯರು, ಸಲಹೆಗಾರರು, ಮಹಿಳಾ ಮಂಡಳಿಯ ಸದಸ್ಯೆಯರು, ಸದಸ್ಯರು ವಿವಿಧ ಪೂಜಾ ಸೇವೆಗಳನ್ನು ನೆರವೇರಿಸಿದರು. ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ತೀರ್ಥಪ್ರಸಾದ ಸ್ವೀಕರಿಸಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಮತ್ತು ಶ್ರೀ ಗಣಪತಿ ದೇವರ ಕೃಪೆಗೆ ಪಾತ್ರರಾದರು. ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ವಿವಿಧ ಪೂಜಾ ಕಾರ್ಯಗಳು ನಡೆದವು.

Advertisement

ಚಿತ್ರ – ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next