Advertisement

ಕೊಪ್ಪಳದಲ್ಲಿ 400ರ ಗಡಿ ದಾಟಿದ ಸೋಂಕಿತರು

02:33 PM Jul 17, 2020 | Suhan S |

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 400ರ ಗಡಿ ದಾಟಿದ್ದು, ಜಿಲ್ಲೆಯ ಜನರನ್ನು ದಿನದಿಂದ ದಿನಕ್ಕೆ ಆತಂಕಕ್ಕೆ ದೂಡುತ್ತಿದೆ. ಗುರುವಾರ 48 ಜನರಿಗೆ ಸೋಂಕು ದೃಢಪಟ್ಟಿದ್ದರೆ, 28 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 925 ಜನರ ವರದಿ ಬರುವುದು ಬಾಕಿಯಿದೆ.

Advertisement

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಜನ ಸಮೂಹ ಆತಂಕಕ್ಕೆ ಒಳಗಾಗುತ್ತಿದೆ. ಜಿಲ್ಲಾಡಳಿತ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಸೋಂಕಿತರ ಸಂಖ್ಯೆಯಲ್ಲಿ ಪ್ರತಿ ನಿತ್ಯ ಏರಿಕೆ ಕಾಣುತ್ತಿದೆ. ಇದು ಜನರ ನೆಮ್ಮದಿಯನ್ನೇ ಹಾಳು ಮಾಡುತ್ತಿದೆ. ಇನ್ನೂ ಜಿಲ್ಲೆಯಲ್ಲಿ ಬುಧವಾರದ ಅಂತ್ಯಕ್ಕೆ 368 ಜನರಿಗೆ ಸೋಂಕು ದೃಢಪಟ್ಟಿತ್ತು. ಗುರುವಾರ ಮತ್ತೆ 48 ಜನರಿಗೆ ಸೋಂಕು ತಗುಲುವ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 416ಕ್ಕೆ ಏರಿಕೆಯಾಗಿದೆ.

28 ಜನರ ಬಿಡುಗಡೆ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 416ಕ್ಕೆ ಏರಿಕೆಯಾಗಿದ್ದರೂ ಗುರುವಾರ 28 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೂ ಒಟ್ಟಾರೆ 210 ಜನರು ಸೋಂಕಿನಿಂದ ಗುಣಮುಖರಾಗಿಬಿಡುಗಡೆಯಾಗಿದ್ದಾರೆ. ಅಂದರೆ ಸೋಂಕಿತರ ಅರ್ಧದಷ್ಟು ಜನರು ಗುಣಮುಖರಾಗುತ್ತಿರುವುದು ನೆಮ್ಮದಿ ವಿಚಾರವಾಗಿದೆ. ಆದರೆ ಇನ್ನಷ್ಟು ವೇಗದಗತಿಯಲ್ಲಿ ಚಿಕಿತ್ಸೆ ನೀಡಬೇಕೆನ್ನುವ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

925 ವರದಿ ಬರೋದು ಬಾಕಿ :  ಜಿಲ್ಲಾಡಳಿತವು ಅನ್ಯ ಜಿಲ್ಲೆ, ರಾಜ್ಯ ಹಾಗೂ ಹೈ ರಿಸ್ಕ್ ಏರಿಯಾದಿಂದ ಆಗಮಿಸಿದ ಜನರ ಗಂಟಲು ದ್ರವ ಪಡೆದು ಪ್ರಯೋಗಾಲಯಕ್ಕೆ ರವಾನಿಸುತ್ತಿದೆ. ಈ ವರೆಗೂ 16615 ಜನರ ಪರೀಕ್ಷೆ ಮಾಡಿದ್ದು, 15690 ಜನರ ವರದಿ ನೆಗೆಟಿವ್‌ ಬಂದಿದೆ. ಇನ್ನೂ 925 ಜನರ ವರದಿ ಬರುವುದು ಬಾಕಿಯಿದೆ. ಜಿಲ್ಲೆಯಲ್ಲೇ ಕೋವಿಡ್ ಟೆಸ್ಟ್‌ ಸೆಂಟರ್‌ ಇರುವುದರಿಂದ ವೇಗಗತಿಯಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಇದಕ್ಕೆ ವೈದ್ಯಕೀಯ ಸಚಿವ ಡಾ| ಸುಧಾಕರ್‌ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next