ಮಲ್ಪೆ: ಕಳೆದ ಹಲವು ವರ್ಷಗಳಿಂದ ಸೇತುವೆ ಗಾಗಿ ಕೋಡಿಬೆಂಗ್ರೆಯ ಗ್ರಾಮಸ್ಥರು ಜನಪ್ರತಿಧಿಗಳನ್ನು, ಅಧಿಕಾರಿಗಳನ್ನು ಆಗ್ರಹಿಸುತ್ತಲೇ ಬಂದಿದ್ದರೂ, ಇದುವರೆಗೂ ಬೇಡಿಕೆ ಈಡೇರಲಿಲ್ಲ. ಹೀಗಾಗಿ ಸರಕಾರಿ ಕೆಲಸ ಮತ್ತು ಅಗತ್ಯ ಕೆಲಸಕ್ಕಾಗಿ ಸುತ್ತುಬಳಸಿ ಕೋಟದಲ್ಲಿರುವ ಕೋಡಿ ಪಂಚಾಯತ್ ಹೋಗಬೇಕಾದ ಅನಿವಾರ್ಯತೆ ಇಲ್ಲಿನ ಜನರದ್ದಾಗಿದೆ.
ಕೋಡಿಬೆಂಗ್ರೆಯ ನಾಗರಿಕರು ತಮ್ಮ ಪಂಚಾಯತ್ ಅಥವಾ ಗ್ರಾಮದ ಕೇಂದ್ರ ಸ್ಥಾನಕ್ಕೆ ಹೋಗಬೇಕಾದರೆ ಪಡುತೋನ್ಸೆ, ಮೂಡುತೋನ್ಸೆ, ಉಪ್ಪೂರು ಗ್ರಾಮಗಳನ್ನು ದಾಟಿ ಬ್ರಹ್ಮಾವರ, ಸಾಸ್ತಾನ ಪೇಟೆಗೆ ಸುಮಾರು 40 ಕಿ. ಮೀ. ಕ್ರಮಿಸಿ ಬರಬೇಕಾದಂತಹ ಪರಿಸ್ಥಿತಿ ಎದುರಾಗಿದೆ. ವೈದ್ಯರು, ಮಕ್ಕಳು, ರೋಗಿಗಳು, ಗರ್ಭಿಣಿಯರು ಆಸ್ಪತ್ರೆಗೆ ಹೋಗಬೇಕಾದರೆ ದೂರದ ಉಡುಪಿಗೆ ಹೋಗಬೇಕು. ಶಾಲಾ ಕಾಲೇಜುಗಳಿಗೆ ಕೂಡ ಕಲ್ಯಾಣಪುರ ಅಥವಾ ಉಡುಪಿಯನ್ನು ಆಶ್ರಯಿಸಬೇಕು.
ಈ ಪ್ರದೇಶ 2.5 ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ. ಒಟ್ಟು 275 ಕುಟುಂಬಗಳಿವೆ. ಶೇ. 80 ರಷ್ಟು ಜನರ ಮುಖ್ಯ ಕಸುಬು ಮೀನುಗಾರಿಕೆ. ವಿದ್ಯುತ್, ಕುಡಿಯುವ ನೀರು ಸರಾಬರಾಜು ಕೆಮ್ಮಣ್ಣು ಗ್ರಾಮದ ಮೂಲಕ ಇದೆ. ಪೊಲೀಸ್ ಠಾಣೆ ಮಲ್ಪೆ ವ್ಯಾಪ್ತಿಗೊಳಪಟ್ಟಿದೆ. ರಸ್ತೆ ಮೂಲಕ ವಾಹನದಲ್ಲಿ ಹೋಗುವುದಾದರೆ 9 ಗ್ರಾಮಗಳನ್ನು ದಾಟಿ ಹೋಗಬೇಕು. ಇಲ್ಲಿ ಸೇತುವೆ ನಿರ್ಮಾಣವಾದರೆ ಈ ಪ್ರದೇಶವು ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತದೆ. ಇದೊಂದು ಮೀನುಗಾರಿಕಾ ಬಂದರು ಪ್ರದೇಶವಾಗಿದ್ದು, ಈ ಸೇತುವೆ ನಿರ್ಮಾಣವಾದಲ್ಲಿ ಹೆಜಮಾಡಿಯಿಂದ ಕಾಪು, ಮಲ್ಪೆ, ಕುಂದಾಪುರ, ಗಂಗೊಳ್ಳಿ ಬಂದರುಗಳನ್ನು ಜೋಡಿಸಿದಂತಾಗಿ ಮೀನುಗಾರಿಕೆಯ ಅಭಿವೃದ್ಧಿಯಲ್ಲಿ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈಗಿನ ಕರಾವಳಿ ಬೈಪಾಸ್, ಸಂತೆಕಟ್ಟೆಗಳಲ್ಲಿನ ವಾಹನ ದಟ್ಟಣೆಗಳನ್ನು ಕಡಿಮೆ ಗೊಳಿಸುತ್ತದೆ. ವಾಹನಕ್ಕೆ ತಗಲುವ ಇಂಧನದ ಖರ್ಚು ಹಾಗೂ ಸಮಯದ ಉಳಿತಾಯವಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಸುಂದರ ತಾಣ, ಮೂಲ ಸೌಕರ್ಯ ಇಲ್ಲ
ಕೋಡಿ ಬೆಂಗ್ರೆ ತುದಿಯಲ್ಲಿ ರಮಣೀಯವಾದ ಡೆಲ್ಟಾ ಬೀಚ್ ಇದೆ. ಸಮುದ್ರ ಮತ್ತು ನದಿಗಳು ಸೇರುವ ಮನಮೋಹಕವಾದ ತ್ರಿವೇಣಿ ಸಂಗಮವಿದೆ. ಪ್ರತಿನಿತ್ಯ ಇಲ್ಲಿ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಇಲ್ಲಿ ಯಾವುದೇ ಮೂಲ ಸೌಕರ್ಯಗಳು ಇಲ್ಲ. ಹಂಗಾರಕಟ್ಟೆ ಬೆಂಗ್ರೆಗೆ ಸೇತುವೆಯನ್ನು ನಿರ್ಮಾಣ ಮಾಡಿದರೆ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ದಿ ಪಡಿಸಬಹುದು. ಮಾತ್ರವಲ್ಲದೆ ಮೀನುಗಾರಿಕೆ ಉದ್ಯಮದಲ್ಲಿ ತೊಡಗಿಸಿಕೊಂಡ ಕೋಟ, ಕುಂದಾಪುರ, ಕೋಡಿ, ಸಾಸ್ತಾನ ಜನರಿಗೂ ಅನುಕೂಲವಾಗಲಿದೆ.
ಸಿಎಂಗೆ ಮನವಿ
ಮುಖವಾಗಿ ಅರಬ್ಬಿ ಸಮುದ್ರದಲ್ಲಿ ಆಗಾಗ ಉಂಟಾಗುವ ಚಂಡಮಾರುತ, ಸುನಾಮಿಯಂತಹ ಪ್ರಕೃತಿ ವಿಕೋಪದ ಭೀಕರ ಪರಿಸ್ಥಿತಿಯಲ್ಲಿ ಪಡುತೋನ್ಸೆಯ ಮೂಲಕ ಸುರಕ್ಷಿತ ಸ್ಥಳ ತಲುಪಲು ಸುಮಾರು 10ಕಿ. ಮೀ. ಕ್ರಮಿಸಬೇಕಾಗುತ್ತದೆ. ಈ ಸೇತುವೆ ನಿರ್ಮಾಣವಾದಲ್ಲಿ ಕೇವಲ ಒಂದು ಕಿ. ಮೀ. ಕ್ರಮಿಸಿ ಸುರಕ್ಷಿತ ಸ್ಥಳ ತಲುಪಿ ಜೀವ ರಕ್ಷಣೆ ಮಾಡಲು ಅನುಕೂಲವಾಗುತ್ತದೆ. ಗ್ರಾಮಸ್ಥರು ಕೊನೆಯದಾಗಿ ಸೇತುವೆ ನಿರ್ಮಿಸಿಕೊಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
-ನಾಗರಾಜ್ ಬಿ. ಕುಂದರ್, ಕೋಡಿಬೆಂಗ್ರೆ, ಸ್ಥಳೀಯರು
ಸೇತುವೆ ತುರ್ತು ಅಗತ್ಯ
ಪ್ರಮುಖವಾಗಿ ಗರ್ಭಿಣಿಯರು ಮತ್ತು ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ವೃದ್ಧರು, ಅಶಕ್ತರಿಗೆ ಸರಕಾರದ ಸವಲತ್ತುಗಳನ್ನು ಪಡೆಯುವುದಕ್ಕಾಗಿ ಪಂಚಾಯತ್‌ಗೆ ಭೇಟಿ ಕೊಡುವುದು ಕಷ್ಟ ಸಾಧ್ಯವಾಗುತ್ತಿದೆ. ಕೋಡಿಬೆಂಗ್ರೆ ಹಾಗೂ ಹಂಗಾರ್‌ಕಟ್ಟೆಯ ಮಧ್ಯೆ ಸೇತುವೆ ನಿರ್ಮಾಣವಾದರೆ ಕೇವಲ 1ರಿಂದ 2 ಕಿ.ಮೀ. ಹೋದರೆ ಜನರಿಗೆ ಎಲ್ಲ ಸೌಲಭ್ಯವೂ ದೊರಕುತ್ತದೆ.
-ಮನೋಹರ್ ಕುಂದರ್, ಕೋಡಿಬೆಂಗ್ರೆ
ನಟರಾಜ್ ಮಲ್ಪೆ