ಮುಂಬಯಿ, ಆ. 7: ಕೋವಿಡ್ ಮಹಾಮಾರಿ ಪ್ರಕೋಪದ ಸಂದರ್ಭ ಮಹಾರಾಷ್ಟ್ರದಲ್ಲಿ ಸಿಕ್ಕಿಕೊಂಡ ವಲಸೆ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ಕರೆದೊಯ್ಯಲು ಏರ್ಪಡಿಸಿದ್ದ ಶ್ರಮಿಕ ವಿಶೇಷ ರೈಲುಗಳಲ್ಲಿ ಹೆಚ್ಚಿನವು ಖಾಲಿ ಓಡಿದ್ದರಿಂದಾಗಿ ಸುಮಾರು 42 ಲಕ್ಷ ರೂ.ಗಳ ನಷ್ಟ ಉಂಟಾಗಿದೆ ಎಂದು ಮಹಾರಾಷ್ಟ್ರ ಸರಕಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.
ಕೋವಿಡ್ ಸಂಧರ್ಭ ಮಹಾರಾಷ್ಟ್ರದಲ್ಲಿ ಸಿಕ್ಕಿಕೊಂಡಿರುವ ವಲಸೆ ಕಾರ್ಮಿಕರ ದುಃಸ್ಥಿತಿಯ ಬಗ್ಗೆ ನಗರ ಮೂಲದ ಟ್ರೇಡ್ ಯೂನಿಯನ್ ಸಂಸ್ಥೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್‌ಯೂನಿಯನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಿಚಾರಣೆ ನಡೆಸಿದ್ದು, ಪ್ರಸ್ತುತ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಂದ ಮತ್ತೆ ಮಹಾರಾಷ್ಟ್ರಕ್ಕೆ ಹಿಂತಿರುಗುತ್ತಿದ್ದಾರೆ ಎಂದು ರಾಜ್ಯ ಸರಕಾರದ ಪರವಾಗಿ ಹಾಜರಾದ ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಅವರು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಎ.ಎಸ್. ಗಡ್ಕರಿ ನೇತೃತ್ವದ ವಿಭಾಗೀಯ ಪೀಠಕ್ಕೆ ತಿಳಿಸಿದ್ದಾರೆ.
ಕಳೆದ ತಿಂಗಳು ರಾಜ್ಯ ಸರಕಾರವು ಸಾವಿರಾರು ವಲಸೆ ಕಾರ್ಮಿಕರನ್ನು ಕರೆದೊಯ್ಯಲು ರೈಲುಗಳ ವ್ಯವಸ್ಥೆಯನ್ನು ಮಾಡಿತ್ತು ಆದರೆ ಕೇವಲ 3,551 ಮಂದಿ ಮಾತ್ರ ಆ ರೈಲುಗಳಲ್ಲಿ ಪ್ರಯಾಣಿಸಿದ್ದರು. ಇದರಿಂದಾಗಿ ರಾಜ್ಯ ಸರಕಾರವು ಸುಮಾರು 42 ಲಕ್ಷ ರೂ.ಗಳ ನಷ್ಟವನ್ನು ಅನುಭವಿಸಿದೆ ಎಂದು ಕುಂಭಕೋಣಿ ಅವರು ಹೇಳಿದರು.
ಪುಣೆಯಿಂದ 383 ಜನರನ್ನು ಅವರ ತವರು ರಾಜ್ಯಕ್ಕೆ ಕರೆದೊಯ್ಯಲು ರೈಲಿನ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ನಿರ್ಗಮನದ ದಿನ ಕೇವಲ 49 ಜನರು ಮಾತ್ರ 24 ಭೋಗಿಗಳ ರೈಲನ್ನು ಹತ್ತಿದ್ದರು ಎಂದವರು ನ್ಯಾಯಾಲಯಕ್ಕೆ ತಿಳಿಸಿದರು. ಕೋವಿಡ್ ಆರಂಭದಲ್ಲಿ ರಾಜ್ಯವನ್ನು ತೊರೆದ ಲಕ್ಷಾಂತರ ವಲಸೆ ಕಾರ್ಮಿಕರು ಈಗ ಮಹಾರಾಷ್ಟ್ರಕ್ಕೆ ಮರಳುತ್ತಿದ್ದಾರೆ ಎಂದು ಕುಂಭಕೋಣಿ ಹೇಳಿದ್ದಾರೆ. ಇನ್ನೂ ಹಲವಾರು ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳಕ್ಕೆ ಹಿಂತಿರುಗಲು ಕಾಯುತ್ತಿದ್ದಾರೆ ಎಂದು ಅರ್ಜಿದಾರರ ಪರ ವಕೀಲೆ ರೋನಿತಾ ಭಟ್ಟಾಚಾರ್ಯ ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಅರ್ಜಿದಾರರಿಗೆ ತವರು ರಾಜ್ಯಗಳಿಗೆ ಹಿಂತಿರುಗಲು ಬಯಸುವ ವಲಸೆ ಕಾರ್ಮಿಕರ ಸಂಖ್ಯೆಯನ್ನು ಕಂಡುಹಿಡಿಯುವಂತೆ ನಿರ್ದೇಶನ ನೀಡಿತು. ರೈಲುಗಳ ಸಂಖ್ಯೆ, ಎಷ್ಟು ವಲಸಿಗರು ರೈಲುಗಳನ್ನು ಹತ್ತಿದರು ಮತ್ತು ಸರಕಾರವು ಮಾಡಿದ ಖರ್ಚಿನ ವಿವರಗಳನ್ನು ನೀಡುವ ಅಫಿದಾವಿತ್ ಸಲ್ಲಿಸುವಂತೆ ನ್ಯಾಯಪೀಠವು ಕುಂಭಕೋಣಿ ಅವರಿಗೆ ನಿರ್ದೇಶನ ನೀಡಿತು.