ಬೆಂಗಳೂರು: ಇಂಗ್ಲೆಂಡ್‌ನಲ್ಲಿ ಕೆಲಸಕ್ಕಾಗಿ ವೆಬ್ ಸೈಟ್‌ನಲ್ಲಿ ಹುಡುಕುತ್ತಿದ್ದ ಎಂಜಿನಿಯರ್‌ಗೆ ಸೈಬರ್ ಕಳ್ಳರು 40 ಲಕ್ಷ ರೂ. ವಂಚಿಸಿದ್ದಾರೆ. ಮೈಸೂರು ರಸ್ತೆಯ ಟಿಂಬರ್ ಯಾರ್ಡ್‌ನ ನಿವಾಸಿ ಗೌಡ್ರ ನಾಗಪ್ಪ ಬಸಪ್ಪ (61) ವಂಚನೆಗೊಳಗಾದವರು.
ಇಂಗ್ಲೆಂಡ್‌ನಲ್ಲಿ ಕೆಲಸ ಮಾಡಲು ಇಚ್ಛಿಸಿದ್ದ ನಾಗಪ್ಪ ಆ ದೇಶದ ಹೆಸರಿನ ವೆಬ್‌ಸೈಟ್ ವೊಂದರಲ್ಲಿ ಕೆಲಸ ಖಾಲಿ ಇವೆಯೇ ಎಂದು ಪರಿಶೀಲಿಸಿದ್ದರು. ಇದಾದ ಕೆಲ ಹೊತ್ತಿನಲ್ಲೇ ಅಪರಿಚಿತರು ನಾಗಪ್ಪಗೆ ಕರೆ ಮಾಡಿ “ಇಂಗ್ಲೆಂಡ್ ನಲ್ಲಿ ನಿಮಗೆ ಹಾಗೂ ನಿಮ್ಮ ಪುತ್ರನಿಗೆ ಕೆಲಸವಿದೆ. ರೆಸ್ಯೂಮ್ ಕಳುಹಿಸಿ’ ಎಂದು ನಂಬಿಸಿದ್ದರು. ಅದರಂತೆ ನಾಗಪ್ಪ ತಮ್ಮ ರೆಸ್ಯೂಮ್ ಕಳುಹಿಸಿದ್ದರು. ಬಳಿಕ ಕರೆ ಮಾಡಿದ ಅಪರಿಚಿತರು, ತಮಗೆ ಗೊತ್ತಿರುವವರ ಮೂಲಕ ವೀಸಾ ಪಡೆದುಕೊಳ್ಳಿ ಎಂದು ಕಾರ್ತೀಕ್ ಹೆಸರಿನ ಇ-ಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ಕೊಟ್ಟಿದ್ದರು.
ಅದರಂತೆ ಅಪರಿಚಿತರು ಕೊಟ್ಟ ನಂಬರ್‌ಗೆ ಕರೆ ಮಾಡಿದ ನಾಗಪ್ಪ ಈ ಬಗ್ಗೆ ವಿಚಾರಿಸಿದಾಗ, ನಿಮಗೆ, ನಿಮ್ಮ ಮಗನಿಗೆ ಹಾಗೂ ಪತ್ನಿಗೆ ವೀಸಾ ಮಾಡಿಸಿಕೊಡುತ್ತೇವೆ. ಆನ್‌ಲೈನ್‌ನಲ್ಲಿ ಹಣ ಪಾವತಿಸುವಂತೆ ಸೂಚಿಸಿದ್ದರು. ಇದನ್ನು ನಂಬಿದ ನಾಗಪ್ಪ, ಅವರು ಸೂಚಿಸಿದ ಖಾತೆಗೆ 40 ಲಕ್ಷ ರೂ. ಜಮೆ ಮಾಡಿದ್ದರು.
ಬೆಳಕಿಗೆ ಬಂದಿದ್ದು ಹೇಗೆ? : ಈ ನಡುವೆ ಸೆ.19ರಂದು ವೀಸಾ ಸಿದ್ಧವಿದೆ ಮುಂಬೈಗೆ ಹೋಗಿ ಪಡೆಯಿರಿ ಎಂದು ಅಪರಿಚಿತರು ಕರೆ ಮಾಡಿ ಹೇಳಿದ ಮೇರೆಗೆ ನಾಗಪ್ಪ ಬೆಂಗಳೂರಿನಿಂದ ಮುಂಬೈಗೆ ಹೋಗಿ ವಿಚಾರಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಅಪರಿಚಿತರು, ದೆಹಲಿಗೆ ಹೋಗುವಂತೆ ಸೂಚಿಸಿದ್ದರು. ಅದರಂತೆ ದೆಹಲಿಗೆ ಹೋದಾಗ ಇಂಗ್ಲೆಂಡ್ ರಾಣಿ ಎಲಿಜಬೆತ್ ಮೃತಪಟ್ಟ ಹಿನ್ನೆಲೆಯಲ್ಲಿ ಸದ್ಯ ವೀಸಾ ವಿತರಿಸುತ್ತಿಲ್ಲ. ನೀವು ಸೆ.27ಕ್ಕೆ ಬನ್ನಿ ಎಂದು ಹೇಳಿದ್ದರು.
ಈ ಬಗ್ಗೆ ಅನುಮಾನಗೊಂಡ ನಾಗಪ್ಪ ಬೆಂಗಳೂರಿಗೆ ವಾಪಸ್ ಬಂದು ಜೆ.ಪಿ. ನಗರದ ವೀಸಾ ನೀಡುವ ಕಚೇರಿ ಯೊಂದಕ್ಕೆ ಹೋಗಿ ವಿಚಾರಿಸಿದ್ದರು. ಅಲ್ಲಿನ ಸಿಬ್ಬಂದಿ ಇವರು ಕೊಟ್ಟ ಮಾಹಿತಿ ಪರಿಶೀಲಿಸಿದಾಗ ಇದು ಸೈಬರ್ ಕಳ್ಳರ ಕೈಚಳಕ ಎಂಬುದು ಗೊತ್ತಾಗಿದೆ.