ನವದೆಹಲಿ: ಮತ್ತೊಂದು ಐಪಿಎಲ್‌ಗೆ ಭರದ ಸಿದ್ಧತೆ ಆರಂಭಗೊಂಡಿದೆ. ಡಿ.23ರಂದು ಕೊಚ್ಚಿಯಲ್ಲಿ ಸಣ್ಣ ಹರಾಜು ನಡೆಯಲಿದ್ದು, 87 ಆಟಗಾರರ ಆಯ್ಕೆಗಾಗಿ 405 ಮಂದಿಯ ಹರಾಜು ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ಇಂಗ್ಲೆಂಡ್‌ನ ತಾರಾ ಆಲ್‌ರೌಂಡರ್ ಬೆನ್ ಸ್ಟೋಕ್ಸ್, ಆಸ್ಟ್ರೇಲಿಯದ ಕ್ಯಾಮೆರಾನ್ ಗ್ರೀನ್ ಈ ಯಾದಿಯಲ್ಲಿರುವ ಪ್ರಮುಖರು.
ಸ್ಟೋಕ್ಸ್ ಮತ್ತು ಗ್ರೀನ್ ಸರ್ವಾಧಿಕ 2 ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ. ಹರಾಜು ಪಟ್ಟಿಯಲ್ಲಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ ಮೂಲಬೆಲೆ ಒಂದು ಕೋಟಿ ರೂ. ಆಗಿದೆ. ಇವರಿಬ್ಬರೂ ರೂ. 15-17 ಕೋಟಿಯಷ್ಟು ಬೆಲೆಗೆ ಮಾರಾಟವಾಗುವ ನಿರೀಕ್ಷೆ ಇದೆ. ಹಾಗೆಯೇ ಇಂಗ್ಲೆಂಡ್‌ನ ಉದಯೋನ್ಮುಖ ಆಟಗಾರ ಹ್ಯಾರಿ ಬ್ರೂಕ್ ಮೂಲಬೆಲೆ 1.5 ಕೋ.ರೂ. ಆಗಿದೆ.
132 ವಿದೇಶಿಯರು: ಈ 405 ಕ್ರಿಕೆಟಿಗರಲ್ಲಿ 273 ಮಂದಿ ಭಾರತದವರು. 132 ಆಟಗಾರರು ವಿದೇಶೀಯರು. ಐಸಿಸಿ ಅಸೋಸಿಯೇಟ್ ರಾಷ್ಟ್ರಗಳ ನಾಲ್ವರಿದ್ದಾರೆ. ಅಗತ್ಯವಿರುವ 87 ಆಟಗಾರರಲ್ಲಿ 30 ಸ್ಥಾನ ವಿದೇಶಿಗರಿಗೆ ಮೀಸಲು. ಇವರಲ್ಲಿ ಅಂತಾರಾಷ್ಟ್ರೀಯ ಪಂದ್ಯವಾಡಿದ ಆಟಗಾರರ ಸಂಖ್ಯೆ 119. ಅಂತಾರಾಷ್ಟ್ರೀಯ ಪಂದ್ಯವಾಡದ (ಅನ್‌ಕ್ಯಾಪ್ಡ್) ಆಟಗಾರರು 282 ಎಂಬುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
ಫ್ರಾಂಚೈಸಿಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಅತೀ ಹೆಚ್ಚು 42.25 ಕೋ.ರೂ. ಮೊತ್ತವನ್ನು ಜೇಬಿನಲ್ಲಿರಿಸಿಕೊಂಡಿದೆ. ಅತೀ ಕಡಿಮೆ ಹಣವನ್ನು ಹೊಂದಿರುವ ಫ್ರಾಂಚೈಸಿ ಕೋಲ್ಕತ ನೈಟ್‌ರೈಡರ್ಸ್ (7.2 ಕೋ.ರೂ.).