Advertisement
ಪತ್ತೆಯಾಗಿರುವ ಹಣದ ಮೂಲದ ಬಗ್ಗೆ ಐ.ಟಿ. ಅಧಿಕಾರಿಗಳು ಕೆದಕಿದಾಗ ಹವಾಲದಿಂದ ಬಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಕುರಿತು ಸೂಕ್ತ ಸಾಕ್ಷ್ಯ ಕಲೆ ಹಾಕಲಾಗುತ್ತಿದೆ. ಅಂಬಿಕಾಪತಿ 42 ಕೋಟಿ ರೂ.ಗೆ ಸೂಕ್ತ ದಾಖಲೆ ನೀಡಿಲ್ಲ. ಐ.ಟಿ. ಅಧಿಕಾರಿಗಳ ಪ್ರಶ್ನೆಗೆ ಗೊಂದಲದ ಉತ್ತರ ನೀಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
Related Articles
ಬೆಂಗಳೂರಿನ ಮಾನ್ಯತಾ ಟೆಕ್‌ಪಾರ್ಕ್‌ನ ನಿವಾಸದ ಮೇಲೆ ಶುಕ್ರವಾರ ಬೆಳಗ್ಗಿನಿಂದ ಆರಂಭಗೊಂಡ ಐಟಿ ಅಧಿಕಾರಿಗಳ ಪರಿಶೀಲನೆ ಕಾರ್ಯ ಶನಿವಾರ ಸಂಜೆ ವೇಳೆಗೆ ಮುಕ್ತಾಯಗೊಂಡಿದೆ. ಶುಕ್ರವಾರ ರಾತ್ರಿಯಿಡೀ ಇಬ್ಬರು ಅಧಿಕಾರಿಗಳು ಅಂಬಿಕಾಪತಿ ಮನೆಯಲ್ಲೇ ಬೀಡು ಬಿಟ್ಟಿದ್ದರು. ಪರಿಶೀಲನೆ ವೇಳೆ ವಶಕ್ಕೆ ಪಡೆದ ದಾಖಲೆಗಳನ್ನು ಕುಟುಂಬಸ್ಥರ ಸಮ್ಮುಖದಲ್ಲಿ ಶನಿವಾರ ಐಟಿ ಅಧಿಕಾರಿಗಳು ಪಂಚನಾಮೆ ಪ್ರಕ್ರಿಯೆ ನಡೆಸಿದರು. ಬಳಿಕ ದಾಖಲೆಗಳನ್ನು ಬ್ಯಾಗ್‌ನಲ್ಲಿ ತುಂಬಿ ಐ.ಟಿ. ಕಚೇರಿಗೆ ತಂದು ಪರಿಶೀಲನೆ ನಡೆಸುತ್ತಿದ್ದಾರೆ. ಅಂಬಿಕಾಪತಿ ಪುತ್ರ ಪ್ರದೀಪ್, ಪ್ರಮೋದ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ದಾಳಿ ವೇಳೆ ಸಿಕ್ಕಿದ ಸಾಕ್ಷ್ಯ ಮುಂದಿಟ್ಟು ಅಂಬಿಕಾಪತಿ ಹಾಗೂ ಕುಟುಂಬಸ್ಥರನ್ನು ವಿಚಾರಣೆ ನಡೆಸಲು ಐ.ಟಿ. ಸಿದ್ಧತೆ ನಡೆಸಿದೆ.
Advertisement
ದುಡ್ಡು ನಮಗೆ ಸೇರಿದ್ದುಐ.ಟಿ. ಪರಿಶೀಲನೆ ಅಂತ್ಯವಾದ ಬಳಿಕ ಅಂಬಿಕಾಪತಿ ಪುತ್ರ ಪ್ರದೀಪ್ ಮನೆಯಿಂದ ಹೊರ ಹೋಗುವ ವೇಳೆ ಸುದ್ದಿಗಾರರ ಜತೆಗೆ ಮಾತನಾಡಿ, ಅದು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ದುಡ್ಡಲ್ಲ. ಕಳೆದ ಒಂದೂವರೆ ದಶಕಗಳಿಂದ ನಾನು ರಿಯಲ್ ಎಸ್ಟೇಟ್ ಸಹಿತ ಹಲವು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದೇನೆ. ದಾಳಿ ವೇಳೆ ಪತ್ತೆಯಾದ ದುಡ್ಡು ನಮಗೆ ಸೇರಿದ್ದಾಗಿದೆ. ಅಧಿಕಾರಿಗಳಿಗೆ ಸೂಕ್ತ ದಾಖಲೆ ಸಲ್ಲಿಸಿ ಹಣವನ್ನು ವಾಪಸ್ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ. ಏನಿದು ಪ್ರಕರಣ ?
ಐಟಿ ಅಧಿಕಾರಿಗಳು ಗುರುವಾರ ನಗರದ ಕೆಲವು ಚಿನ್ನದ ಅಂಗಡಿಗಳ ಮೇಲೆ ದಾಳಿ ನಡೆಸಿದ್ದರು. ಆ ವೇಳೆ ಪತ್ತೆಯಾದ ಕೆಲವು ದಾಖಲೆಗಳನ್ನು ಪರಿಶೀಲಿಸಿ ಅಂಗಡಿ ಮಾಲಕರಿಂದ ಮಾಹಿತಿ ಕಲೆ ಹಾಕಿದಾಗ ಅಂಬಿಕಾಪತಿ ಹಾಗೂ ಆತನ ಪುತ್ರರ ಬಳಿ ಭಾರೀ ಪ್ರಮಾಣದ ನಗದು ಸಂಗ್ರಹವಾಗಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಇದರ ಆಧಾರದಲ್ಲಿ ಅಂಬಿಕಾಪತಿ ನಿವಾಸದ ಮೇಲೆ ದಾಳಿ ಮಾಡಿದ್ದಾ ಗ ಮಂಚದ ಕೆಳಗೆ ಬಾಕ್ಸ್‌ಗಳಲ್ಲಿ ತುಂಬಿ ಇಟ್ಟಿದ್ದ ಕಂತೆ-ಕಂತೆ ಗರಿ ಗರಿ 500 ಮುಖಬೆಲೆಯ ನೋಟುಗಳು ಪತ್ತೆಯಾಗಿದ್ದವು. ರಾತ್ರಿ ಕಾರ್ಪೆಂಟರ್‌ಗಳನ್ನು ಕರೆತಂದು ಲಾಕರ್ ಒಡೆದಾಗ ಎರಡು ಸೂಟ್‌ಕೇಸ್ ಪತ್ತೆಯಾಗಿದೆ. ಅದನ್ನು ತೆರೆದಾಗ ನಗದು, ಚಿನ್ನಾಭರಣ, ವಿವಿಧ ರಿಯಲ್ ಎಸ್ಟೇಟ್ ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿತ್ತು. ಪಿತೃಪಕ್ಷ ಕಾರ್ಯ
ಐಟಿ ಅಧಿಕಾರಿಗಳ ದಾಳಿ ನಡುವೆಯೂ ಅಂಬಿಕಾಪತಿ ಮನೆಯಲ್ಲಿ ಪಿತೃಪಕ್ಷ ಕಾರ್ಯ ನಡೆಸಲಾಯಿತು. ಜತೆಗೆ ಮುಂದೆ ಬರುವ ಹಬ್ಬಕ್ಕೆ ಮನೆಯ ಮುಂದೆ ತೋರಣ ಕಟ್ಟಿ ಪೂಜೆಗೆ ತಯಾರಿ ನಡೆಸಲಾಗುತ್ತಿದೆ. ಇ.ಡಿ. ಪ್ರವೇಶ ಸಾಧ್ಯತೆ
40 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳಿಗೂ ಗೌಪ್ಯವಾಗಿ ದುಡ್ಡಿನ ಮೂಲದ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಸದ್ಯದಲ್ಲೇ ಇ.ಡಿ. ಅಧಿಕಾರಿಗಳೂ ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವ ಸಾಧ್ಯತೆಗಳಿವೆ.