Advertisement

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

08:59 AM Nov 18, 2024 | Team Udayavani |

ಬೆಂಗಳೂರು: ವಿದೇಶಕ್ಕೆ ಮಾದಕದ್ರವ್ಯ ಸಾಗಾಟದ ಪ್ರಕರಣದಲ್ಲಿ ಬಂಧಿಸಬೇಕಾಗುತ್ತದೆ ಎಂದು ಬೆದರಿಸಿದಲ್ಲದೆ, ಪೊಲೀಸರ ಸೋಗಿನಲ್ಲಿ ಸಹಾಯ ಮಾಡುವುದಾಗಿ ಮಹಿಳಾ ಟೆಕಿಯೊಬ್ಬರಿಗೆ ಸೈಬರ್‌ ವಂಚಕರು ಬರೋಬ್ಬರಿ 40 ಲಕ್ಷ ರೂ. ವಂಚಿಸಿದ್ದಾರೆ.

Advertisement

ಆರ್‌.ಆರ್‌.ನಗರ ನಿವಾಸಿ ಪ್ರಕೃತಿ ಎಂಬು ವರು ನೀಡಿದ ದೂರಿನ ಮೇರೆಗೆ ಪಶ್ಚಿಮ ವಿಭಾಗದ ಸೆನ್‌ ಠಾಣೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್‌ ದಾಖಲಿಸಿ ಕೊಂಡು, ತನಿಖೆ ಮುಂದುವರಿಸಿದ್ದಾರೆ.

ಏನಿದು ಪ್ರಕರಣ?: ನ.7ರಂದು ಅಪರಿಚಿತ ನಂಬರ್‌ನಿಂದ ದೂರುದಾರ ಯುವತಿಗೆ ಕರೆ ಮಾಡಿದ್ದ ವಂಚಕನೊಬ್ಬ, ಡಿಎಚ್‌ಎಲ್‌ ಕೊರಿಯರ್‌ ಕಂಪನಿಯೊಂದರ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ನಿಮ್ಮ ಹೆಸರಿನಲ್ಲಿ ಮುಂಬೈನಿಂದ ಇರಾನ್‌ಗೆ ಕಳುಹಿಸಿರುವ ಪಾರ್ಸೆಲ್‌ನಲ್ಲಿ ಎಂಡಿಎಂಎ ಸೇರಿ ಇತರೆ ಮಾದಕ ಪದಾರ್ಥಗಳಿವೆ. ನಿಮ್ಮ ವೈಯಕ್ತಿಕ ದಾಖಲಾತಿ ಗಳು ಮತ್ತು ಮೊಬೈಲ್‌ ನಂಬರ್‌ ಕೊರಿಯರ್‌ಗೆ ಲಿಂಕ್‌ ಆಗಿದೆ. ಈ ಕುರಿತು ನಿಮಗೆ ಏನಾದರೂ ಗೊತ್ತಾ? ಎಂದು ಕೇಳಿದ್ದಾನೆ. ದೂರುದಾರ ಯುವತಿ ತನಗೆ ಗೊತ್ತಿಲ್ಲ ಎಂದಾಗ ‘ಮುಂಬೈ ಏರ್‌ ಕಸ್ಟಮ್ಸ್‌ ಕಂಟ್ರೋಲ್‌ ರೂಂಗೆ ಕರೆ ಕನೆಕ್ಟ್ ಮಾಡುತ್ತೇನೆ’ ಎಂದು ಮತ್ತೂಬ್ಬನಿಗೆ ಕರೆ ವರ್ಗಾಯಿಸಿದ್ದಾನೆ. ಏರ್‌ ಕಸ್ಟಮ್ಸ್ ಅಧಿಕಾರಿಯ ಸೋಗಿನಲ್ಲಿ ಮಾತನಾಡಿದ ವಂಚಕ, ದೂರುದಾರಳಿಗೆ ಟೆಲಿಗ್ರಾಂ ಆ್ಯಪ್‌ ಡೌನ್‌ ಲೋಡ್‌ ಮಾಡಿಸಿ ವೀಡಿಯೋ ಕರೆ ಮಾಡಿದ್ದಾನೆ. ನಂತರ ತಾವು 6 ತಿಂಗಳ ಹಿಂದೆ ಬಂಧಿಸಿದ್ದ ಒಬ್ಬ ಕ್ರಿಮಿನಲ್‌ ವ್ಯಕ್ತಿ ಸಾರ್ವಜನಿಕರ ದಾಖಲೆಗಳನ್ನು ಪಡೆದು ಕೊರಿಯರ್‌ ರವಾನೆಗೆ ಬಳಸುತ್ತಿದ್ದ. ನಿಮಗೂ ಸಹ ಹಾಗೆಯೇ ಆಗಿರಬಹುದು. ನಾವು 3 ರೀತಿಯಲ್ಲಿ ತನಿಖೆ ನಡೆಸಿ ನಿಮಗೆ ಪೊಲೀಸ್‌ ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಕೊಡುತ್ತೇವೆ ಎಂದು ನಂಬಿಸಿದ್ದ. ಬಳಿಕ ನಾವು ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಬೇಕು. ಇಲ್ಲವಾದರೆ ಡ್ರಗ್ಸ್‌ ಕೇಸ್‌ನಲ್ಲಿ ಬಂಧಿಸುತ್ತೇವೆ ಎಂದು ಹೆದರಿಸಿದ್ದಾನೆ.

ನಂತರ ದೂರುದಾರರ ವೈಯಕ್ತಿಕ ದಾಖಲೆಗಳು, ಕುಟುಂಬ ಸದಸ್ಯರ ವಿವರ, ಬ್ಯಾಂಕ್‌ ಖಾತೆಯ ವಿವರಗಳನ್ನು ಪಡೆದುಕೊಂಡಿದ್ದು, ಆ ಬಳಿಕ ದೂರುದಾರರಿದ ಆರೋಪಿಗಳ ಮಾತು ನಿಜವೆಂದು ನಂಬಿದ್ದ ದೂರುದಾರ ಯುವತಿ ತನ್ನ ಮೂರು ವಿವಿಧ ಬ್ಯಾಂಕ್‌ ಖಾತೆಗಳಲ್ಲಿದ್ದ ಒಟ್ಟು 40.18 ಲಕ್ಷ ರೂ. ಅನ್ನು ವಂಚಕರು ಹೇಳಿದ ಖಾತೆಗಳಿಗೆ ವರ್ಗಾಯಿಸಿದ್ದರು.

ತನ್ನ ಖಾತೆಗೆ ಹಣ ಮರು ವರ್ಗಾವಣೆಯಾಗದಿದ್ದಾಗ ತಾನು ವಂಚನೆಗೊಳಗಾಗಿರುವುದು ತಿಳಿದ ಯುವತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರು ಪಶ್ಚಿಮ ವಿಭಾಗದ ಸಿಇಎನ್‌ ಪೊಲೀಸರು ತನಿಖೆ ಆರಂಭಿಸಿದ್ದು, ಹಣ ಜಮೆಯಾದ ಖಾತೆಗಳ ವಿವರಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next