ಬೆಂಗಳೂರು: ಆತ್ಮನಿರ್ಭರ ಯೋಜನೆಯಡಿ ರಾಜ್ಯಕ್ಕೆ ಈವರೆಗೆ 4267 ಕೋಟಿ ರೂ. ಬಿಡುಗಡೆಯಾಗಿದ್ದು, ಮುಂದೆಯೂ ಹಂತ ಹಂತವಾಗಿ ಸೌಲಭ್ಯ ಸಿಗಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು. ನಗರದಲ್ಲಿ ಶುಕ್ರವಾರ ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಂಎಸ್ ಎಂಇ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ನೆರವಾಗಿದ್ದು, ರಾಜ್ಯದ 1,58,786 ಎಂಎಸ್‌ಎಂಇಗೆ ಸುಮಾರು 4106 ಕೋಟಿ ರೂ. ನೀಡಬೇಕಿತ್ತು. ಈ ಪೈಕಿ 87,868 ಎಂಎಸ್‌ಎಂಇಗಳಿಗೆ 2439 ಕೋಟಿ ರೂ. ವಿತರಣೆಯಾಗಿದೆ.
ರಾಜ್ಯದ 3,10,688 ಮಂದಿ ಇಪಿಎಫ್‌ನಡಿ 1,125 ಕೋಟಿ ರೂ. ಹಿಂಪಡೆದಿದ್ದಾರೆ. ಹಾಗೆಯೇ ಬಿಲ್ಡಿಂಗ್ ಆ್ಯಂಡ್ ಕನ್‌ಸ್ಟ್ರಕ್ಷನ್ ಫಂಡ್‌ನಿಂದ ರಾಜ್ಯಕ್ಕೆ 681 ಕೋಟಿ ರೂ. ಬಿಡುಗಡೆ ಯಾಗಿದೆ ಎಂದು ಮಾಹಿತಿ ನೀಡಿದರು. ರಾಜ್ಯದ 88,09,042 ಮಂದಿಯ ಜನ್‌ಧನ್ ಖಾತೆಗೆ ಏಪ್ರಿಲ್, ಮೇ, ಜೂನ್ ತಿಂಗಳಿಗೆ ಒಟ್ಟು 161 ಕೋಟಿ ರೂ. ಜಮೆಯಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ 48.39 ಲಕ್ಷ ರೈತರಿಗೆ ತಲಾ 2000 ರೂ.ನಂತೆ 967.81 ಕೋಟಿ ರೂ. ಪಾವತಿಯಾಗಿದೆ ಎಂದು ವಿವರ ನೀಡಿದರು.
ದುರುಪಯೋಗಕ್ಕೆ ಅವಕಾಶವಿಲ್ಲ: ಆತ್ಮನಿರ್ಭರ ಯೋಜನೆಯ ಅನುಷ್ಠಾನದಲ್ಲಿ ಯಾವುದೇ ರೀತಿಯ ತೊಂದರೆಗಳಿದ್ದರೆ ಆ ಬಗ್ಗೆ ರಾಜ್ಯದ ಜನ ನಮಗೆ ಮಾಹಿತಿ ನೀಡಬಹುದು. ಪ್ರಧಾನಿಯವರು ಘೋಷಿಸಿದ ಯೋಜನೆಯಡಿ ನಯಾ ಪೈಸೆಯನ್ನೂ ಕಟ್ಟಕಡೆಯ ಫಲಾನುಭವಿಗೆ ತಲುಪಿಸುತ್ತೇವೆ. ದರಲ್ಲಿ ದುರುಪಯೋಗಕ್ಕೆ ಅವಕಾಶವಾಗದಂತೆ ನೋಡಿಕೊಳ್ಳಲಾಗುವುದು.
ಆ ಮೂಲಕ ಸ್ವಾಭಿಮಾನಿ ಭಾರತದ ನಿರ್ಮಾಣಕ್ಕೆ ಕರ್ನಾಟಕದ ಕೊಡುಗೆ ನೀಡುವುದು ನಮ್ಮ ಅಪೇಕ್ಷೆ ಎಂದರು. ಸ್ವಾವಲಂಬಿ ಭಾರತದ ನಿರ್ಮಾಣಕ್ಕಾಗಿ ಪ್ರಧಾನಿ 20 ಲಕ್ಷ ಕೋಟಿ ರೂ. ಮೊತ್ತದ ಆತ್ಮನಿರ್ಭರ ಯೋಜನೆ ಲೋಕಾರ್ಪಣೆ ಮಾಡಿದ್ದಾರೆ. ಈ ಯೋಜನೆ ಎಷ್ಟರ ಮಟ್ಟಿಗೆ ಜಾರಿಯಾಗಿದೆ ಎಂಬುದನ್ನು ಎಲ್ಲ ಸಂಸದರು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿ ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಪ್ರಧಾನಿ ಸೂಚಿಸಿದ್ದಾರೆ ಎಂದು ತಿಳಿಸಿದರು.
ಆ ಹಿನ್ನೆಲೆಯಲ್ಲಿ ಬೆಂಗಳೂರಿನ ಮೂವರು ಸಂಸದರು ಯೋಜನೆ ಅನುಷ್ಠಾನದ ಸ್ಥಿತಿಗತಿ ಪರಿಶೀಲಿಸುವ ಜತೆಗೆ ಜಾರಿಗಿರುವ ಅಡಚಣೆಗಳನ್ನು ತೆರವುಗೊಳಿಸಿ ಅನುಷ್ಠಾನಕ್ಕೆ ತರಲು ಸಹಕಾರ ನೀಡಲಿದ್ದೇವೆ. ವಲಸೆ ಕಾರ್ಮಿಕರು ಸೇರಿದಂತೆ ಬಡವರಿಗೆ ತೊಂದರೆಯಾಗದಂತೆ ಕೇಂದ್ರ ಸರ್ಕಾರ ನವೆಂಬರ್ ಅಂತ್ಯದವರೆಗೆ ಉಚಿತ ಪಡಿತರ ವಿತರಿಸಲು ನಿರ್ಧರಿಸಿದೆ. ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿದೆಯೇ ಎಂಬುದನ್ನು ಖುದ್ದಾಗಿ ಪರಿಶೀಲಿಸುವಂತೆ ಪ್ರಧಾನಿ ಸೂಚಿಸಿದ್ದಾರೆ ಎಂದು ಹೇಳಿದರು.