ಜ್ಯೂರಿಚ್: ಅಚ್ಚರಿಯೆನಿಸಿದರೂ ಇದು ಸತ್ಯ! ಸ್ವಿಜರ್ಲೆಂಡ್‌ನ ಒಳಚರಂಡಿಗಳ ಮೂಲಕ ಹರಿದುಹೋಗುವ ಕೊಳಚೆ ನೀರಿನಲ್ಲಿ ಕಳೆದೊಂದು ವರ್ಷದಲ್ಲಿ ಬರೋಬ್ಬರಿ 43 ಕೆಜಿ ಚಿನ್ನ, 3 ಟನ್ ಬೆಳ್ಳಿ ದೊರಕಿದೆಯಂತೆ!
ಹೌದಾ… ಹಾಗಾದರೆ, ಭಾರತದಲ್ಲಿ ಮ್ಯಾನ್ ಹೋಲ್‌ನಲ್ಲೂ ಇಂಥ ನಿಧಿ ಸಿಗ ಬಹುದೇ ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ, ಸ್ವಲ್ಪ ತಾಳಿ. ಅಲ್ಲಿನ ಕಥೆ ಬೇರೆಯೇ ಇದೆ.
ಹೀಗೆ, ಚಿನ್ನ ಸಿಗುತ್ತಿರುವುದು ಸ್ವಿಜರ್ಲೆಂಡ್‌ನ ಕೈಗಾರಿಕಾ ತಾಣಗಳಿರುವ ಪ್ರದೇಶಗಳಲ್ಲಿ. ಅದರಲ್ಲೂ ಅಲ್ಲಿನ ಕೊಳಚೆ ನೀರಿನಲ್ಲಿ ಸಿಗುತ್ತಿರುವುದು ಮಿಲಿ, ಮೈಕ್ರೋ ಗ್ರಾಂಗ ಳಷ್ಟು ಚಿನ್ನ, ಬೆಳ್ಳಿ. ಕಳೆದೊಂದು ವರ್ಷದಿಂದ ಕೊಳಚೆ ನೀರಿನಿಂದ ಹೀಗೆ ಸಂಗ್ರಹಿಸಿರುವ ಚಿನ್ನದ ಪ್ರಮಾಣವೇ 43 ಕೆಜಿ ಎಂದು ಅಲ್ಲಿನ “ಇನ್‌ಸ್ಟಿಟ್ಯೂಟ್ ಆಫ್ ಆ್ಯಕ್ವಟಿಕ್ ಆ್ಯಂಡ್ ಟೆಕ್ನಾಲಜಿ’ (ಇಎಡಬ್ಲ್ಯುಎಜಿ) ವಿಜ್ಞಾನಿಗಳು ಹೇಳಿದ್ದಾರೆ.
ಅವರು ಹೇಳುವ ಪ್ರಕಾರ, ಸ್ವಿಜರ್ಲೆಂಡ್‌ನ ಪಶ್ಚಿಮ ಭಾಗದಲ್ಲಿರುವ ಜುಬಾ ಪ್ರಾಂತ್ಯದಲ್ಲಿ ದುಬಾರಿ ವಾಚ್ ತಯಾರಿಕಾ ಕಂಪೆನಿಗಳಿದ್ದು, ಆ ಕಂಪೆನಿಗಳು ಸಾಮಾನ್ಯವಾಗಿ ತಮ್ಮ ವಾಚುಗಳ ಅಲಂಕಾರಕ್ಕಾಗಿ ಚಿನ್ನ, ಬೆಳ್ಳಿ ಬಳಸುತ್ತವೆ. ಹಾಗಾಗಿ, ಆ ಕಂಪೆನಿಗಳಿಂದ ಹೊರಬರುವ ತ್ಯಾಜ್ಯದ ನೀರಿನಲ್ಲಿ ಚಿನ್ನದ ಅಂಶ ಪತ್ತೆಯಾಗಿದೆ. ಹಾಗೆಯೇ, ದಕ್ಷಿಣ ವಲಯದ ಟಿಸಿನೊದಲ್ಲಿ ಹೆಚ್ಚಾಗಿ ಚಿನ್ನದ ಶುದ್ಧೀಕರಣ ಘಟಕಗಳು ಇರುವುದರಿಂದ ಆ ಪ್ರಾಂತ್ಯದ ಕೊಳಚೆ ನೀರಿನಲ್ಲಿ ಚಿನ್ನದ ಅಂಶ ಹೇರಳವಾಗಿ ಸಿಕ್ಕಿವೆ. ಕೆಲ ಔಷಧ ತಯಾರಿಕಾ ಕಂಪೆನಿಗಳೂ ಚಿನ್ನವನ್ನು ಬಳಸುವುದರಿಂದ ಆ ಪ್ರಾಂತ್ಯಗಳ ಕೊಳಚೆ ನೀರಿನಲ್ಲಿ ಚಿನ್ನ ಸಿಗುತ್ತಿದೆ ಎನ್ನುತ್ತಾರೆ ವಿಜ್ಞಾನಿಗಳು.