ಬೆಂಗಳೂರು: ನೆರೆ ಸಂತ್ರಸ್ತರು ಮತ್ತು ಮನೆ ಕಳೆದುಕೊಂಡವರಿಗೆ ಎಸ್‌ಡಿಆರ್‌ಎಫ್ ನಿಧಿ ಯಿಂದ 418.72 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿ ಮಂಗಳವಾರ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಮಳೆ ಮತ್ತು ನೆರೆ ಹಾವಳಿಯ ಕುರಿತು ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿ ತ್ವರಿತ ಪರಿಹಾರ ಕ್ರಮಕ್ಕೆ ಸೂಚಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಪ್ರಧಾನಿ ಮೋದಿ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ ಬಳಿಕ ಸಿಎಂ ಬೊಮ್ಮಾಯಿ ಭಾರೀ ಮಳೆಯಿಂದ ಜಲಾವೃತಗೊಂಡ ಬೆಂಗ ಳೂರಿನ ಯಲಹಂಕ ಸುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮುಂದಿನ ದಿನಗಳಲ್ಲಿ ಈ ರೀತಿಯ ದಿಢೀರ್ ನೆರೆ ತಪ್ಪಿಸಲು “ಮಾಸ್ಟರ್ ಪ್ಲ್ರಾನ್’ ರೂಪಿಸುವುದಾಗಿಯೂ ಘೋಷಿಸಿದರು.
ಇದನ್ನೂ ಓದಿ:ಗಾಲ್ವನ್ ಹುತಾತ್ಮರಿಗೆ ಶೌರ್ಯ ಗೌರವ ಪ್ರದಾನ
ಜತೆಗೆ ಪರಿಹಾರ ಮಾರ್ಗಸೂಚಿ ಪ್ರಕಟಿಸಿದ್ದು, ಜುಲೈಯಿಂದ ನವೆಂಬರ್‌ವರೆಗೆ ಸುರಿದ ಮಳೆಯಿಂದ ಸಂಕಷ್ಟಕ್ಕೆ ಒಳಗಾದ ರಾಜ್ಯದ ಎಲ್ಲ ಜಿಲ್ಲೆಗಳ ಕುಟುಂಬಗಳಿಗೂ ಪರಿಹಾರ ವಿತರಿಸಲು ಸೂಚಿಸಿದರು. ಪ್ರಧಾನಿ ಮೋದಿ ಮಳೆಯಿಂದಾದ ನಷ್ಟದ ವಿವರ ಪಡೆದು, ಅಲ್ಪಾವಧಿ ಮತ್ತು ದೀರ್ಘಾವಧಿ ಪರಿಹಾರ ಕ್ರಮಗಳಿಗೆ ಸೂಚನೆ ನೀಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.