ದೊಡ್ಡಬಳ್ಳಾಪುರ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ ಅತ್ಯುತ್ತಮವಾಗಿ ನಡೆಯುತ್ತಿರುವ ಸಹಕಾರ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸಂಘವು 2021-22ನೇ ಸಾಲಿನಲ್ಲಿ 42.63 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ವಿ. ಅಂಜನೇಗೌಡ ಹೇಳಿದರು.
ನಗರದಲ್ಲಿ ನಡೆದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹಾಗೂ ಸಂಘದ ಸದಸ್ಯರ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ವತಿಯಿಂದ ಜನತಾ ಬಜಾರ್ ಶಾಖೆಯ ಮೂಲಕ ಗ್ರಾಹಕರಿಗೆ ಗುಣಮಟ್ಟದ ಹಾಗೂ ಕಡಿಮೆ ದರದಲ್ಲಿ ದಿನಸಿ ಮಾರಾಟ ಮಳಿಗೆಯನ್ನು ತಾಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಲ್ಲೂ ತೆರೆಯಲು ಯೋಜನೆ ಹೊಂದಲಾಗಿದೆ ಎಂದರು.
ನಗರದಲ್ಲಿ 60ರ ದಶಕದಲ್ಲೇ ಟಿಎಪಿಎಂಸಿಎಸ್ ಸಂಘವನ್ನು ಸ್ಥಾಪನೆ ಮಾಡುವ ಮೂಲಕ ರೈತರ ನೆರವಿಗೆ ನಿಂತ ಜಿ. ರಾಮೇಗೌಡ ಅವರ ಪ್ರತಿಮೆಯನ್ನು ಸಂಘದ ಆವರಣದಲ್ಲಿ ಸ್ಥಾಪನೆ ಮಾಡಲಾಗುವುದು. ಸಂಘದ ಎಲ್ಲಾ ವಹಿವಾಟು ಗಣಕೀಕೃತಗೊಂಡಿದ್ದು, ಸಂಘದಲ್ಲಿ ಹೆಚ್ಚಿನ ವಹಿವಾಟು ನಡೆಸುವ ಸದಸ್ಯರಿಗೆ ಹಾಗೂ ಇತರೆ ಗ್ರಾಹಕರಿಗೂ ಹೆಚ್ಚಿನ ರಿಯಾಯಿತಿ ನೀಡಲಾಗುವುದು. ಸಂಘದ ಮೂಲಕ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಸಗೊಬ್ಬರ, ಪಶು ಆಹಾರ ವನ್ನು ಮಾರಾಟ ಮಾಡಲಾಗುತ್ತಿದೆ. ಮುಂದಿನ ಚುನಾವಣೆಯಿಂದ ಹೋಬಳಿ ಮಟ್ಟದಿಂದ ನಿರ್ದೇಶಕರು ಆಯ್ಕೆಯಾಗುವಂತೆ ಸಂಘದ ಬೈಲಾ ತಿದ್ದುಪಡಿ ಮಾಡಲಾಗಿದೆ ಎಂದರು.
ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ, ಸಹಕಾರ ಕ್ಷೇತ್ರವನ್ನು ತಾಲೂಕಿನಲ್ಲಿ ಉತ್ತಮ ರೀತಿಯಲ್ಲಿ ಬೆಳೆಯಲು ಹಿರಿಯರು ಭದ್ರ ಬುನಾದಿ ಹಾಕಿದ್ದಾರೆ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ನಿಯಮ ಸಡಿಲಗೊಳಿಸಿ: ಸಂಘದ ಸದಸ್ಯ ವೆಂಕಟೇಶ್, ಚಂದ್ರಪ್ಪ, ಕೆಂಪೇಗೌಡ, ಮುನಿಯಪ್ಪ, ಉಮಾದೇವಿ ಮಾತನಾಡಿ, ನಿಗದಿತ ಮೊತ್ತದಲ್ಲಿ ಸಂಘದಲ್ಲಿ ವಹಿವಾಟು ನಡೆಸುವ ಸದಸ್ಯರು ಮಾತ್ರ ಚುನಾವಣೆಗೆ ಸ್ಪರ್ಧಿಸಬೇಕು ಎನ್ನುವ ನಿಯಮ ಸಡಿಲಗೊಳಿಸಬೇಕು ಎಂದರು.
ಮಕ್ಕಳಿಗೆ ಪ್ರತಿಭಾ ಪುರಸ್ಕಾರ: ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 85ಕ್ಕೂ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ಉಮಾಧ್ಯಕ್ಷೆ ಚಂದ್ರಕಲಾ, ನಿರ್ದೇಶಕ ಡಿ. ಸಿದ್ದರಾಮಯ್ಯ, ಎಂ.ವೆಂಕಟೇಶ್, ಜಿ. ಮಾರೇಗೌಡ, ಎಂ.ಗೋವಿಂದರಾಜ್, ಎಸ್ .ದಯಾನಂದ್, ಎನ್. ರಂಗಪ್ಪ, ಟಿ.ವಿ. ಲಕ್ಷ್ಮೀನಾರಾಯಣ್, ಲಕ್ಷ್ಮೀ, ಎಂ.ಆನಂದ್, ಗೋವಿಂದರಾಜು, ಕೆ.ಸಿ. ಲಕ್ಷ್ಮೀನಾರಾಯಣ, ಜಿ. ಚುಂಚೇಗೌಡ, ಸಿದ್ದರಾಮಣ್ಣ, ಪ್ರಭಾರ ಕಾರ್ಯದರ್ಶಿ ಎಚ್. ಅಶ್ವತ್ಥನಾರಾಯಣಗೌಡ, ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ಮುಖಂಡ ಸಿ.ಡಿ. ಸತ್ಯನಾರಾಯಣಗೌಡ, ಎ. ನರಸಿಂಹಯ್ಯ, ರಾಮೇಶ್ವರ ಪಾಪಣ್ಣ ಇದ್ದರು.