ಬೆಂಗಳೂರು: ದೇಶದಲ್ಲಿ ಬಳಕೆಯಾಗುವ ಒಟ್ಟಾರೆ ಇಂಧನದಲ್ಲಿ 2030ರ ವೇಳೆಗೆ ಶೇ. 40 ಮಾಲಿನ್ಯ ಮುಕ್ತ ಇಂಧನವಾಗಿರಬೇಕು. ಇದು ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷವರ್ಧನ್ ತಿಳಿಸಿದರು.
ನಗರದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ ಸೋಮವಾರ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ಅಂತಾ ಶಾಸ್ತ್ರೀಯ ಶಕ್ತಿ ಸಂಶೋಧನ ಕೇಂದ್ರ ಸಮರ್ಪಣೆ ಮತ್ತು ನೂತನ ರಾಷ್ಟ್ರೀಯ ಶುದ್ಧ ಕಲ್ಲಿದ್ದಲು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (ನ್ಯಾಷನಲ್ ಸೆಂಟರ್ ಫಾರ್ ಕ್ಲೀನ್ ಕೋಲ್ ರಿಸರ್ಚ್ ಆಂಡ್ ಡೆವಲಪ್‌ಮೆಂಟ್) ಉದ್ಘಾಟಿಸಿ ಮಾತನಾಡಿದರು.
2022ರ ವೇಳೆಗೆ ದೇಶದಲ್ಲಿ 175 ಗಿಗಾಬೈಟ್‌ನಷ್ಟು ಇಂಧನವು ಮಾಲಿನ್ಯ ಮುಕ್ತ (ಕ್ಲೀನ್ ಎನರ್ಜಿ)ವಾಗಿರಬೇಕು ಎನ್ನುವುದು ಪ್ರಧಾನಿ ಮೋದಿ ಅವರ ಗುರಿ. ಅಲ್ಲದೆ, 2030ಕ್ಕೆ ಒಟ್ಟಾರೆ ಇಂಧನ ಬಳಕೆಯಲ್ಲಿ ಶೇ. 40ರಷ್ಟು ಕ್ಲೀನ್ ಎನರ್ಜಿ ಆಗಿರಬೇಕು. ಇದು ಸೌರಶಕ್ತಿ, ಪವನ ವಿದ್ಯುತ್, ನವೀಕರಿಸಿದ ಇಂಧನ ಸೇರಿ ಹಲವು ಇಂಧನ ಮೂಲಗಳನ್ನು ಒಳಗೊಂಡಿರಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.
ಶೇ. 35ರಷ್ಟು ಮಾಲಿನ್ಯ ತಗ್ಗಿಸುವ ಗುರಿ: ದೇಶದಲ್ಲಿ ವಾಯುಮಾಲಿನ್ಯ ಪ್ರಮಾಣವನ್ನು 2022ರ ವೇಳೆಗೆ ಶೇ. 20ರಿಂದ 22ರಷ್ಟು ಹಾಗೂ 2030ಕ್ಕೆ ಶೇ. 32ರಿಂದ 35ರಷ್ಟು ತಗ್ಗಿಸುವ ಗುರಿ ಇದೆ. ಸದ್ಯ ಮಾಲಿನ್ಯ ರಹಿತ ಇಂಧನ ಬಳಕೆ ಮತ್ತು ವಾಯುಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿದ್ದು, ಜಾಗತಿಕ ಮಟ್ಟದಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದರು.
ಇಂಧನ ಕಾರ್ಯಕ್ಷಮತೆ ವೃದ್ಧಿಸುವ ಕಾರ್ಯಕ್ರಮದಡಿ ಸರ್ಕಾರ ಸಾಮಾನ್ಯ ವಿದ್ಯುದ್ದೀಪಗಳ ಬದಲಿಗೆ ಸುಮಾರು 330 ಮಿಲಿಯನ್ ಎಲ್‌ಇಡಿಗಳನ್ನು ದೇಶಾದ್ಯಂತ ಅಳವಡಿಸಿದೆ. ಇದರಿಂದ ಪರೋಕ್ಷವಾಗಿ ವಾರ್ಷಿಕ ಶೇ. 32ರಷ್ಟು ಕಾಬನ್ ಡೈಆಕ್ಸೆ„ಡ್ ಪ್ರಮಾಣ ತಗ್ಗಿದೆ. ಸೋಲಾರ ಸ್ಟಡಿ ಲ್ಯಾಂಪ್ ಯೋಜನೆ ಅಡಿ ಏಳು ದಶಲಕ್ಷ ವಿದ್ಯಾರ್ಥಿಗಳಿಗೆ ಫಲಾನುಭವಿಗಳಾಗಿದ್ದಾರೆ. ಅದೇ ರೀತಿ, ಉಜ್ವಲ ಯೋಜನೆಯಲ್ಲಿ 60 ದಶಲಕ್ಷ ಸಂಪರ್ಕಗಳನ್ನು ನೀಡಲಾಗಿದೆ. ಆಯುಷ್ಮಾನ್ ಭಾರತ ಯೋಜನೆಯಿಂದ 18 ಸಾವಿರ ಆಸ್ಪತ್ರೆಗಳಲ್ಲಿ 50 ಲಕ್ಷ ಫಲಾನುಭವಿಗಳು ಸೌಲಭ್ಯ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವರೂ ಆದ ಡಾ.ಹರ್ಷವರ್ಧನ್ ಮಾಹಿತಿ ನೀಡಿದರು.
ಏನಿದು ಎನ್‌ಸಿಸಿಸಿಆರ್‌ಆಂಡ್‌ಡಿ?: ನ್ಯಾಷನಲ್ ಸೆಂಟರ್ ಫಾರ್ ಕ್ಲೀನ್ ಕೋಲ್ ರಿಸರ್ಚ್ ಆಂಡ್ ಡೆವೆಲಪ್‌ಮೆಂಟ್ (ಎನ್‌ಸಿಸಿಸಿಆರ್‌ಆಂಡ್‌ಡಿ) ಮುಖ್ಯವಾಗಿ ಶಾಖೋತ್ಪನ್ನ ಘಟಕಗಳ ಕಾರ್ಯಕ್ಷಮತೆ ವೃದ್ಧಿಸುವ ನಿಟ್ಟಿನಲ್ಲಿ ನಡೆಸುವ ಸಂಶೋಧನೆಯಾಗಿದೆ. ಅಂದರೆ, ಒಂದು ಕೆಜಿ ಕಲ್ಲಿದ್ದಲು ಉರಿಸಿದರೆ, ಅದರ ಬಿಸಿಹಬೆಯ ಒತ್ತಡದಿಂದ ಇಂತಿಷ್ಟು ವಿದ್ಯುತ್ ಉತ್ಪಾದಿಸಬಹುದು ಎಂಬ ಲೆಕ್ಕಾಚಾರ ಇರುತ್ತದೆ. ಅದೇ ಪ್ರಮಾಣದ ಕಲ್ಲಿದ್ದಲಿನಲ್ಲಿ ಇನ್ನೂ ಹೆಚ್ಚು ವಿದ್ಯುತ್ ಉತ್ಪಾದಿಸುವ ನಿಟ್ಟಿನಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ಎನ್‌ಸಿಸಿಸಿಆರ್‌ಆಂಡ್‌ಡಿ ಸಂಶೋಧನೆ ನಡೆಸಲಿದೆ. ಕನಿಷ್ಠ ಶೇ. 15- 20 ಕಾರ್ಯಕ್ಷಮತೆ ವೃದ್ಧಿಸುವ ಗುರಿ ಈ ಕೇಂದ್ರ ಹೊಂದಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದರು.