Advertisement

400 ಹೆರಿಗೆ ಗುರಿ: ತಾಯಿ, ಮಕ್ಕಳ ಆಸ್ಪತ್ರೆಗೆ ಡಿಸಿ ಸೂಚನೆ

09:04 AM Jul 25, 2019 | sudhir |

ಉಡುಪಿ: ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಆಗಮಿಸುವ ಒಳರೋಗಿ/ಹೊರ ರೋಗಿಗಳ ಸಂಖ್ಯೆ ಹೆಚ್ಚಾದಾಗ ವೈದ್ಯರು ಹಾಗೂ ಸಿಬಂದಿ ಕೊರತೆಯ ಕಾರಣದಿಂದ ಚಿಕಿತ್ಸೆ ನಿರಾಕರಿಸಬಾರದು. ಅಗತ್ಯವಿರುವ ವೈದ್ಯರ ನೇಮಕ ಮಾಡಿಕೊಳ್ಳುವ ಜತೆಗೆ ತಿಂಗಳಿಗೆ ಕನಿಷ್ಠ 400 ಹೆರಿಗೆ ಗುರಿ ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದರು.

Advertisement

ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೂಸಮ್ಮಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ವಹಣೆಯ ಕುರಿತ ಉಸ್ತುವಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅವಧಿಪೂರ್ಣ ಹೆರಿಗೆ ಪ್ರಕರಣ ಬಂದಾಗ ಯಾವುದೇ ದಾಖಲೆಗಳು ಇಲ್ಲದಿದ್ದರೂ ಸಹ ಒಳರೋಗಿಯಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಬೇಕು. ಚಿಕಿತ್ಸೆಯ ಅನಂತರದಲ್ಲಿ ದಾಖಲೆಗಳನ್ನು ಪಡೆದುಕೊಳ್ಳುವಂತೆ ಹಾಗೂ ಎಬಿಆರ್‌ಕೆ ಅಡಿಯಲ್ಲಿ ಜಿಲ್ಲಾ ಸರ್ಜನ್‌ ಮುಖಾಂತರ ರೆಫ‌ರ್‌ ಮಾಡುವಂತೆ ಜಿಲ್ಲಾಧಿಕಾರಿಗಳು ವ್ಯವಸ್ಥಾಪಕರಿಗೆ ಸೂಚಿಸಿದರು.

ಸುಸಜ್ಜಿತ ಮಕ್ಕಳ ವಿಭಾಗ
ಜಿಲ್ಲಾಧಿಕಾರಿ ಎನ್‌ಐಸಿಯು ವಿಭಾಗದ ಕಾರ್ಯ ನಿರ್ವಹಣೆ ಕುರಿತು ಚರ್ಚಿಸಿದಾಗ, ಪ್ರಸ್ತುತ ಈ ವಿಭಾಗದಲ್ಲಿ 11 ಹಾಸಿಗೆಗಳು 3 ವೆಂಟಿಲೇಟರ್‌ಗಳು ಇವೆ, ಈ ವಿಭಾಗದ ಕಾರ್ಯನಿರ್ವಹಣೆಗೆ ಯಾವುದೇ ಸಮಸ್ಯೆಯಿಲ್ಲ ಎಂದು ಮಕ್ಕಳ ತಜ್ಞ ಡಾ| ಗುರುಪ್ರಸಾದ್‌ ಮಾಹಿತಿ ನೀಡಿದರು.

ಗರ್ಭಕೋಶ, ಲ್ಯಾಪ್ರೋಸ್ಕೋಪಿಕ್‌, ಪಿಪಿಐಯುಸಿಡಿ ಚಿಕಿತ್ಸೆಗೆ ಸಂಬಂಧಿಸಿದಂತೆ ಚರ್ಚಿಸಿದಾಗ ಆಸ್ಪತ್ರೆಯಿಂದ ಉದರದರ್ಶಕ ಚಿಕಿತ್ಸೆಗೆ ಅನುಕೂಲವಾಗುವಂತೆ ಲ್ಯಾಪ್ರೋಸ್ಕೋಪಿಕ್‌ ಯಂತ್ರವನ್ನು ಖರೀ ದಿಸಿದ್ದು ತಜ್ಞ ವೈದ್ಯರ ಮುಖಾಂತರ ಈಗಾಗಲೇ ಉದರದರ್ಶಕ ಶಿಬಿರಗಳನ್ನು ನಡೆಸುತ್ತಿರುವುದಾಗಿ ವ್ಯವಸ್ಥಾಪಕರು ತಿಳಿಸಿದರು. ಪಿಪಿಐಸಿಡಿ ಕಾರ್ಯಕ್ರಮದಡಿ ಹೆರಿಗೆ ಅನಂತರ ವಂಕಿ ಅಳವಡಿಸುವ ಕಾರ್ಯಕ್ರಮದ ಪ್ರಗತಿ ಕುಂಠಿತವಾ ಗಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಸ್ಪತ್ರೆ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

Advertisement

ಕುಂದಾಪುರ ಮತ್ತು ಕಾರ್ಕಳದ ಸಾರ್ವಜನಿಕ ಆಸ್ಪತ್ರೆಯಲ್ಲಿ ಈಗಾಗಲೇ ಎನ್‌ಆರ್‌ಸಿ ವಿಭಾಗ ಪ್ರಾರಂಭವಾಗಿದ್ದು ಉಡುಪಿ ತಾಲೂಕಿನಲ್ಲಿ ಈ ಸೇವೆಯನ್ನು ಪ್ರಾರಂಭಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಸ್ತಾವಿಸಿದಾಗ ಆಸ್ಪತ್ರೆಯ ವ್ಯವಸ್ಥಾಪಕರು ಸೆಪ್ಟಂಬರ್‌ನಿಂದ ಪ್ರಾರಂಭಿಸುವುದಾಗಿ ತಿಳಿಸಿದರು.

ಉಡುಪಿ ಜಿಲ್ಲೆಯ ಇತರ ಆಸ್ಪತ್ರೆಗಳಿಂದ ಗರ್ಭಿಣಿಯರನ್ನು ಮಾಹಿತಿ ನೀಡದೆ ನಮ್ಮ ಆಸ್ಪತ್ರೆಗೆ ಶಿಫಾರಸು ಮಾಡುತ್ತಿದ್ದು, ಇದರಿಂದ ಸಕಾಲದಲ್ಲಿ ಸೇವೆ ನೀಡಲು ಕಷ್ಟವಾಗುತ್ತಿದೆ ಎಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವ್ಯವಸ್ಥಾಪಕರು ತಿಳಿಸಿದರು. ಎಲ್ಲ ಸರಕಾರಿ ಆಸ್ಪತ್ರೆಗಳ ವೈದ್ಯರು ಮತ್ತು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಕರ್ತವ್ಯ ನಿರತ ವೈದ್ಯರನ್ನು ಒಳಗೊಂಡಂತೆ ಒಂದು ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಸಮಿತಿ ಸದಸ್ಯರಿಗೆ ಸೂಚಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ (ವೈದ್ಯಕೀಯ) ಡಾ| ಜಗದೀಶ್‌, ಮೈಸೂರು ವಿಭಾಗೀಯ ಜಂಟಿ ನಿರ್ದೇಶಕ ಡಾ| ರಾಮಚಂದ್ರ ಬಾಯರಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಎಂ.ಜಿ. ರಾಮ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಮಧುಸೂದನ್‌ ನಾಯಕ್‌ ಉಪಸ್ಥಿತರಿದ್ದರು.

ತಲೆಮರೆಸಿಕೊಳ್ಳುವ ಅಪ್ರಾಪ್ತ ವಯಸ್ಕರು!
ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ದಾಖಲಾತಿಗೆ ಬಂದಂತಹ ಕೆಲವರಲ್ಲಿ 18 ವರ್ಷದ ಒಳಗಿನ ಕೆಲವರು ಗುರುತಿನ ಚೀಟಿಯಿಲ್ಲದೆ ದಾಖಲಾಗಿ ಅನಂತರದಲ್ಲಿ ತಲೆಮರೆಸಿಕೊಳ್ಳುತ್ತಿದ್ದಾರೆ. ಇದರಿಂದ ಪ್ರಕರಣ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ವ್ಯವಸ್ಥಾಪಕರು ತಿಳಿಸಿದಾಗ ಇಂತಹ ಪ್ರಕರಣ
ದಾಖಲಾದಲ್ಲಿ ಆಸ್ಪತ್ರೆಯ ಸಿಸಿಟಿವಿ ದಾಖಲೆಯ ಪ್ರತಿಯೊಂದಿಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

24 ಗಂಟೆಯೂ ಸ್ಕ್ಯಾನಿಂಗ್‌ ಸೌಲಭ್ಯ
ದಿನದ 24 ಗಂಟೆಯೂ ಗರ್ಭಿಣಿಯರಿಗೆ ಸ್ಕ್ಯಾನಿಂಗ್‌ ಸೌಲಭ್ಯ ಒದಗಿಸುವಂತೆ ಆಸ್ಪತ್ರೆಯ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಜುಲೈಯಲ್ಲಿ ರೇಡಿಯಾಲಜಿಸ್ಟ್‌ಗಳ ನೇಮಕಾತಿ ಮೂಲಕ ಈ ಸೌಲಭ್ಯ ಒದಗಿಸುವುದಾಗಿ ವ್ಯವಸ್ಥಾಪಕರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next