Advertisement

ಗಗನಚುಂಬಿ ಕಟ್ಟಡಗಳಿಂದ 400 ಕೋಟಿ ರೂ. ವಂಚನೆ

12:09 PM Oct 31, 2017 | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಗಗನಚುಂಬಿ ಕಟ್ಟಡಗಳ ವಿಚಾರದಲ್ಲಿ ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪಾಲಿಕಗೆ  ಕೋಟ್ಯಂತರ ರೂ. ತೆರಿಗೆ ನಷ್ಟವಾಗಿರುವುದನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್‌ ಪತ್ತೆಹಚ್ಚಿದ್ದಾರೆ.

Advertisement

ಪಾಲಿಕೆಯ ಎಂಟೂ ವಲಯಗಳಲ್ಲಿನ ಗಗನಚುಂಬಿ ಕಟ್ಟಡಗಳಿಂದ ಪಾಲಿಕೆಗೆ ಸಂಗ್ರವಾಗುತ್ತಿರುವ ತೆರಿಗೆ ಕಡತಗಳನ್ನು ಪರಿಶೀಲನೆ ನಡೆಸಿದ ಅವರು, ಹಲವು ಕಂಪನಿಗಳು ಕಟ್ಟಡ ತೆರಿಗೆ ರೂಪದಲ್ಲಿ ಪಾಲಿಕೆಗೆ ಕೋಟ್ಯಂತರ ರೂ. ವಂಚಿಸುವುದನ್ನು ಬಯಲಿಗೆಳೆದಿದ್ದಾರೆ. ವಾರ್ಷಿಕ 200 ಕೋಟಿ ರೂ. ನಷ್ಟವಾಗುತ್ತಿದ್ದು, ದಂಡ ಹಾಗೂ ಬಡ್ಡಿ ಸೇರಿ ಒಟ್ಟು 400 ಕೋಟಿ ಕೋಟಿ ರೂ. ಪಾಲಿಕೆಗೆ ಸಂಗ್ರಹವಾಗಬೇಕಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಸೋಮವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “2014ರಿಂದ ಈವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 435 ಬೃಹತ್‌ ಗಗನಚುಂಬಿ ಕಟ್ಟಡಗಳಿಗೆ ಅನುಭೋಗ ಪ್ರಮಾಣ ಪತ್ರ ನೀಡಲಾಗಿದೆ. ಆದರೆ, ಅಧಿಕಾರಿಗಳ ಬೇಜವಾಬ್ದಾರಿಯ ಪರಿಣಾಮ ಬಹುತೇಕ ಬೃಹತ್‌ ಕಟ್ಟಡಗಳು ಪಾಲಿಕೆಗೆ ತೆರಿಗೆ ವಂಚಿಸುತ್ತಿವೆ ಎಂದು ಆರೋಪಿಸಿದರು.

ತೆರಿಗೆ ಬಾಕಿ: ಮಹದೇವಪುರ ವಲಯದ ಕುಂದಲಹಳ್ಳಿಯ ಶ್ಯಾಮರಾಜು ಆಂಡ್‌ ಕಂಪನಿಗೆ ಸೇರಿರುವ ಕಟ್ಟಡದ ವಾಸ್ತವ ವಿಸ್ತೀರ್ಣ ಹಾಗೂ ಸ್ವತ್ತು ತೆರಿಗೆ ವಿಧಿಸುವಲ್ಲಿ ಲೋಪಗಳಾಗಿವೆ. ಅವುಗಳನ್ನು ಪರಿಶೀಲಿಸಿದಾಗ 2008-09ರಿಂದ ಪಾಲಿಕೆಗೆ ಕಂಪನಿಯವರು 50.74 ಕೋಟಿ ರೂ. ತೆರಿಗೆಯೊಂದಿಗೆ ದಂಡ ಹಾಗೂ ಬಡ್ಡಿ ಪಾವತಿಸಬೇಕಿದೆ.

ಅದೇ ರೀತಿ ಬೆಳ್ಳಂದೂರು ಗ್ರಾಮದ ಬಳಿಯ ದಿವ್ಯಶ್ರೀ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆಯವರು ನಿಗದಿಗಿಂತ ಕಡಿಮೆ ತೆರಿಗೆ ಪಾವತಿಸುತ್ತಿದ್ದು, ಈವರೆಗೆ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಲು ಮುಂದಾಗಿಲ್ಲ. ಇದರಿಂದಾಗಿ 2010-11ರವರೆಗೆ 34.75 ಕೋಟಿಯೊಂದಿಗೆ ದಂಡ ಹಾಗೂ ಬಡ್ಡಿ ಪಾವತಿಸಬೇಕಿದೆ ಎಂದರು ಹೇಳಿದರು.

Advertisement

ಅದೇ ರೀತಿ ದೇವಸಂದ್ರ ಕೈಗಾರಿಕಾ ಪ್ರದೇಶದ ಸುಗಮ ವಾಣಿಜ್ಯ ಹೋರ್ಡಿಂಗ್‌ ಸಂಸ್ಥೆ 12.99 ಕೋಟಿ ರೂ., ಕಾಡುಬೀಸನಹಳ್ಳಿಯ ಹರಪಾರ್ವತಿ ರಿಲೇಷನ್ಸ್‌ ಪ್ರೈ. ಲಿ., 85.72 ಲಕ್ಷ ರೂ., ವೈಟ್‌ಫೀಲ್ಡ್‌ನ ಬ್ರಿಗೇಡ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ 62.44 ಲಕ್ಷ ರೂ. ಸೇರಿದಂತೆ ಹಲವಾರು ವಾಣಿಜ್ಯ ಕಟ್ಟಡಗಳು, ಟೆಕ್‌ಪಾರ್ಕ್‌ ಹಾಗೂ ಅಪಾರ್ಟ್‌ಮೆಂಟ್‌ಗಳಿಂದ ಪಾಲಿಕೆಗೆ ಕೋಟ್ಯಂತರ ತೆರಿಗೆ ಬರಬೇಕಿದೆ ಎಂದರು.

ತೆರಿಗೆ ಪಾವತಿಸಬೇಕಾದ ಸಂಸ್ಥೆಗಳು 
-ಶ್ಯಾಮರಾಜು ಅಂಡ್‌ ಕಂಪೆನಿ
-ದಿವ್ಯಶ್ರೀ ಇನ್‌ಫ್ರಾಸ್ಟ್ರಕ್ಚರ್‌ 
-ಎಸ್‌ಜೆಆರ್‌ ಎಂಟರ್‌ ಎಂಟರ್‌ಪ್ರೈಸಸ್‌ ಲಿ. 
-ಆದರ್ಶ ರಿಯಾಲಿಟಿ ಅಂಡ್‌ ಹೋಟೆಲ್ಸ್‌ ಪ್ರೈ. ಲಿ.

ಅಪಾರ್ಟ್‌ಮೆಂಟ್‌ಗಳ ವಿವರ
-ಕೆಂಗೇರಿಯ ಹೊಸಹಳ್ಳಿ ಶೋಭಾ ಡೆವಲಪರ್ ಲಿ.
-ಮಹದೇವಪುರದ ಡಿಎಸ್‌ಆರ್‌ ಇನ್‌ಫ್ರಾಸ್ಟ್ರಕ್ಚರ್‌
-ವರ್ತೂರಿನ ಎಸ್‌ಜೆಆರ್‌ ಪ್ರೈಮ್‌ ಕಾರ್ಪೊರೇಷನ್‌ ಪ್ರೈ.ಲಿ.
-ಕೈಕೊಂಡ್ರಹಳ್ಳಿಯ ಬ್ರಿàನ್‌ ಕಾರ್ಪೊರೇಷನ್‌
-ಜನ್ನಸಂದ್ರದ ನಿರ್ಮಾಣ ಗೃಹ ಪ್ರೈ. ಲಿ.
-ಉತ್ತರಹಳ್ಳಿಯ ಮಂತ್ರಿ ಡೆವಲಪರ್

ತನಿಖೆ ನಡೆಸುವಂತೆ ಪತ್ರ
ಬೊಮ್ಮನಹಳ್ಳಿ ಹಾಗೂ ಮಹದೇವಪುರ ವಲಯಗಳಲ್ಲಿ ಹೆಚ್ಚಿನ ಸಂಖ್ಯೆಯ ಗಗನಚುಂಬಿ ಕಟ್ಟಡಗಳಿದ್ದು, ಇದರಿಂದಾಗಿ ಪಾಲಿಕೆಗೆ ವಾರ್ಷಿಕ ಕೋಟ್ಯಂತರ ತೆರಿಗೆ ನಷ್ಟವಾಗುತ್ತಿದೆ. ಹೀಗಾಗಿ ಪಾಲಿಕೆಗೆ ಬರಬೇಕಾದ ತೆರಿಗೆ ಸಂಗ್ರಹದಲ್ಲಿ ಆಗಿರುವ ಲೋಪಗಳು ಹಾಗೂ ತೆರಿಗೆ ಸಂಗ್ರಹಿಸುವಲ್ಲಿ ನಿರ್ಲಕ್ಷ್ಯವಹಿಸಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಬಿಬಿಎಂಪಿ ಪುನರ್‌ ರಚನಾ ಸಮಿತಿಯ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ.
-ಎಂ.ಕೆ.ಗುಣಶೇಖರ್‌, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next