ಫನಂಪೆನ್ಹ್ : ಸುಮಾರು 40 ಮೊಸಳೆಗಳು ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ, ತಿಂದು ಹಾಕಿದ ಭಯಾನಕ ಘಟನೆ ಕಾಂಬೋಡಿಯದಲ್ಲಿ ಶುಕ್ರವಾರ ನಡೆದಿದೆ. ಲುವಾನ್ ನಾಮ್ (72) ಮೃತಪಟ್ಟವರು. ಮೃತನ ಕುಟುಂಬ ಸೀಯೆಮ್ ರೀಪ್‌ನಲ್ಲಿ ಮೊಸಳೆ ಸಾಕಾಣಿಕೆ ಕೇಂದ್ರ ನಡೆಸುತ್ತಿದೆ. ಲುವಾನ್ ಅವರು ಆಕಸ್ಮಿಕವಾಗಿ ಮೊಸಳೆಗಳಿರುವ ಸಂಕೀರ್ಣದ ಒಳಗೆ ಆಯತಪ್ಪಿ ಬಿದ್ದಿದ್ದರಿಂದ ಅವುಗಳಿಗೆ ಆಹಾರವಾಗಿದ್ದಾರೆ.
ಮೊಟ್ಟೆ ಇರಿಸಿದ್ದ ಮೊಸಳೆಯನ್ನು ಹೊರಗೆ ಕಳುಹಿಸಲು ಲುವಾನ್ ಪ್ರಯತ್ನಿಸುತ್ತಿದ್ದರು. ಕೋಲಿನಿಂದ ಮೊಸಳೆಯನ್ನು ಬೆದರಿಸಲು ಮುಂದಾಗಿದ್ದರು. ಆದರೆ ಮೊಸಳೆ ಕೋಲನ್ನು ಗಟ್ಟಿಯಾಗಿ ಕಚ್ಚಿ ಹಿಡಿದು ಬಲವಾಗಿ ಎಳೆದಿದೆ. ಇದರಿಂದ ಕೋಲಿನ ಸಮೇತ ಲುವಾನ್ ಮೊಸಳೆಗಳು ಇರುವ ಜಾಗದಲ್ಲಿ ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಸುಮಾರು 40 ಮೊಸಳೆಗಳ ಹಿಂಡು, ಅವರ ಮೇಲೆ ದಾಳಿ ನಡೆಸಿದೆ. ಮೊದಲು ಕೈಗಳನ್ನು ಭಕ್ಷಿಸಿದ ಮೊಸಳೆಗಳು, ನಂತರ ಇಡೀ ದೇಹವನ್ನು ತಿಂದು ಹಾಕಿದೆ. ಆವರಣದಲ್ಲಿ ಎಲ್ಲೆಡೆ ರಕ್ತದ ಕಲೆಗಳು ಉಂಟಾಗಿವೆ. ಇದೇ ಗ್ರಾಮದಲ್ಲಿರುವ ಮತ್ತೂಂದು ಮೊಸಳೆ ಸಾಕಾಣಿಕೆ ಕೇಂದ್ರವೊಂದರಲ್ಲಿ 2019ರಲ್ಲಿ ಎರಡು ವರ್ಷದ ಪುಟ್ಟ ಬಾಲಕಿಯನ್ನು ಮೊಸಳೆಗಳು ತಿಂದು ಹಾಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.