Advertisement

ಲೀಟರ್‌ ಹಾಲಿಗೆ 40 ರೂ. ಕೊಡಿ

12:31 PM Aug 30, 2019 | Team Udayavani |

ಬಂಗಾರಪೇಟೆ: ಬರದಿಂದ ತತ್ತರಿಸಿರುವ ರೈತರ ಹಿತಕಾಯಲು ಪ್ರತಿ ಲೀಟರ್‌ ಹಾಲಿಗೆ 40 ರೂ. ನೀಡಬೇಕು. ಈ ಬಗ್ಗೆ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹೇಳಿದರು.

Advertisement

ತಾಲೂಕಿನ ಐತಾಂಡಹಳ್ಳಿ ಗ್ರಾಮದಲ್ಲಿ ನೂತನ ಬಿಎಂಎಸಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸದ್ಯಕ್ಕೆ ಹೈನೋದ್ಯಮವೇ ರೈತರಿಗೆ ಕಾಮಧೇನು ಆಗಿದೆ. 15 ವರ್ಷಗಳಿಂದ ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಪ್ರಸ್ತುತ ನೀಡುತ್ತಿರುವ ಹಾಲಿನ ಬೆಲೆ ಸಾಕಾಗುವುದಿಲ್ಲ ಎಂದರು.

ಅವಳಿ ಜಿಲ್ಲೆಗಳಲ್ಲಿ ಬರಗಾಲದಿಂದ ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದಿದೆ. ಕುಡಿಯುವ ನೀರಿಗೂ ತಾತ್ವರ ಉಂಟಾಗಿದೆ. ಕೃಷಿಯನ್ನೇ ಪ್ರಧಾನವಾಗಿ ನಂಬಿದ್ದ ರೈತರು ಈಗ ಹೈನೋದ್ಯಮದತ್ತ ವಾಲಿದ್ದು, ರೈತ ಕುಟುಂಬಗಳಿಗೆ ಸಹಕಾರಿಯಾಗಲು ಹಾಲಿನ ಬೆಲೆ 40 ರೂ.ಗೆ ಏರಿಕೆ ಮಾಡುವುದು ಅಗತ್ಯವಾಗಿದೆ ಎಂದರು.

ಫೀಡ್ಸ್‌ ಬೆಲೆ ಕಡಿಮೆ ಮಾಡಿ: ಪ್ರತಿ ಲೀಟರ್‌ ಹಾಲಿಗೆ 6 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಎರಡೂ ಜಿಲ್ಲೆಗಳ ರೈತರಿಗೆ ಇದು ವರದಾನವಾಗಿದೆ. ಈಗಿನ ಸರ್ಕಾರವೂ ಪ್ರೋತ್ಸಾಧನ ವನ್ನು ಮುಂದುವರಿಸಬೇಕಾಗಿದೆ. ಹಾಲಿ ಬೆಲೆಯನ್ನು ಹೆಚ್ಚಿಸಿ, ಕೋಚಿಮುಲ್ನಿಂದ ನೀಡುವ ಫೀಡ್ಸ್‌ ಆಹಾರ ಬೆಲೆ ಕಡಿಮೆ ಮಾಡಬೇಕೆಂದು ಮನವಿ ಮಾಡಿದರು.

42 ಬಿಎಂಸಿ ಕೇಂದ್ರ ಉದ್ಘಾಟನೆ: ಹಾಲು ಉತ್ಪಾದನೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೇ ಬಂಗಾರಪೇಟೆ ತಾಲೂಕು ಮಾದರಿ ಮಾಡಲು ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಶ್ರಮಿಸುತ್ತಿದ್ದಾರೆ. ಆರು ತಿಂಗಳಲ್ಲಿ 11 ಕೋಟಿ ರೂ. ವೆಚ್ಚದಲ್ಲಿ 42 ನೂತನ ಬಿಎಂಸಿ ಕೇಂದ್ರಗಳನ್ನು ಉದ್ಘಾಟನೆ ಮಾಡಲಾಗಿದೆ. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಿದೆ ಎಂದರು.

Advertisement

ಎರಡು ಮೂರು ತಿಂಗಳಲ್ಲಿ ಕೆ.ಸಿ. ವ್ಯಾಲಿ ನೀರು: ಜಿಲ್ಲೆಯಲ್ಲಿ ಈಗಾಗಲೇ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಎರಡು ಮೂರು ತಿಂಗಳಲ್ಲಿ ಕೆ.ಸಿ. ವ್ಯಾಲಿ ನೀರು ತಾಲೂಕಿಗೆ ಹರಿಯಲಿದೆ. ಕಸಬಾ ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ಈ ಭಾಗದ ಕೆರೆಗಳ ಡಿಪಿಆರ್‌ ಮಾಡಿಸಲಾಗುತ್ತಿದೆ. ತಾಲೂಕಿನ ಐತಾಂಡಹಳ್ಳಿ ಕೆರೆಗೂ ಕೆ.ಸಿ. ವ್ಯಾಲಿ ನೀರು ತುಂಬಿಸಲು ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದರು.

ಗುಣಮಟ್ಟದ ಹಾಲು ಪೂರೈಸಿ: ಕೋಚಿಮುಲ್ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಮಾತನಾಡಿ, ಕೋಚಿಮುಲ್ನಿಂದ ಪ್ರಸಿದ್ಧ ತಿರುಪತಿ ದೇಗುಲಕ್ಕೆ 40 ಸಾವಿರ ಟನ್‌ ನಂದಿನ ತುಪ್ಪವನ್ನು ಲಡ್ಡು ತಯಾರಿಸಲು ನೀಡಲಾಗುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಹಾಲನ್ನು ತಿರುಪತಿ ವೆಂಕಟರಮಣಸ್ವಾಮಿ ನೈವೇದ್ಯಕ್ಕೆ ಬಳಸಲಾಗುತ್ತಿದೆ. ಹೀಗಾಗಿ ರೈತರು ಗುಣಮಟ್ಟದ ಹಾಲು ಡೇರಿಗೆ ಹಾಕಬೇಕು. ತಾಲೂಕಿನಲ್ಲಿ ಎಲ್ಲಾ ಕಡೆ ಬಿಎಂಸಿ ಕೇಂದ್ರ ತೆರೆದು ಕ್ಯಾನ್‌ಲೆಸ್‌ ಹಾಲು ಸಂಗ್ರಹ ಮಾಡಲಾಗುವುದು ಎಂದರು.

ಐತಾಂಡಹಳ್ಳಿ ಹಾಲು ಡೇರಿ ಅಧ್ಯಕ್ಷ ಬಿ.ಎಂ.ಅಮರೇಶ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೋಚಿಮುಲ್ ಶಿಬಿರ ಕಚೇರಿ ಉಪವ್ಯವಸ್ಥಾಪಕ ಡಾ.ಕೆ.ವೆಂಕಟರಮಣ, ಬಿಎಂಸಿ ಘಟಕದ ಸಹಾಯಕ ವ್ಯವಸ್ಥಾಪಕ ಪಿ.ಮೋಹನ್‌ಬಾಬು, ವಿಸ್ತರಣಾಧಿಕಾರಿ ನಟರಾಜ್‌, ಬಿಎಂಸಿ ಹಿರಿಯ ತಾಂತ್ರಿಕ ಅಧಿಕಾರಿ ತಿಪ್ಪಾರೆಡ್ಡಿ, ಕೆ.ಜಿ.ರವೀಂದ್ರನಾಥ್‌, ಮಂಡಲ್ ಮಾಜಿ ಸದಸ್ಯ ಎಂ.ಕೃಷ್ಣಪ್ಪ, ಗ್ರಾಪಂ ಸದಸ್ಯ ಚಲಪತಿ, ಡೇರಿ ಮಾಜಿ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಡೇರಿ ನಿರ್ದೇಶಕರಾದ ಚಲಪತಿ, ತಿಪ್ಪಣ್ಣ, ಮುನಿಯಮ್ಮ, ನಾರಾಯಣಪ್ಪ, ಮಾವಹಳ್ಳಿ ಚೌಡೇಗೌಡ, ಪಿಡಿಒ ರಾಮಮೂರ್ತಿ, ಡೇರಿ ಕಾರ್ಯದರ್ಶಿ ಕೆ.ಕೆ.ಶಿವಕುಮಾರ್‌, ವಿ.ಪ್ರೇಮಕುಮಾರ್‌, ಚಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next