Advertisement

FIR: 439 ಕೋ.ರೂ. ವಂಚನೆ: ರಮೇಶ್‌ ಜಾರಕಿಹೊಳಿ ವಿರುದ್ಧ ಎಫ್ಐಆರ್‌

09:49 PM Jan 07, 2024 | Team Udayavani |

ಬೆಂಗಳೂರು: ಮಾಜಿ ಸಚಿವ ಹಾಗೂ ಗೋಕಾಕದ ಹಾಲಿ ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ವಿರುದ್ಧ ಬರೋಬ್ಬರಿ 439 ಕೋಟಿ ರೂ. ಸಾಲ ಪಡೆದು ವಂಚಿಸಿದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ.

Advertisement

ಈ ಸಂಬಂಧ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ದಿ ಕರ್ನಾಟಕ ಸ್ಟೇಟ್‌ ಕೋ-ಆಪರೇಟಿವ್‌ ಅಪೆಕ್ಸ್‌ ಬ್ಯಾಂಕ್‌ ಲಿಮಿಟೆಡ್‌ನ‌ ಪ್ರಧಾನ ವ್ಯವಸ್ಥಾಪಕ ರಾಜಣ್ಣ ಎಂಬವರು ನೀಡಿದ ದೂರಿನ ಮೇರೆಗೆ ಬೆಳಗಾವಿಯ ಗೋಕಾಕದಲ್ಲಿರುವ ಸೌಭಾಗ್ಯಲಕ್ಷ್ಮೀ ಶುಗರ್ಸ್‌ ಲಿಮಿಟೆಡ್‌ ಕಂಪೆನಿಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ರಮೇಶ್‌ ಎಲ್‌. ಜಾರಕಿಹೊಳಿ, ನಿರ್ದೇಶಕರಾದ ವಸಂತ್‌ ವಿ. ಪಾಟೀಲ್‌, ಶಂಕರ್‌ ಎ. ಪಾವಡೆ ವಿರುದ್ಧ ವಂಚನೆ, ಮೋಸ, ನಂಬಿಕೆದ್ರೋಹ ಆರೋಪದಡಿ ವಿ.ವಿ.ಪುರ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ.

ಏನಿದು ವಂಚನೆ?
ರಮೇಶ್‌ ಜಾರಕಿಹೊಳಿ, ವಸಂತ್‌ ವಿ. ಪಾಟೀಲ್‌, ಶಂಕರ್‌ ಎ. ಪಾವಡೆ ಅವರು ಕಾರ್ಖಾನೆ ಸ್ಥಾಪನೆ, ವಿಸ್ತರಣೆ ಮತ್ತು ನಿರ್ವಹಣೆಗಾಗಿ ಅಪೆಕ್ಸ್‌ ಬ್ಯಾಂಕ್‌ನಿಂದ ಅವಧಿ ಸಾಲ ಮತ್ತು ದುಡಿಯುವ ಬಂಡವಾಳ ಸಾಲ ಪಡೆದು ಮರುಪಾವತಿ ಮಾಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

439.07 ಕೋಟಿ ರೂ. ಸಾಲ ಬಾಕಿ!
ಅಪೆಕ್ಸ್‌ ಬ್ಯಾಂಕ್‌ ಮತ್ತು ಅದರ ಸಮೂಹ ಬ್ಯಾಂಕ್‌ಗಳಲ್ಲಿ 2013 ಜು. 12ರಿಂದ 2017 ಮಾ. 31ರ ವರೆಗೆ ಹಂತಹಂತವಾಗಿ ಒಟ್ಟು 232.88 ಕೋಟಿ ರೂ. ಸಾಲ ಮಂಜೂರು ಮಾಡಲಾಗಿತ್ತು. ಆದರೆ ಸಾಲವನ್ನು ಮರುಪಾವತಿಸದ ಕಾರಣ 2023ರ ಆ. 31ಕ್ಕೆ ಒಟ್ಟು 439.07 ಕೋಟಿ ರೂ. ಸಾಲ ಬಾಕಿ ಉಳಿಸಿಕೊಂಡಿ¨ªಾರೆ ಎಂದು ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ರಾಜಣ್ಣ ದೂರಿನಲ್ಲಿ ಉಲ್ಲೇಖೀಸಿದ್ದಾರೆ.

ಷರತ್ತುಗಳ ಉಲ್ಲಂಘನೆ
ಬ್ಯಾಂಕ್‌ನಲ್ಲಿ ಸಾಲ ಪಡೆಯುವಾಗ ಆರೋಪಿಗಳು ಸೌಭಾಗ್ಯಲಕ್ಷ್ಮೀ ಶುಗರ್ಸ್‌ ಲಿ. ಕಂಪೆನಿಯ ಅಧ್ಯಕ್ಷರು, ಮ್ಯಾನೇಜಿಂಗ್‌ ಡೈರೆಕ್ಟರ್‌ ಮತ್ತು ನಿರ್ದೇಶಕರಾಗಿದ್ದರು. ಬ್ಯಾಂಕ್‌ನ ಅಧಿಕಾರಿಗಳು ಸಾಲ ಮಂಜೂರು ಮಾಡುವ ವೇಳೆ ಸಾಲ ಮರುಪಾವತಿ ಆಗುವವರೆಗೂ ಬ್ಯಾಂಕ್‌ನ ಅನುಮತಿ ಇಲ್ಲದೇ ಕಂಪೆನಿಯ ಆಡಳಿತ ನಿರ್ದೇಶಕರನ್ನಾಗಲೀ, ನಿರ್ದೇಶಕರನ್ನಾಗಲೀ ಬದಲಾಯಿಸುವಂತಿಲ್ಲ ಎಂದು ಷರತ್ತು ವಿಧಿಸಿದ್ದರು. ಆ ಷರತ್ತುಗಳನ್ನು ಉಲ್ಲಂ ಸಿದ್ದಾರೆ.

Advertisement

ಸಾಲದಿಂದ ತಪ್ಪಿಸಿಕೊಳ್ಳಲು “ಹುದ್ದೆ ತ್ಯಾಗ”
ಸಾಲ ಮರುಪಾವತಿಯಿಂದ ತಪ್ಪಿಸಿಕೊಳ್ಳುವ ಉದ್ದೇಶ ಮತ್ತು ಬ್ಯಾಂಕ್‌ಗೆ ಮೋಸ ಮಾಡುವ ಉದ್ದೇಶದಿಂದ ಬ್ಯಾಂಕ್‌ಗೆ ಯಾವುದೇ ಮಾಹಿತಿ ನೀಡದೆ ಕಂಪೆನಿಯ ಆಡಳಿತ ಮಂಡಳಿಯಲ್ಲಿ ತಮ್ಮ ಹುದ್ದೆಗಳಿಂದ ಹೊರಬಂದು ಸಂಬಂಧವೇ ಇಲ್ಲದ ವ್ಯಕ್ತಿಗಳನ್ನು ಕಂಪೆನಿಗೆ ನಿರ್ದೇಶಕರನ್ನಾಗಿ ನೇಮಿಸಿದ್ದಾರೆ. ಈ ಮೂಲಕ ಬ್ಯಾಂಕ್‌ಗೆ ನಂಬಿಕೆ ದ್ರೋಹ ಎಸಗಿ ಮೋಸ ಮಾಡಿದ್ದಾರೆ. ಹೀಗಾಗಿ ಈ ಮೂವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ರಾಜಣ್ಣ ದೂರಿನಲ್ಲಿ ಕೋರಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next