ಹಳೆಯಂಗಡಿ: ಸಸಿಹಿತ್ಲುವಿನಿಂದ ತಲಪಾಡಿಯವರೆಗೆ ಮತದಾರರ ಮತದಾನದ ಜಾಗೃತಿಗೆ ಎ. 7ರಂದು ಸಂಜೆ 4ರಿಂದ 6ರ ವರೆಗೆ ನಿರ್ಮಿಸಲಿರುವ ಮಾನವ ಸರಪಳಿಗಾಗಿ 40 ಸಾವಿರ ಮಂದಿ ಸೇರ್ಪಡೆಗೊಳಿಸುವ ಪ್ರಯತ್ನ ನಡೆದಿದೆ ಎಂದು ಮಂಗಳೂರು ತಾ. ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಘು ಎ.ಇ. ಹೇಳಿದರು.
ಹಳೆಯಂಗಡಿಯ ಜಾರಂದಾಯ ದೈವಸ್ಥಾನದ ಸಭಾಂಗಣದಲ್ಲಿ ನಡೆದ ಜಿಲ್ಲಾ ಸ್ವೀಪ್ ಘಟಕದ ವಿವಿಧ ಕಾರ್ಯಕ್ರಮಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಬೃಹತ್ ಮಾನವ ಸರಪಳಿಯನ್ನು ತಲಾ ಒಂದು ಕಿ. ಮೀ. ಒಂದು ಸಾವಿರ ಮಂದಿಯ ಸೇರ್ಪಡೆಯೊಂದಿಗೆ ನಿರ್ಮಿಸುವ ಯೋಚನೆಯಾಗಿದೆ. ಇದರಲ್ಲಿ ಸರಕಾರಿ ಅಧಿಕಾರಿಗಳ ಸಹಿತ ವಿವಿಧ ಇಲಾಖೆಯ ಸಿಬಂದಿಗಳು, ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜತೆಗೆ ಮುಕ್ತವಾಗಿ ನಾಗರಿಕರು ಭಾಗವಹಿಸಲು ಸ್ವಯಂ ಪ್ರೇರೇಪಿಸುವ ಜವಾಬ್ದಾರಿ ಇದೆ ಎಂದರು.
ಹಳೆಯಂಗಡಿಯ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ಶ್ರೀ ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್, ಹಳೆಯಂಗಡಿ ಯುವತಿ ಮತ್ತು ಮಹಿಳಾ ಮಂಡಳಿ, ಲಯನ್ಸ್ ಮತ್ತು ಲಿಯೋ ಕ್ಲಬ್, ತೋಕೂರಿನ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್, ತೋಕೂರು ಯುವಕ ಮಂಡಲ ಮತ್ತು ಮಹಿಳಾ ಮಂಡಲ, ತೋಕೂರು ಶ್ರೀ ಗಜಾನನ ನ್ಪೋರ್ಟ್ಸ್ ಕ್ಲಬ್, ಪಕ್ಷಿಕೆರೆಯ ಶ್ರೀ ವಿನಾಯಕ ಮಿತ್ರ ಮಂಡಳಿ, ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ವಿವಿಧ ಶಾಲೆಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಪಡುಪಣಂಬೂರು ಗ್ರಾ.ಪಂ.ನ ಪಿಡಿ ಒ ಅನಿತಾ ಕ್ಯಾಥರಿನ್ ಸ್ವಾಗತಿಸಿ, ನಿರೂಪಿಸಿದರು. ಪಂಚಾಯತ್ ಕಾರ್ಯದರ್ಶಿ ಶ್ರೀಶೈಲಾ ವಂದಿಸಿದರು.
ಸಹಕಾರ ಅಗತ್ಯ
ಸಭೆಯಲ್ಲಿ ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್ ಸಲಹೆಗಳನ್ನು ನೀಡಿ, ಎಲ್ಲ ಜಾತಿ, ಮತಗಳ ವಿವಿಧ ಸೇವಾ ಸಂಘ ಸಂಸ್ಥೆಗಳು ಚುನಾವಣೆಯಲ್ಲಿ ಮತದಾರರು ಭಾಗವಹಿಸಲು ಜಿಲ್ಲಾಡಳಿತ ನಡೆಸುವ ಕಾರ್ಯಕ್ರಮಕ್ಕೆ ಮುಕ್ತವಾಗಿ ಸಹಕಾರ ನೀಡಬೇಕು ಎಂದರು.