ಕಾರವಾರ: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಪ್ರಾಥಮಿಕ ವರದಿ ಪ್ರಕಾರ ಅಂದಾಜು 418.26 ಕೋಟಿ ರೂ. ಹಾನಿಯಾಗಿದ್ದು, ಪರಿಹಾರ ಕಾರ್ಯವನ್ನು ಅತೀ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಷ್ ಮೌದ್ಗಿಲ್ ತಿಳಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನೆರೆ ಹಾವಳಿಯಿಂದಾಗಿ ಇದುವರೆಗೆ 3257 ಮನೆಗಳು ಬಿದ್ದ ಬಗ್ಗೆ ಮಾಹಿತಿ ದೊರೆತಿದೆ. ಇವುಗಳ ಮಾಲಿಕರಿಗೆ ಪರಿಹಾರ ವಿತರಿಸಲಾಗುತ್ತಿದೆ. ಅಲ್ಲದೇ ಮನೆ ಹಾನಿಯಾದ ಸಂತ್ರಸ್ತ ಕುಟುಂಬಳಿಗೆ 3800 ರೂ. ಪರಿಹಾರ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದೂ ಅವರು ಹೇಳಿದರು.
ಕೃಷಿ ಇಲಾಖೆಯಲ್ಲಿ 5599 ಲಕ್ಷ, ತೋಟಗಾರಿಕೆಯಲ್ಲಿ 5089 ಲಕ್ಷ, ಪಂಚಾಯತ್ ರಾಜ್ಯ ಇಲಾಖೆಯಲ್ಲಿ 7493 ಲಕ್ಷ, ಲೋಕೋಪಯೋಗಿ ಇಲಾಖೆಯಲ್ಲಿ 13400.25 ಲಕ್ಷ ರೂ., ಬಂದರು ಇಲಾಖೆಯಲ್ಲಿ 5800 ಲಕ್ಷ ರೂ., ಸಣ್ಣ ನೀರಾವರಿಯಲ್ಲಿ 1158 ಲಕ್ಷ ರೂ, ಹೆಸ್ಕಾಂ 479 ಲಕ್ಷ ರೂ., ಶಿಕ್ಷಣ ಇಲಾಖೆಯಲ್ಲಿ 538 ಲಕ್ಷ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ 307 ಲಕ್ಷ, ಮೀನುಗಾರಿಕಾ ಇಲಾಖೆಯಲ್ಲಿ 403.50 ಲಕ್ಷ ಹೀಗೆ ವಿವಿಧ ಇಲಾಖೆಗಳ ಹಾನಿಯ ಮೊತ್ತ 41825.77 ಲಕ್ಷ ರೂ. ಎಂದು ವಿವರಿಸಿದರು.
ಜಿಲ್ಲಾಧಿಕಾರಿ ಡಾ| ಹರೀಶಕುಮಾರ್ ಕೆ. ಮಾತನಾಡಿ ಮುಂದಿನ 48 ಗಂಟೆಗಳಲ್ಲಿ ವಿದ್ಯುತ್, ರಸ್ತೆ, ದೂರವಾಣಿ ನೆಟ್ವರ್ಕ ಹೀಗೆ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ. ಚಿಗಳ್ಳಿ ಡ್ಯಾಮ್ ಬಿರುಕು ಬಿಟ್ಟಿದ್ದರಿಂದಾಗಿ ಹೆಚ್ಚು ಕೃಷಿ ಭೂಮಿ ಹಾನಿಗೊಳಗಾಗಿದೆ. ರಸ್ತೆ ಸಂಪರ್ಕಕ್ಕೆ ಆದ್ಯತೆ ಕೊಟ್ಟು ಸರಿಪಡಿಸಿಕೊಂಡು ಆ.16ರ ನಂತರ ಬೆಳೆ ಸಮೀಕ್ಷೆ ಮಾಡಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ಸ್ವಚ್ಛತೆ, ಆರೋಗ್ಯ, ಕುಡಿಯುವ ನೀರಿನ ಕಡೆ ಹೆಚ್ಚು ಗಮನಹರಿಸಲಾಗುವುದು ಎಂದರು.
ಜಿಪಂ ಸಿಇಒ ಎಂ ರೋಷನ್ ಮಾತನಾಡಿ 14ನೇ ಹಣಕಾಸು ಯೋಜನೆಯಡಿ ಇರುವ ಹಣವನ್ನು, ಗ್ರಾಪಂ ಮಟ್ಟದ ರಸ್ತೆ ಅಭಿವೃದ್ಧಿ, ಚರಂಡಿ ವ್ಯವಸ್ಥೆ ಹೀಗೆ ಮುಂತಾದ ಕಾರ್ಯಗಳಿಗೆ ವಿನಿಯೋಗಿಸಲಾಗುವುದು. ಈ ಕುರಿತಾಗಿ ಗ್ರಾಪಂಗಳಲ್ಲಿ ತುರ್ತು ಸಭೆ ಕೈಗೊಳ್ಳುವಂತೆ ಸೂಚಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಅನಾರೋಗ್ಯದಿಂದ ಬಳಲುತ್ತಿರುವ ನೆರೆಪೀಡಿತ 29,216 ಜನರಿಗೆ ಔಷಧಗಳನ್ನು ಒದಗಿಸಿದ್ದೇವೆ. ಕುಡಿಯುವ ನೀರಿನ ಸೌಲಭ್ಯ ತಲೆದೋರುತ್ತಿದ್ದು, ಶೀಘ್ರ ಕ್ರಮ ಕೈಗೊಳ್ಳುತ್ತೇವೆ. ಮಹಿಳಾ ಮತ್ತು ಮಕ್ಕಳ ಇಲಾಖೆ ವತಿಯಿಂದ ಸಂತ್ರಸ್ತರ ಕ್ಷೇಮಾಭಿವೃದ್ಧಿ ಹಾಗೂ ಅವರಿಗೆ ಸಾಂತ್ವನ ಹೇಳಲು ಜಿಲ್ಲೆಯ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿಸಲಾಗಿದೆ. ಜಿಪಂ, ತಾಪಂ, ಗ್ರಾಪಂ ಸದಸ್ಯರ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.
ಎಸ್ಪಿ ವಿನಾಯಕ ಪಾಟೀಲ ಮಾತನಾಡಿ, ನೆರೆಹಾವಳಿಯಿಂದ ಸಿಲುಕಿಹಾಕಿಕೊಂಡ ಜನರನ್ನು ರಕ್ಷಿಸಲು ನೌಕಾನೆಲೆ ರಕ್ಷಣಾ ತಂಡ, ಕರಾವಳಿ ಭದ್ರತಾ ಪಡೆ, ಅಗ್ನಿಶಾಮಕ ತಂಡ, ಜಿಲ್ಲಾ ಕಡಲತೀರ ಪ್ರದೇಶಾಭಿವೃದ್ಧಿ ಸಮೀತಿ ದೋಣಿಗಳು ಹಾಗೂ ಮೀನುಗಾರರ ದೋಣಿಗಳು ಸಹಕರಿಸಿವೆ. ಯಾರಿಗೂ ಜೀವ ಹಾನಿ ಆಗಬಾರದೆನ್ನುವುದು ನಮ್ಮ ಗುರಿಯಾಗಿತ್ತು. ಅದರಂತೆ ಸಾಧ್ಯವಾದಷ್ಟು ಮಟ್ಟಿಗೆ ಯಶಸ್ಸು ಕೂಡಾ ಆಗಿದೆ. ಮುಳಗಡೆಯಾದ 113 ಗ್ರಾಮಗಳ 6200 ಜನರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಲಾಗಿರುತ್ತದೆ ಎಂದರು.