Advertisement
ಕೋವಿಡ್ -19 ಸೋಂಕು ತಡೆಗೆ ಸರಕಾರ ದಿಟ್ಟ ಕ್ರಮಗಳನ್ನು ಕೈಗೊಂಡಿರುವ ಬೆನ್ನಲ್ಲೇ ರಾಜ್ಯ ವ್ಯಾಪಿ ವ್ಯಾಪಾರ, ವಹಿವಾಟಿನಲ್ಲೂ ಏರುಪೇರುಗಳಾಗುತ್ತಿದೆ. ನಿರ್ಬಂಧವಿರುವ ಆರ್ಥಿಕ ಚಟುವಟಿಕೆಗಳ ಜತೆಗೆ ನಿರ್ಬಂಧವಿಲ್ಲದ ಆರ್ಥಿಕ ಚಟುವಟಿಕೆಗಳ ವಹಿವಾಟು ಕೂಡ ಕುಗ್ಗಿರುವುದರಿಂದ ರಾಜ್ಯ ಸರಕಾರದ ಬೊಕ್ಕಸಕ್ಕೆ ಬರಬೇಕಾದ ಆದಾಯದಲ್ಲೂ ಇಳಿಕೆಯಾಗಲಾರಂಭಿಸಿದೆ.
ರಾಜ್ಯ ಸರಕಾರ ಆಯ್ದ ಆರ್ಥಿಕ ಚಟುವಟಿಕೆಗಳನ್ನು ವಾರದ ಮಟ್ಟಿಗೆ ಸ್ಥಗಿತಗೊಳಿಸಿದರೆ ಸುಮಾರು 20,000 ಕೋಟಿ ರೂ.ನಷ್ಟು ವ್ಯಾಪಾರ- ವಹಿವಾಟು ಕುಸಿತವಾಗಲಿದೆ ಎಂದು ಅಂದಾಜಿಸಲಾಗಿತ್ತು. ಈಗ ಮಾ. 31ರ ವರೆಗೆ ನಿರ್ಬಂಧ ವಿಸ್ತರಿಸಿರುವುದರಿಂದ ಕುಸಿತ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ. ಆದರೆ ನಿಖರವಾಗಿ ಇಂತಿಷ್ಟು ನಷ್ಟ ಉಂಟಾಗಿದೆ ಎಂದು ಹೇಳಲು ಸಾಧ್ಯವಾಗದು ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ. ರಾಜ್ಯದಲ್ಲಿ ಸಾಮಾನ್ಯ ಸಂದರ್ಭದಲ್ಲಿ ವಾಣಿಜ್ಯ, ಸಾರಿಗೆ, ಅಬಕಾರಿ ತೆರಿಗೆ ಹಾಗೂ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಆದಾಯದಡಿ ಮಾಸಿಕ ಸರಾಸರಿ 8,000 ಕೋಟಿ ರೂ.ನಿಂದ 9,000 ಕೋಟಿ ರೂ. ಸಂಗ್ರಹವಾಗುತ್ತದೆ ಎಂಬ ಅಂದಾಜು ಇದೆ. ಸದ್ಯ ರಾಜ್ಯದಲ್ಲಿ ಸುಮಾರು 15 ದಿನಗಳ ಕಾಲ ಆಯ್ದ ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಅರ್ಧದಷ್ಟು ತೆರಿಗೆ ಆದಾಯ ಕೈತಪ್ಪುವ ಸಾಧ್ಯತೆ ಇದೆ. ಸರಿಸುಮಾರು 4,000 ಕೋಟಿ ರೂ. ತೆರಿಗೆ ಆದಾಯ ಖೋತಾ ಆಗಬಹುದು ಎಂದು ಆರ್ಥಿಕ ತಜ್ಞರು ಹೇಳುತ್ತಾರೆ.
Related Articles
ಸರಕಾರ ಆಯ್ದ ಆರ್ಥಿಕ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ ಆರ್ಥಿಕ ವಹಿವಾಟಿನ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಬಹುದು. ಹಾಗೆಂದು ತೆರಿಗೆ ಆದಾಯ ಕೈತಪ್ಪುವ ಪ್ರಮಾಣವನ್ನು ಅಂದಾಜಿಸಲಾಗದು. ಮಾಸಾಂತ್ಯ ಕಳೆದ ಬಳಿಕ ತೆರಿಗೆ ಆದಾಯ ಪ್ರಮಾಣ ಆಧರಿಸಿನಷ್ಟದ ಅಂದಾಜು ಮಾಡಲಾಗುವುದು. ಸೋಂಕು ನಿಯಂತ್ರಣಕ್ಕೆ ಅಗತ್ಯವಿರುವ ಹಣ ಭರಿಸಲು ಆರ್ಥಿಕ ಇಲಾಖೆಯಿಂದ ಎಲ್ಲ ರೀತಿಯ ಅನುಮತಿ ನೀಡಲಾಗಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಔಷಧಗಳ ಖರೀದಿಗೆ 4ಜಿ ವಿನಾಯಿತಿ ನೀಡಿ ಟೆಂಡರ್ ಕರೆಯದೆ ಖರೀದಿಸಲು ಅವಕಾಶ ನೀಡಲಾಗಿದೆ ಎಂದು ಆರ್ಥಿಕ ಇಲಾಖೆ ಉನ್ನತ ಮೂಲಗಳು ಹೇಳಿವೆ.
Advertisement
ಗುರಿ ತಲುಪಿದ ಅಬಕಾರಿ ತೆರಿಗೆ!ಅಬಕಾರಿ ತೆರಿಗೆ ಮೂಲದಿಂದ ಪ್ರಸಕ್ತ ವರ್ಷದಲ್ಲಿ 20,950 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿತ್ತು. ಆರ್ಥಿಕ ವರ್ಷ ಪೂರ್ಣಗೊಳ್ಳಲು 15 ದಿನ ಬಾಕಿ ಇರುವಂತೆಯೇ ಕಳೆದ ಮಾ. 16ರಂದು ನಿಗದಿತ ಗುರಿಯಷ್ಟು ಆದಾಯ ಸಂಗ್ರಹಿಸುವಲ್ಲಿ ಇಲಾಖೆ ಯಶಸ್ವಿಯಾಗಿದೆ. ಮಾ. 18ರ ವರೆಗೆ 21,113 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಮಾ. 31ರೊಳಗೆ ನಿಗದಿತ ಗುರಿಗಿಂತ 500 ಕೋಟಿ ರೂ. ಹೆಚ್ಚುವರಿ ಆದಾಯ ಸಂಗ್ರಹ ನಿರೀಕ್ಷೆಯಲ್ಲಿ ಅಬಕಾರಿ ಇಲಾಖೆ ಇದೆ. ಕೆಮ್ಮು, ಜ್ವರ, ನೆಗಡಿ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷಾ ಕೊಠಡಿ
ಬೆಂಗಳೂರು: ಎಸೆಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಲ್ಲಿ ಜ್ವರ, ಕೆಮ್ಮು, ನೆಗಡಿ ಕಂಡುಬಂದಲ್ಲಿ ಅಂಥ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ, ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ನಿರ್ದೇಶ ನೀಡಲಾಗಿದೆ. ಕೋವಿಡ್-19 ವ್ಯಾಪಿಸಿರುವ ಮತ್ತು ಸೂಕ್ಷ್ಮ ಪ್ರದೇಶದ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲಿನ ಕೊಠಡಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಕೊಠಡಿಯಲ್ಲಿ 15ರಿಂದ 20 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ವ್ಯವಸ್ಥೆ ಮಾಡಬೇಕು. ಆದಷ್ಟು ವಿದ್ಯಾರ್ಥಿಗಳು ಅಂತರ ಕಾಯ್ದುಕೊಳ್ಳಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದೆ. ಪರೀಕ್ಷೆಗೆ ಹಾಜರಾಗಲು ಬರುವ ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಕಾರ್ಯಕ್ಕೆ ಹಾಜರಾಗುವ ಎಲ್ಲ ಹಂತದ ಅಧಿಕಾರಿ, ಶಿಕ್ಷಕರು, ಸಿಬಂದಿ ವರ್ಗ ಸ್ಯಾನಿಟೈಸರ್ ಮೂಲಕ ಕೈಗಳನ್ನು ಸ್ವತ್ಛಗೊಳಿಸಿಕೊಂಡು ಪರೀಕ್ಷಾ ಕೊಠಡಿಯೊಳಗೆ ತೆರಳುವಂತೆ ವ್ಯವಸ್ಥೆ ಮಾಡಬೇಕು ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ಸೂಚಿಸಿದೆ. - ಎಂ. ಕೀರ್ತಿಪ್ರಸಾದ್