ಗುವಾಹಟಿ/ಐಜ್ವಾಲ್: ರೆಮಲ್ ಚಂಡಮಾರುತದ ಹಿನ್ನೆಲೆಯಲ್ಲಿ ಉಂಟಾದ ಹಠಾತ್ ಪ್ರವಾಹ, ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ಮಿಜೋರಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಕನಿಷ್ಠ 40 ಮಂದಿ ಮೃತಪಟ್ಟಿದ್ದು ಹಲವು ಮಂದಿ ನಾಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ನಿರಂತರ ಮಳೆ ಮತ್ತು ಭೂಕುಸಿತದಿಂದಾಗಿ ಈಶಾನ್ಯ ಭಾಗಗಳ ಕೆಲ ಪ್ರದೇಶಗಳು ಸಂಪರ್ಕ ಕಡಿತಗೊಂಡಂತಾಗಿದೆ. ಚಂಡಮಾರುತದ ಪರಿಣಾಮ ಬಾರಿ ಮಳೆಯಿಂದ ಪ್ರವಾಹ ನೀರು ರೈಲು ಹಳಿಗಳು ಮುಳುಗಿ ದಕ್ಷಿಣ ಅಸ್ಸಾಂ, ತ್ರಿಪುರಾ, ಮಣಿಪುರ ಮತ್ತು ಮಿಜೋರಾಂ ಕಡೆಗೆ ಹೋಗುವ ಎಕ್ಸ್‌ಪ್ರೆಸ್, ಪ್ಯಾಸೆಂಜರ್ ಮತ್ತು ಸರಕು ರೈಲುಗಳನ್ನು ರದ್ದುಗೊಳಿಸಲಾಗಿದೆ. ಗುರುವಾರ, ಅಸ್ಸಾಂ, ಮೇಘಾಲಯ ಮತ್ತು ಮಿಜೋರಾಂ ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 6ರ ಭಾಗ ಕುಸಿದಿದೆ.
ಅಸ್ಸಾಂ ಮತ್ತು ಮೇಘಾಲಯದ ಮೂಲಕ ಹರಿಯುವ ನದಿ ಅಪಾಯದ ಅಂಚಿನಲ್ಲಿ ಹರಿಯುತ್ತಿರುವುದರಿಂದ ಅಸ್ಸಾಂನಲ್ಲಿ ಪ್ರವಾಹಡಾ ಭೀತಿ ಉಂಟಾಗಿದ್ದು ಇದರಿಂದಾಗಿ ಒಂಬತ್ತು ಜಿಲ್ಲೆಗಳಲ್ಲಿ ಸಾವಿರಾರು ಜನರ ಮೇಲೆ ಪರಿಣಾಮ ಬೀರಿದೆ. ಪರಿಣಾಮ ಅಸ್ಸಾಂನಲ್ಲಿ 35,000 ಕ್ಕೂ ಹೆಚ್ಚು ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಮಣಿಪುರದಲ್ಲಿ ಪ್ರವಾಹದಿಂದ ಸಂತ್ರಸ್ತರಾದ ಸಾವಿರಾರು ಜನರ ನೆರವಿಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಮೂವರು ಸಾವನ್ನಪ್ಪಿದ್ದಾರೆ. ರಾಜಧಾನಿ ಇಂಫಾಲದ ಪ್ರದೇಶಗಳಿಗೆ ಪ್ರವಾಹ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಾರ್ವಜನಿಕ ರಜೆ ಘೋಷಿಸಲಾಗಿದೆ, ಮಿಜೋರಾಂನಲ್ಲಿ, ಮಂಗಳವಾರದ ಭೂಕುಸಿತದ ನಂತರ ನಾಪತ್ತೆಯಾದ ಹಲವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆದಿದ್ದು ಈ ವೇಳೆ 27 ಜನರು ಸಾವನ್ನಪ್ಪಿರುವ ಕುರಿತು ವರದಿಯಾಗಿದ್ದು ನಾಪತ್ತೆಯಾದವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.