ಚಿಕ್ಕಮಗಳೂರು: ಕೋವಿಡ್ ಎರಡನೇ ಅಲೆ ಆರ್ಭಟ ಕಾಫಿನಾಡಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಒಂದೇ ದಿನ 400ರ ಗಡಿದಾಟಿದ್ದು ಜಿಲ್ಲೆಯ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ. ಜಿಲ್ಲೆಯಲ್ಲಿ ಇದುವರೆಗೂ 100, 250ರ ಗಡಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಸೋಂಕಿತರ ಸಂಖ್ಯೆ ಸೋಮವಾರ ಒಂದೇ ದಿನ 403 ಸೋಂಕಿತರು ಪತ್ತೆಯಾಗಿದ್ದು ಇಡೀ ಜಿಲ್ಲೆ ಜನತೆಯನ್ನು ಕಂಗೆಡುವಂತೆ ಮಾಡಿದೆ.
ಸೋಂಕಿನ ಆರ್ಭಟ ಯಾವ ಮಟ್ಟದಲ್ಲಿದೆ ಎಂದರೇ 2ವರ್ಷದ ಬಾಲಕ, 3ವರ್ಷದ ಬಾಲಕ, ಬಾಲಕಿ, 7ವರ್ಷದ ಬಾಲಕ, 9ವರ್ಷದ ಬಾಲಕ, ಬಾಲಕಿ, ಸೇರಿದಂತೆ ಮಧ್ಯ ವಯಸ್ಕರು, ವೃದ್ಧರು, ವೃದ್ದೆಯರು ಯಾರನ್ನು ಬಿಡದೆ ಕಾಡಿದೆ.
ಸೋಮವಾರ ಪತ್ತೆಯಾದ 403 ಮಂದಿ ಸೋಂಕಿತರಲ್ಲಿ 376 ಮಂದಿಯನ್ನು ಹೋಮ್ ಐಸೋಲೇಶನ್ ಮಾಡಲಾಗಿದೆ. 17ಜನರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೇ, 10 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಒಂದು ಕಡೆ ಸೋಂಕಿತರ ಸಂಖ್ಯೆ ಬಾರೀ ಪ್ರಮಾಣದ ಏರಿಕೆಯಿಂದ ಜನರು ಭಯ ಭೀತರಾಗಿದ್ದಾರೆ. ಇದರ ಬೆನ್ನಲ್ಲೆ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಸೋಮವಾರ ಒಂದೇ ದಿನ ಸೋಂಕಿಗೆ ಒಳಗಾಗಿದ್ದ ಇಬ್ಬರು ತಮ್ಮ ಕೊನೆಯುಸಿರು ಎಳೆದಿದ್ದಾರೆ.
ಕಡೂರು ತಾಲ್ಲೂಕಿನ ವೆಂಕಟೇಶ್ವರ ನಗರದ 80ವರ್ಷದ ವೃದ್ಧ ಸೋಂಕಿನಿಂದ ಕೊನೆಯುಸಿರೆಳೆದರೇ, ಚಿಕ್ಕಮಗಳೂರು ನಗರದ 63ವರ್ಷದ ವ್ಯಕ್ತಿ ಸೋಂಕಿಗೆ ಬಲಿ ಯಾಗಿದ್ದಾರೆ. ಇಬ್ಬರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಚಿಕಿತ್ಸೆ ಫಲಕಾರಿ ಯಾಗದೇ ಸೋಂಕಿಗೆ ಬಲಿಯಾಗಿದ್ದಾರೆ. ಮೃತರ ಅಂತ್ಯ ಸಂಸ್ಕಾರವನ್ನು ಕೋವಿಡ್ ನಿಮಯದಂತೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.
ಈಲ್ಲೆಯಲ್ಲಿ 16,714 ಮಂದಿ ಇದುವೆರೆಗೂ ಸೋಂಕಿಗೆ ತುತ್ತಾಗಿದ್ದು, 14,660ಮಂದಿ ಗುಣಮುಖರಾಗಿದ್ದಾರೆ. 1,721 ಮಂದಿ ಸೋಂಕಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, 186 ಮಂದಿ ಸೋಮವಾರ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದುವರೆಗೂ 147 ಮಂದಿಯ ಜೀವವನ್ನು ಸೋಂಕು ಬಲಿಪಡೆದುಕೊಂಡಿದೆ.