Advertisement

Bengaluru: ಪ್ರವಾಹ ಪರಿಸ್ಥಿತಿ ತಿಳಿಯಲು ರಾಜಕಾಲುವೆಗಳ ಮೇಲೆ 400 ಕ್ಯಾಮೆರಾ

11:35 AM May 15, 2024 | Team Udayavani |

ಬೆಂಗಳೂರು: ಮಳೆಗಾಲದ ಪ್ರವಾಹ ನಿಭಾಯಿಸುವ ನಿಟ್ಟಿನಲ್ಲಿ ಬಿಬಿಎಂಪಿ ಎಲ್ಲ ರೀತಿಯಲ್ಲೂ ಸಜ್ಜಾಗಿದ್ದು ರಾಜಕಾಲುವೆಗಳಲ್ಲಿ 400ಕ್ಕೂ ಅಧಿಕ ಕ್ಯಾಮೆರಾ ಅಳವಡಿಕೆಗೆ ಮುಂದಾಗಿದೆ.

Advertisement

ಕಳೆದ ಕೆಲವು ದಿನಗಳ ಹಿಂದಷ್ಟೇ ಮೈಸೂರು ರಸ್ತೆಯ ಚರಂಡಿಯಲ್ಲಿ ಏಕಾಏಕಿ ನೀರು ಉಕ್ಕಿ ಹರಿಯಿತು. ಬಿಬಿಎಂಪಿಯ ಇಂಟಿಗ್ರೇಟೆಡ್‌ ಕಮಾಂಡ್‌ ಮತ್ತು ಕಂಟ್ರೋಲ್‌ ಸೆಂಟರ್‌ಗೆ ರಾಜಕಾಲುವೆಗಳಲ್ಲಿ ಅಳವಡಿಕೆ ಮಾಡಲಾಗಿರುವ ಕ್ಯಾಮೆರಾಗಳು ಲೈವ್‌ ಫೀಡ್‌ ಮೂಲಕ ಅಲರ್ಟ್‌ ನೀಡಿ, ನೀರು ಉಕ್ಕಿಹರಿಯುತ್ತಿರುವ ದೃಶ್ಯ ಸೆರೆಯಾಗಿತ್ತು. ತಕ್ಷಣಾ ಕಾರ್ಯ ಪ್ರವೃತ್ತವಾದ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ತ್ವರಿತ ಕ್ರಮ ಕೈಗೊಂಡು ಶೀಘ್ರ ಪ್ರವಾಹದಂತಹ ಪರಿಸ್ಥಿತಿ ಹತೋಟಿಗೆ ತಂದಿತು.

ಈ ಉಪಕ್ರಮ ಫ‌ಲ ಕೊಟ್ಟಿರುವ ಹಿನ್ನೆಲೆಯಲ್ಲಿ ತೃಪ್ತರಾಗಿರುವ ಬಿಬಿಎಂಪಿ ಈಗ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ನೆರವಿನೊಂದಿಗೆ 455ಕ್ಕೂ ಅಧಿಕ ಕ್ಯಾಮೆರಾ ಅಳವಡಿಕೆ ಮಾಡುವ ಗುರಿ ಹೊಂದಿದೆ.

ಪ್ರತ್ಯಕ್ಷ ದೃಶ್ಯವಳಿ ಸೆರೆ: ಪ್ರವಾಹ ಪರಿಸ್ಥಿತಿ ಎದುರಿಸಲು ಪಾಲಿಕೆ ಸಿದ್ಧವಾಗಿದ್ದು, ರಾಜಕಾಲುವೆಗಳ ನೀರಿನ ಒಳಹರಿವಿನ ಬಗ್ಗೆ ತಿಳಿದುಕೊಳ್ಳಲು 105 ಕ್ಯಾಮೆರಾ ಅಳವಡಿಸಲಾಗಿದೆ. ಈಗ ಮತ್ತೆ 455 ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಈ ಕ್ಯಾಮೆರಾ ಪ್ರತ್ಯಕ್ಷ ದೃಶ್ಯವಳಿ ಸೆರೆ ಹಿಡಿದು ಸಂಭವನೀಯ ಪ್ರವಾಹದ ಬಗ್ಗೆ ರಕ್ಷಣಾ ತಂಡಗಳಿಗೆ ಎಚ್ಚರಿಕೆ ನೀಡಲಿವೆ. ಇದರಿಂದಾಗಿ ಪ್ರವಾಹ ತಡೆ ಗಟ್ಟುವ ಸಂಬಂಧ ತಕ್ಷಣ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಬಣ್ಣದ ಆಧಾರದಲ್ಲಿ ನೀರಿನ ಮಟ್ಟ ಗುರುತು: ಪ್ರವಾಹ ನಿಭಾಯಿಸಲು ಮತ್ತು ಪ್ರತಿಕ್ರಿಯಿಸಲು ರಾಜಕಾಲುವೆಯ 124 ಕಡೆ ನೀರಿನ ಮಟ್ಟ ಅಳೆಯುವ ಸಂವೇದಕಗಳನ್ನು ಕೆ.ಎಸ್‌.ಎನ್‌.ಡಿ.ಎಂ.ಸಿ ವತಿಯಿಂದ ಅಳವಡಿಸಲಾಗಿದೆ ಪ್ರತಿಯೊಂದು ಸೆನ್ಸಾರ್‌ ಯಂತ್ರಕ್ಕೂ ಸೋಲಾರ್‌ ಅಳವಡಿಸಲಾಗಿದೆ. ಅದರಿಂದ ನಿತ್ಯ ಅಂತರ್ಜಾಲದ ಮೂಲಕ ಕೆಎಸ್‌ಎನ್‌ಡಿಎಂಸಿ ನಿಯಂತ್ರಣ ಕೊಠಡಿಗೆ ಮಾಹಿತಿ ದೊರೆಯಲಿದೆ. ಅಲ್ಲಿಂದ ಪಾಲಿಕೆಯ ಇಂಟಿಗ್ರೇಟೆಡ್‌ ಕಮಾಂಡಿಂಗ್‌ ಕಂಟ್ರೋಲ್‌ ಸೆಂಟರ್‌ ಮಾಹಿತಿ ರವಾನೆ ಆಗಲಿದೆ. ಸೆನ್ಸಾರ್‌ ಅಳವಡಿಸಿರುವ ಕಡೆ ರಾಜಕಾಲುವೆಯಲ್ಲಿ ಹರಿಯುವ ನೀರಿನ ಮಟ್ಟವನ್ನು ಬಣ್ಣದ ಆಧಾರದಲ್ಲಿ ತಿಳಿಯಬಹುದಾಗಿದೆ. ಅದರಂತೆ ಹಸಿರು, ನೀಲಿ, ಕೆಂಪು ಹಾಗೂ ಕಪ್ಪು ಬಣ್ಣದಲ್ಲಿ ಗುರುತಿಸಲಾಗುತ್ತದೆ. ಹಸಿರು ಹಾಗೂ ನೀಲಿ ಬಣ್ಣವಿದ್ದರೆ ಯಾವುದೇ ಅಪಾಯವಿರುವುದಿಲ್ಲ. ಕೆಂಪು ಬಣ್ಣವಿದ್ದರೆ ಅಪಾಯ ಎಂದರ್ಥ ಹಾಗೂ ಕಪ್ಪು ಬಣ್ಣಕ್ಕೆ ತಿರುಗಿದರೆ ಪ್ರವಾಹ ಉಂಟಾಗಲಿದೆ ಎಂಬ ಮಾಹಿತಿ ತಿಳಿಯಲಿದೆ.

Advertisement

ಆ ಮಾಹಿತಿಗನುಗುಣವಾಗಿ ಪ್ರವಾಹ ಉಂಟಾಗುವ ಸ್ಥಳದ ಸುತ್ತಮುತ್ತಲಿನ ನಿವಾಸಿಗಳನ್ನು ಬೇರೆಡೆ ತೆರಳುವಂತೆ ಸೂಚನೆ ನೀಡಬಹುದು. ಇದರಿಂದ ಪ್ರವಾಹದಿಂದಾಗುವ ಅನಾಹುುತಗಳನ್ನು ತಪ್ಪಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕ್ಯಾಮೆರಾಗಳ ಮೇಲೆ 24×7 ಕಣ್ಗಾವಲು: ನಗರದಲ್ಲಿ ರಾಜಕಾಲುವೆಗಳಿಗೆ ಈಗಾಗಲೇ ಅಳವಡಿಸಿರುವ ಕ್ಯಾಮೆರಾಗಳ ದೃಶ್ಯಾವಳಿ ಗಳನ್ನು 3 ಪಾಳಿಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಕಣ್ಗಾವಲು ಇರಿಸಲಿದ್ದಾರೆ. 24 ಗಂಟೆ ಕಾಲ ಈ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next